Advertisement

ವಿಶ್ವಸಂಸ್ಥೆಯಲ್ಲಿ 55 ದೇಶಗಳ ಬೆಂಬಲ

02:48 AM Jun 27, 2019 | mahesh |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಶ್ರಮಿಸುತ್ತಿರುವಂತೆಯೇ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಜಯ ಲಭಿಸಿದೆ. ಎರಡು ವರ್ಷ ಅವಧಿಯ ಶಾಶ್ವತವಲ್ಲದ ಸದಸ್ಯತ್ವ ಪಡೆದುಕೊಳ್ಳುವ ನಿಟ್ಟಿನಲ್ಲಿ ಏಷ್ಯಾ-ಪೆಸಿಫಿಕ್‌ ವಲಯದ 55 ರಾಷ್ಟ್ರಗಳು ಬುಧವಾರ ಬೆಂಬಲ ವ್ಯಕ್ತಪಡಿಸಿವೆ. ಇದಕ್ಕೆ ಪಾಕಿಸ್ಥಾನ ಮತ್ತು ಚೀನ ಆಕ್ಷೇಪ ಮಾಡಿವೆ. ಈ ಸದಸ್ಯತ್ವವನ್ನು 2021-2022ನೇ ಸಾಲಿಗೆ ನೀಡಲಾಗುತ್ತದೆ. ಮುಂದಿನ ವರ್ಷದ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ಶಾಶ್ವತವಲ್ಲದ ಸದಸ್ಯ ಸ್ಥಾನಗಳು ಇವೆ.

Advertisement

ಭಾರತಕ್ಕೆ ಒದಗಿ ಬಂದ ಮಹತ್ವದ ವಿಜಯದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ರಾಯಭಾರೀ ಸಯ್ಯದ್‌ ಅಕ್ಬರುದ್ದೀನ್‌ ಟ್ವೀಟ್ ಮಾಡಿದ್ದಾರೆ. ‘ 2021-2022ನೇ ಸಾಲಿನಿಂದ ಎರಡು ವರ್ಷಗಳವರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ಸ್ಥಾನಕ್ಕೆ ಏಷ್ಯಾ-ಪೆಸಿಫಿಕ್‌ ವಲಯದ 55 ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಇದೊಂದು ಐತಿಹಾಸಿಕ ಹಂತ’ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಎಲ್ಲಾ ರಾಷ್ಟ್ರಗಳ ಪ್ರತಿನಿಧಿಗಳಿಗೆ ಅಕ್ಬರುದ್ದೀನ್‌ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಇಂಡೋನೇಷ್ಯಾ, ಇರಾನ್‌, ಜಪಾನ್‌, ಕುವೈತ್‌, ಕಿರ್ಗಿಸ್ತಾನ, ಮಲೇಷ್ಯಾ, ಮಾಲ್ಡೀವ್ಸ್‌, ಮ್ಯಾನ್ಮಾರ್‌, ನೇಪಾಳ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಸಿರಿಯಾ, ಟರ್ಕಿ, ಯುಎಇ ಮತ್ತು ವಿಯೆಟ್ನಾಂ ಸೇರಿದಂತೆ ಹಲವು ದೇಶಗಳು ಭಾರತ ಉಮೇದುವಾರಿಕೆಗೆ ಬೆಂಬಲಿಸಿವೆ.

193 ರಾಷ್ಟ್ರಗಳ ಸದಸ್ಯತ್ವ ಇರುವ ಸಾಮಾನ್ಯ ಸಭೆ ಪ್ರತಿ ವರ್ಷ 2 ವರ್ಷಗಳ ಅವಧಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳನ್ನು ಆಯ್ಕೆ ಮಾಡುತ್ತದೆ. ಒಟ್ಟು ಹತ್ತು ಸ್ಥಾನಗಳು ಅದರಲ್ಲಿವೆ. ಅವುಗಳನ್ನು ಪ್ರಾದೇಶಿಕವಾಗಿ ಹಂಚಲಾಗಿದೆ. ಅಂದರೆ ಐದು ಸ್ಥಾನಗಳನ್ನು ಆಫ್ರಿಕ ಮತ್ತು ಏಷ್ಯಾ ರಾಷ್ಟ್ರಗಳಿಗೆ, ಒಂದು ಸ್ಥಾನವನ್ನು ಈಶಾನ್ಯ ಐರೋಪ್ಯ ರಾಷ್ಟ್ರಗಳಿಗೆ, ಎರಡು ಸ್ಥಾನಗಳನ್ನು ಲ್ಯಾಟಿನ್‌ ಅಮೆರಿಕ ಮತ್ತು ಕೆರೆಬಿಯನ್‌ ದ್ವೀಪಗಳಿಗೆ, ಎರಡನ್ನು ಐರೋಪ್ಯ ಮತ್ತು 1 ಸ್ಥಾನವನ್ನು ಇತರ ರಾಷ್ಟ್ರಗಳಿಗೆ ನೀಡಲಾಗಿದೆ.

ಹಿಂದಿನ ಅವಧಿಯಲ್ಲಿ: ಭಾರತ ಈ ಹುದ್ದೆಯನ್ನು 1950ರಿಂದ ಹಲವು ಬಾರಿ ವಹಿಸಿತ್ತು. ಹಾಲಿ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ 2011, 2012ರಲ್ಲಿ ಭಾರತದ ಪ್ರತಿನಿಧಿಯಾಗಿ ತೆರಳಿದ್ದರು.

Advertisement

ಈ ತಿಂಗಳ ಆರಂಭದಲ್ಲಿ ಎಸ್ಟೋನಿಯಾ, ನೈಗರ್‌, ಸೇಂಟ್ ವಿನ್ಸೆಂಟ್ ಮತ್ತು ಗ್ರೆನೇಡಿನ್ಸ್‌, ಟ್ಯುನೀಷ್ಯಾ ಮತ್ತು ವಿಯೆಟ್ನಾಂ 2020ರ ಜನವರಿಯಿಂದ ಶುರುವಾಗುವ 2 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದವು. ಸದ್ಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳ ಹುದ್ದೆಗಳಲ್ಲಿ ಬೆಲ್ಜಿಯಂ, ಕುವೈತ್‌, ಪೆರು, ಪೋಲಂಡ್‌ ಮತ್ತು ದಕ್ಷಿಣ ಆಫ್ರಿಕಾ ಇವೆ.

Advertisement

Udayavani is now on Telegram. Click here to join our channel and stay updated with the latest news.

Next