ಸಿರುಗುಪ್ಪ: ತಾಲೂಕಿನಲ್ಲಿ ತಾಳೆ ಬೆಳೆಯನ್ನು ಬೆಳೆದ ರೈತರಿಗೆ ನಿಶ್ಚಿತ ಉತ್ತಮ ಆದಾಯ ದೊರೆತಿದ್ದು ಈ ಬೆಳೆಯನ್ನು ಬೆಳೆಯಲು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಸಕ್ತಿ ತೋರಿಸುತ್ತಿದ್ದು, ತೋಟಗಾರಿಕೆ ಇಲಾಖೆಯು ತಾಳೆ ಬೆಳೆ ಬೆಳೆಯುವ ರೈತರಿಗೆ ಉತ್ತೇಜನ ನೀಡುತ್ತಿದೆ. ಇದರಿಂದಾಗಿ ತಾಲೂಕಿನಲ್ಲಿ ಸುಮಾರು 120 ಹೆಕ್ಟೇರ್‌ನಲ್ಲಿ 50 ಜನ ರೈತರು ತಾಳೆ ಬೆಳೆಯನ್ನು ಬೆಳೆದಿದ್ದಾರೆ.
ತಾಲೂಕಿನ ಹಳೇಕೋಟೆ, ದೇಶನೂರು, ಬಲಕುಂದಿ, ಕರೂರು, ಉಪ್ಪಾರಹೊಸಳ್ಳಿ, ಹಚ್ಚೊಳ್ಳಿ ಗ್ರಾಮಗಳಲ್ಲಿ 120 ಹೆಕ್ಟೇರ್‌ಗಳಲ್ಲಿ ತಾಳೆ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಕೇವಲ 50 ಹೆಕ್ಟೇರ್‌ನಲ್ಲಿ ಮಾತ್ರ ತಾಳೆ ಬೆಳೆಯನ್ನು ಬೆಳೆಯಲಾಗಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ತಾಳೆ ಬೆಳೆಯಿಂದ ರೈತರಿಗೆ ನಿಶ್ಚಿತ ಆದಾಯ ದೊರೆಯುತ್ತಿದ್ದು, ದೇಶದಲ್ಲಿ ತಾಳೆ ಬೆಳೆಯ ಹಣ್ಣುಗಳಿಂದ ಪಾಮ್ ಆಯಿಲ್ ತಯಾರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಡುಗೆ ಎಣ್ಣೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ಪಾಮ್ ಆಯಿಲ್ ಎಣ್ಣೆ ಬೆಲೆಯು ಹೆಚ್ಚಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ಒಂದು ಕೆಜಿ ಪಾಮ್ ಆಯಿಲ್‌ಗೆ ರೂ. 110 ರಿಂದ 120 ಬೆಲೆ ಇತ್ತು. ಆದರೆ ಈಗ ರೂ. 160ರಿಂದ 170ರ ವರೆಗೆ ಮಾರಾಟವಾಗುತ್ತಿದ್ದು, ಈ ಕಾರಣದಿಂದ ಸರ್ಕಾರವು ತಾಳೆ ಹಣ್ಣಿನ ಖರೀದಿ ದರವನ್ನು ಹೆಚ್ಚಳ ಮಾಡಿದ್ದು, ಕಳೆದ ವರ್ಷ ಒಂದು ಟನ್ ತಾಳೆ ಹಣ್ಣಿಗೆ ರೂ. 9000-12000 ಇತ್ತು. ಆದರೆ ಈ ವರ್ಷ ರೂ. 13,000ರಿಂದ 15,000ಗಳಿಗೆ ಹೆಚ್ಚಳವಾಗಿದ್ದು, ಬೇರೆ ಯಾವುದೇ ಬೆಳೆಗಳಿಗೆ ಹೋಲಿಸಿದರೆ ತಾಳೆಬೆಳೆಗೆ ನಿಶ್ಚಿತ ಆದಾಯ ಖಚಿತವಾಗಿರುತ್ತದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ತಾಳೆ ಬೆಳೆಯಿಂದ ಸುಮಾರು 400ಟನ್ ತಾಳೆಹಣ್ಣು ಉತ್ಪಾದನೆಯಾಗಿದೆ.
ಖರ್ಚು ಕಡಿಮೆ, ಹೆಚ್ಚಿನ ಆದಾಯ ಬರುವ ತಾಳೆ ಬೆಳೆಯನ್ನು ಬೆಳೆದರೆ ನಿಶ್ಚಿತ ಆದಾಯ ದೊರೆಯುತ್ತದೆ. ನನ್ನ 6 ಎಕರೆ ಜಮೀನಿನಲ್ಲಿ ತಾಳೆ ಬೆಳೆ ಬೆಳೆದಿದ್ದು, ರೂ.8,80,013ಗಳ ಲಾಭವನ್ನು ಪಡೆದಿದ್ದೇನೆ. ರೈತರು ತಾಳೆ ಬೆಳೆ ಬಗ್ಗೆ ಮಾಹಿತಿ ಪಡೆದು ತಾಳೆ ಬೆಳೆ ಬೆಳೆದರೆ ಉತ್ತಮ ಆದಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ದೇಶನೂರು ಗ್ರಾಮದ ತಾಳೆ ಬೆಳೆ ಬೆಳೆದ ರೈತ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹೊಸಪೇಟೆ ಕಲ್ಪವೃಕ್ಷ ಆಯಿಲ್ ಫಾಮ್ ಪ್ರೈ.ಲಿ. ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ತಾಳೆ ಬೆಳೆಯುವ ರೈತರಿಗೆ ಕಲ್ಪವೃಕ್ಷ ಆಯಿಲ್ ಫಾಮ್ ಪ್ರೈ.ಲಿ., ಮೂರು ವರ್ಷ ಗೊಬ್ಬರವನ್ನು ನೀಡುತ್ತಾರೆ. ತೋಟಗಾರಿಕೆ ಇಲಾಖೆ ವತಿಯಿಂದ ತಾಳೆ ಬೆಳೆಗೆ ನೀರು ಹರಿಸಿಕೊಳ್ಳಲು ಹೊಸ ಬೋರ್‌ವೆಲ್‌ಗೆ ರೂ. 50 ಸಾವಿರ, ಕೃಷಿ ಹೊಂಡ ಇದ್ದರೆ ನೀರೆತ್ತಲು ಸಹಾಯಧನವನ್ನು ನೀಡಲಾಗುವುದು.
ತಾಳೆ ಬೆಳೆ ಅಧಿಕಾರಿಯು ರೈತರ ಜಮೀನಿಗೆ ಭೇಟಿ ನೀಡಿ ತಾಳೆ ಹಣ್ಣು ಪರಿಶೀಲನೆ ಮಾಡಿದ ನಂತರ ರೈತರು ಕಟಾವು ಮಾಡುತ್ತಾರೆ. ಕಟಾವು ಮಾಡಿದ ಹಣ್ಣುಗಳನ್ನು ಕಂಪನಿಯವರು ತಮ್ಮ ವಾಹನದಲ್ಲಿಯೇ ತೆಗೆದುಕೊಂಡು ಹೋಗುತ್ತಾರೆ. ತಾಳೆ ಬೆಳೆಯ ಹಣ್ಣಿನ ಖರೀದಿಯ ಹಣವನ್ನು ಸರ್ಕಾರ ನಮ್ಮ ಇಲಾಖೆ ಮೂಲಕ ರೈತರಿಗೆ ನೀಡುತ್ತಿದೆ.
-ವಿಶ್ವನಾಥ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ
-ಆರ್. ಬಸವರೆಡ್ಡಿ ಕರೂರು