Advertisement

ಈ ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ಕತ್ತೆಗಳೇ ಆಸರೆ!

03:45 AM Mar 25, 2017 | Team Udayavani |

ಚಿಂಚೋಳಿ: ಗ್ರಾಮದ ಒಟ್ಟು ಜನಸಂಖ್ಯೆ 1146, ಆದರೆ ಮತದಾರರ ಸಂಖ್ಯೆ 1265.  200 ಮನೆಗಳಿದ್ದರೂ ವಿದ್ಯುತ್‌ ಇಲ್ಲದೆ ಕತ್ತಲ ಬದುಕು, ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ದಿನಂಪ್ರತಿ ತಿರುಗಾಡಲು ಕತ್ತೆಗಳ ಆಸರೆಯೇ ಇವರಿಗೆ ಅನಿವಾರ್ಯ.

Advertisement

– ಇದು ತಾಲೂಕಿನ ಕೋಡ್ಲಿ ಗ್ರಾಪಂ ವ್ಯಾಪ್ತಿಯ ಸುಂಠಾಣ ದುಸ್ಥಿತಿ.ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷ  ಕಳೆದರೂ ಸುಂಠಾಣ ಮೂಲಸೌಲಭ್ಯ ವಂಚಿತ ಕುಗ್ರಾಮವಾಗಿದೆ. ಗ್ರಾಮದ ಓಣಿಗಳಲ್ಲಿ ರಸ್ತೆಯಿಲ್ಲದ ಕಾರಣ ಜನರು ದಿನನಿತ್ಯ ಕಲ್ಲು ಗುಂಡುಗಳ ಮಧ್ಯೆ ತಿರುಗಾಡಬೇಕಾಗಿದೆ. ಆಯತಪ್ಪಿ ಬಿದ್ದರೆ ಕೈಕಾಲು ಮುರಿಯುವುದು ನಿಶ್ಚಿತ. ಹಾಗಾಗಿ ಜನರು ರಾತ್ರಿ, ಹಗಲಿನಲ್ಲಿ ಗೋಡೆಗಳ ಆಸರೆಯಿಂದಲೇ ತಿರುಗಾಡಬೇಕು. ಒಬ್ಬರಿಗೊಬ್ಬರು ಕೈ ಹಿಡಿದು ನಡೆಯಬೇಕು!

ಗ್ರಾಮದ ಒಟ್ಟು ಜನಸಂಖ್ಯೆ1146 ಇದ್ದರೆ, ಮತದಾರರ ಸಂಖ್ಯೆ ಮಾತ್ರ  1265 ಇದೆ! ಇದು ಹೇಗಾಯಿತೆಂದು ಅಧಿಕಾರಿಗಳೇ ಹೇಳಬೇಕಷ್ಟೇ. ಬೇಸಿಗೆ ಹಾಗೂ ಗ್ರಾಮದ ಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ವಿದ್ಯುತ್‌ ಕಂಬಗಳಿಗೆ ಬೀದಿ ದೀಪ ಅಳವಡಿಸುತ್ತಾರೆ. ಅವು ಕೆಟ್ಟರೆ ದುರಸ್ತಿ ಮಾಡಿಸುವುದಿಲ್ಲ. ಹೀಗಾಗಿ, ಕತ್ತಲೆಯಲ್ಲಿ ತಿರುಗಾಟ ಇಲ್ಲಿ ಅನಿವಾರ್ಯವಾಗಿದೆ.

ಗ್ರಾಮಸ್ಥರು ತಮ್ಮ ಮನೆಗಳನ್ನು ಗುಡ್ಡದ ಮೇಲೆ ನಿರ್ಮಿಸಿಕೊಂಡಿದ್ದು.  ಮನೆಗಳಿಗೆ ಹೋಗಬೇಕಾದರೆ ಕಲ್ಲುಗುಂಡುಗಳ ರಸ್ತೆ ಮೇಲೆಯೇ ತೆರಳಬೇಕು. ರಾತ್ರಿ ಹೊತ್ತಲ್ಲಿ ಇಲ್ಲಿ ತಿರುಗಾಡುವುದು ಕಷ್ಟ. ಮಕ್ಕಳು, ವೃದ್ಧರು  ಹಾಗೂ ಮಹಿಳೆಯರು ಈ ದುರ್ಗಮ ದಾರಿಯಲ್ಲಿ ಅಡ್ಡಾಡುವಾಗ ಕಲ್ಲುಗಳು ಕಾಲಿಗೆ ಬಡಿದು ಗಾಯ ಮಾಡಿಕೊಂಡಿದ್ದಾರೆ. ಎಡವಿ ಬೀಳುವವರಿಗಂತೂ ಲೆಕ್ಕವೇ ಇಲ್ಲ.

