Advertisement

ಸ್ಟಾರ್ ಬೆನ್ನು ತಟ್ಟಿದ್ದಾಯ್ತು, ನೀವ್ಯಾಕೆ ತಡ ಮಾಡ್ತೀರಿ?

10:18 AM Feb 15, 2020 | sudhir |

“ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ….’

Advertisement

-ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌ ಹೀಗೆ ಖಡಕ್‌ ಆಗಿ ಹೇಳಿದ್ದರು. ಅದಕ್ಕೆ ಕಾರಣ, ಪರಭಾಷಾ ಸಿನಿಮಾಗಳನ್ನು ಹೊಗಳುವ ಮಂದಿ ಕನ್ನಡ ಸಿನಿಮಾಗಳನ್ನು ನೋಡದಿರುವುದು. ಒಂದು ಸಮಯವಿತ್ತು, ಸ್ಟಾರ್‌ಗಳು ಹೊಸಬರ ಹಾಗೂ ಬೇರೆ ನಟರ ಸಿನಿಮಾಗಳಿಗೆ ಬೆಂಬಲಿಸುತ್ತಿಲ್ಲ, ತಾವಾಯಿತು, ತಮ್ಮ ಸಿನಿಮಾವಾಯ್ತು ಎಂದು ದೂರವೇ ಇರುತ್ತಾರೆ. ಅದರ ಬದಲಿಗೆ ಹೊಸಬರಿಗೆ ಪ್ರೋತ್ಸಾಹ ನೀಡಿದರೆ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಹೊಸಬರಿಗೆ ಸಹಾಯವಾಗುತ್ತದೆ ಎಂದು ಬಹುತೇಕ ಹೊಸಬರು ತಮ್ಮ ಅನಿಸಿಕೆ ತೋಡಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸ್ಟಾರ್‌ಗಳು ಮುಕ್ತ ಮನಸ್ಸಿನಿಂದ ಹೊಸಬರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅದು ಹೊಸಬರ ಸಿನಿಮಾ ಕಾರ್ಯಕ್ರಮಗಳಿಗೆ ಗೆಸ್ಟ್‌ ಆಗಿ ಹೋಗಿ ಬೆನ್ನು ತಟ್ಟುವುದರಿಂದ ಹಿಡಿದು ಸಿನಿಮಾ ಬಿಡುಗಡೆಯಾದ ನಂತರ ಆ ಸಿನಿಮಾಗಳನ್ನು ನೋಡಿ, ಆ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳ­ನ್ನಾಡುವ ಮಟ್ಟಕ್ಕೆ ಸ್ಟಾರ್‌ಗಳು ಬೆಂಬಲ ಕೊಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗಂತೂ ಹೊಸಬರು ಹಾಗೂ ಇತರ ನಟರ ಚಿತ್ರಗಳಿಗೆ ಸ್ಟಾರ್‌ಗಳು ನೀಡುತ್ತಿರುವ ಬೆಂಬಲವನ್ನು ಮರೆಯುವಂತಿಲ್ಲ. ಕಳೆದ ವಾರ ತೆರೆಕಂಡ ಹಾಗೂ ಅದರಾಚೆ ತೆರೆಕಂಡಿರುವ ಸಿನಿಮಾಗಳಿಗೆ ದರ್ಶನ್‌, ಸುದೀಪ್‌, ಪುನೀತ್‌, ಶಿವರಾಜಕುಮಾರ್‌, ಮುರಳಿ, ರಕ್ಷಿತ್‌ ಶೆಟ್ಟಿ …. ಹೀಗೆ ಬಹುತೇಕ ನಟರು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗಾದರೆ ಕೇವಲ ಸ್ಟಾರ್‌ಗಳ ಬೆಂಬಲವೊಂದೇ ಸಾಕೇ ಎಂದರೆ ಖಂಡಿತಾ ಸಾಕಾಗಲ್ಲ. ಸ್ಟಾರ್‌ಗಳು ಒಂದು ಸಿನಿಮಾ ಬಗ್ಗೆ ಪ್ರೋತ್ಸಾಹದ ಮಾತನಾಡಬಹುದು. ಅದರಾಚೆ ಆ ಸಿನಿಮಾವನ್ನು ನೋಡಬೇಕಾಗಿ­ರೋದು ಪ್ರೇಕ್ಷಕ. ಆ ನಿಟ್ಟಿನಲ್ಲಿ ಪ್ರೇಕ್ಷಕ ಮನಸ್ಸು ಮಾಡಬೇಕು.

ಸುಮ್ಮನೆ ಒಮ್ಮೆ ಗಮನಿಸಿ, ಜನವರಿ ಕೊನೆಯ ವಾರದಿಂದ ಬಿಡುಗಡೆಯಾದ ಕನ್ನಡ ಚಿತ್ರಗಳು ಒಂದಲ್ಲ, ಒಂದು ರೀತಿಯಲ್ಲಿ ವಿಭಿನ್ನತೆ ಮೆರೆದಿವೆ. “ಲವ್‌ ಮಾಕ್ಟೇಲ್‌’, “ಕಾಣದಂತೆ ಮಾಯವಾದನು’, “ಮಾಲ್ಗುಡಿ ಡೇಸ್‌’, “ಜಂಟಲ್‌ಮೆನ್‌’, “ದಿಯಾ’ ಚಿತ್ರಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ.

