ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಆಶೀರ್ವಾದ ಮಾಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮನವಿ ಮಾಡಿದರು.
ನಿಪ್ಪಾಣಿ ಹೊರವಲಯದಲ್ಲಿರುವ ಬ್ರಹ್ಮನಾಥ ಭವನದಲ್ಲಿ ಶುಕ್ರವಾರ ನಡೆದ ನಿಪ್ಪಾಣಿ ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷಾತೀತವಾಗಿ ನನಗೆ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದು, ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಪರಿಷತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಆಸೆ ಹೊಂದಿದ್ದೇನೆ. ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿದರೆ ಖಂಡಿತವಾಗಿಯೂ ಗ್ರಾಮ ಪಂಚಾಯತಿಗಳಿಗಿರುವ ಅಧಿಕಾರ ಹಾಗೂ ಪಂಚಾಯತ ಸದಸ್ಯರಿಗೆ ಇರುವ ಸ್ಥಾನಮಾನಗಳನ್ನು ಸದುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.
ಚುನಾವಣೆ ಬಂದ ಮೇಲೆ ಕೆಲ ಅಭ್ಯರ್ಥಿಗಳು ಸದಸ್ಯರ ಮನೆ ಬಾಗಿಲಿಗೆ ಬಂದು ಹೋಗುತ್ತಿದ್ದಾರೆ. ಆಯ್ಕೆಯಾದ ಮೇಲೆ ಹಿಂತಿರುಗಿಯೂ ನೋಡುವುದಿಲ್ಲ. ಮೇಲಾಗಿ ಮತದಾರರಿಗೆ ಸಾಕಷ್ಟು ಆಮಿಷಗಳನ್ನು ಸಹ ಒಡ್ಡುತ್ತಿದ್ದಾರೆ. ಆದರೆ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಪಂಚಾಯತ್ ಸದಸ್ಯರಿಗೆ ಎಲ್ಲ ರೀತಿಯ ಸ್ಥಾನಮಾನಗಳನ್ನು ಕಲ್ಪಿಸಿಕೊಡಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಕಚೇರಿ ಬಾಗಿಲು ಸದಾ ತೆರೆದಿರುತ್ತದೆ ಎಂದು ಲಖನ್ ಜಾರಕಿಹೊಳಿ ಹೇಳಿದರು.
ಯುವ ಮುಖಂಡ ಉತ್ತಮ ಪಾಟೀಲ ಮಾತನಾಡಿ, ಜಾರಕಿಹೊಳಿ ಸಹೋದರರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಜಾತ್ಯತೀತವಾಗಿ ಎಲ್ಲ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಗಳನ್ನು ಬೆಳೆಸುತ್ತಿದ್ದಾರೆ. ಈಗ ಲಖನ್ ಜಾರಕಿಹೊಳಿ ಅವರನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡುವ ಮೂಲಕ ಸಹೋದರರ ಕೈ ಬಲಪಡಿಸಬೇಕು ಎಂದರು.
ಜಯವಂತ ಕಾಂಬಳೆ, ವಿಲಾಸ ಗಾಡಿವಡ್ಡರ, ಅಭಿನಂದನ ಪಾಟೀಲ, ದಲಿತ ಮುಖಂಡ ಅಶೋಕ ಅಸೂಧೆ, ಚೇತನ ಸ್ವಾಮಿ, ಸಚೀನ ಖೋತ್, ಸುನೀಲ ಮಹಾಕಾಳಿ, ಇಂದ್ರಜೀತ್ ಸೋಳಾಂಕುರೆ, ಸಂಜಯ ಕಾಗೆ, ತಾನಾಜಿ ಚೌಗಲೆ, ಉಮೇಶ ಪಾಟೀಲ ಉಪಸ್ಥಿತರಿದ್ದರು.