ಇಲ್ಲಗಳೇ ಎಲ್ಲ: ತಾಲೂಕಿನ ಅನೇಕ ಗ್ರಾಮಗಳು/ತಾಂಡಾಗಳು ಸರಕಾರಿ ಯೋಜನೆಗಳಿಂದ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಕಂಡಿವೆ. ಆದರೆ ಸುಂಠಾಣ ಗ್ರಾಮಕ್ಕೆ ಸಿಮೆಂಟ್‌ ರಸ್ತೆ, ಶೌಚಾಲಯಗಳಿಲ್ಲ, ಬಡವರಿಗೆ ಮನೆಗಳಿಲ್ಲ, ಚರಂಡಿ ವ್ಯವಸ್ಥೆಯಿಲ್ಲ. ರೈತರ ಹೊಲಗಳಿಗೆ ಹೋಗಲು ಹಾದಿ ಇಲ್ಲ. ಕಲ್ಲು ಗುಡ್ಡಗಳ ಮೇಲೆ ಇರುವ ಜಮೀನುಗಳಿಗೆ ಹೋಗಲು ರಸ್ತೆಗಳಿಲ್ಲ. ಇವರ ದಿನನಿತ್ಯದ ಬದುಕಿಗೆ ಕತ್ತೆಗಳೇ ಆಸರೆಯಾಗಿವೆ.

Advertisement

“ಉದಯವಾಣಿ’ ಈ ಹಿಂದೆ ಗ್ರಾಮದ ದುಸ್ಥಿತಿ ಬಗ್ಗೆ ವರದಿ ಮಾಡಿದ್ದನ್ನು ಗಮನಿಸಿದ ಬಳಿಕ ಎಚ್ಚೆತ್ತ ಸರಕಾರ ಗ್ರಾಮದ ಸಮೀಪ ಬಸ್‌ ಬರುವಂತೆ ಮಾಡಿದೆ. ಆದರೆ, ಕಲ್ಲುಗಳ ದಾರಿಯಲ್ಲಿ 200 ಅಡಿ ಏರಿ – ಇಳಿಯುವ ಸಂಕಷ್ಟ ಮಾತ್ರ ತಪ್ಪಿಲ್ಲ. ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ  ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಲು ಸುಂಠಾಣ ಗ್ರಾಮಸ್ಥರಾದ ಚಾಂದಪಾಶಾ ಮೌಜನ್‌, ಪ್ರಕಾಶ ಪಾಟೀಲ, ಹಣಮಂತ ದೊಡ್ಡಮನಿ, ಮಂಜುನಾಥ ಕೇಶಟ್ಟಿ ನಿರ್ಧರಿಸಿದ್ದಾರೆ.

ನಾಲ್ಕು ಬಾರಿ ಚುನಾವಣೆ ಬಹಿಷ್ಕಾರ
ನಾಲ್ಕು ಬಾರಿ ಗ್ರಾಪಂ ಪಂಚಾಯತ್‌ ಚುನಾವಣೆಗೆ ಬಹಿಷ್ಕಾರ ಹಾಕಿದ್ದೇವೆ. ಹೀಗಾಗಿ ಗ್ರಾಮಕ್ಕೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬಡವರಿಗೆ ಮನೆಗಳನ್ನು ಕೊಟ್ಟಿಲ್ಲ, ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನೀಡಿಲ್ಲ. ಗ್ರಾಮಕ್ಕೆ ಐವರು ಗ್ರಾಪಂ ಸದಸ್ಯರು ಬೇಕು. ಆದರೆ ಎರಡು ಸದಸ್ಯ ಸ್ಥಾನ ಮಾತ್ರ ನೀಡಲಾಗಿದೆ. ಇದರಿಂದಾಗಿ ನಾವು ಮತದಾನ ಬಹಿಷ್ಕಾರ ಮಾಡಿದ್ದೇವೆ.

– ಹಣಮಂತ ದೊಡ್ಮನಿ, ಸುಭಾಶ ಹಿಂದಿನಮನಿ, ಗ್ರಾಮದ ಮುಖಂಡರು

– ಶಾಮರಾವ ಚಿಂಚೋಳಿ

Advertisement

Udayavani is now on Telegram. Click here to join our channel and stay updated with the latest news.

Next