ಆದರೆ, ಈ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿರೋದು ಸುಳ್ಳಲ್ಲ. ಹಾಗಾದರೆ, ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕ ತಿರಸ್ಕರಿಸುತ್ತಿದ್ದಾನಾ ಎಂಬ ಸಂದೇಹ ಸಹಜವಾಗಿಯೇ ಬರುತ್ತದೆ. ಪರಭಾಷೆಯಲ್ಲಿ ಸೂಕ್ಷ್ಮ ಸಂವೇದನೆಯ ಚಿತ್ರಗಳು ಬರುತ್ತವೆ, ಹೊಸ ಬಗೆಯ ಕಥೆಗಳು ಮನಮುಟ್ಟುತ್ತವೆ ಎಂದು ಪರಭಾಷೆಯ ಸಿನಿಮಾಗಳನ್ನು ಹೊಗಳುವ ಮಂದಿ, ಕನ್ನಡದಲ್ಲಿ ಬಂದು ಮೆಚ್ಚುಗೆ ಗಳಿಸಿರುವ ಸಿನಿಮಾಗಳನ್ನು ಎಷ್ಟು ನೋಡಿದ್ದಾರೆ ಹೇಳಿ. ಹೊಸ ಪ್ರಯತ್ನಗಳಿಗೆ ಮುಖ್ಯವಾಗಿ ಬೇಕಾಗಿರೋದು ಪ್ರೇಕ್ಷಕರ “ಅನ್‌ಕಂಡಿಶನಲ್‌ ಲವ್‌’. ಚಿತ್ರರಂಗ ಈಗ ಮುಂಚಿನಂತಿಲ್ಲ. ಸಿನಿಮಾ ಮಂದಿಗೆ ಪ್ರೇಕ್ಷಕರನ್ನು ಒಲಿಸಿಕೊಳ್ಳೋದೇ ಒಂದು ದೊಡ್ಡ ಸವಾಲು.

ಪ್ರೇಕ್ಷಕನ ಕೈಯಲ್ಲಿ ಈಗ ಮನರಂಜನೆಯ ನೂರಾರು ದಾರಿಗಳಿವೆ. ಇಷ್ಟೆಲ್ಲಾ ದಾರಿಗಳ ಮಧ್ಯೆ ಸಿನಿಮಾ ಮಂದಿ ತಮ್ಮದೇ ಒಂದು ದಾರಿ ಮಾಡಿಕೊಂಡು ಪ್ರೇಕ್ಷಕನನ್ನು ಕರೆತರಬೇಕು. ಕನ್ನಡದಲ್ಲಿ ಆ ಕೆಲಸ ಆಗುತ್ತಿವೆಯಾದರೂ ಪ್ರೇಕ್ಷಕನೇ ಯಾಕೋ ಹಿಂದೇಟು ಹಾಕುತ್ತಿರುವಂತಿದೆ. ಕೆಟ್ಟ ಸಿನಿಮಾಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಅಷ್ಟೇ ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಒಂದೇ ವಾರದಲ್ಲಿ ಏಳೆಂಟು ಸಿನಿಮಾಗಳು ಬಂದರೆ ಯಾವುದನ್ನು ನೋಡೋದು ಎಂಬುದು. ಬಂದ ಅಷ್ಟೂ ಸಿನಿಮಾಗಳನ್ನು ನೋಡಿ ಎಂದು ಹೇಳಿದರೆ ತಪ್ಪಾದೀತು. ತನ್ನ ಕಥಾವಸ್ತು, ನಿರೂಪಣೆಯಿಂದ ಗಮನಸೆಳೆಯುತ್ತಿರುವ ಸಿನಿಮಾಗಳನ್ನಾದರೂ ನೋಡಿ, ಪ್ರೋತ್ಸಾಹಿಸೋದು ಒಬ್ಬ ಕನ್ನಡ ಸಿನಿಮಾ ಪ್ರೇಮಿಯ ಜವಾಬ್ದಾರಿ. ಆದರೆ, ಇತ್ತೀಚೆಗೆ ಆ ಜವಾಬ್ದಾರಿಯನ್ನು ಪ್ರೇಕ್ಷಕ ಮರೆಯುತ್ತಿದ್ದಾನಾ ಎಂದು ಸಂದೇಹ ಕಾಡುವ ಮಟ್ಟಕ್ಕೆ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಹೀಗಾದರೆ ಮುಂದೆ ಹೊಸ ಪ್ರಯತ್ನ, ಪ್ರಯೋಗಗಳಿಗೆ ಕೈ ಹಾಕುವವರಾದರೂ ಯಾರು? ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿರುವುದರಿಂದ ಆ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರುಗಳು ಬೇಸರವಾಗಿದ್ದಾರೆ. “ಸಿನಿಮಾ ನೋಡಿದವರಿಂದ, ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಹೀಗಾದರೆ ಮುಂದೆ ನಾವು ಸಿನಿಮಾ ಮಾಡೋದು ಹೇಗೆ’ ಎನ್ನುವುದು ಇತ್ತೀಚೆಗೆ ತೆರೆಕಂಡು ಮೆಚ್ಚುಗೆ ಪಡೆದ ಸಿನಿಮಾದ ನಿರ್ಮಾಪಕರೊಬ್ಬರ ಮಾತು.

Advertisement

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next