ಗದಗ: ದೇಶದಲ್ಲಿ 2025ಕ್ಕೆ ಮಲೇರಿಯಾ ರೋಗವನ್ನು ಶೂನ್ಯಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಹಾಗಾಗಿ, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವಂತೆ ನೀರು ಸಂಗ್ರಹಗೊಳ್ಳದಂತೆ ಎಚ್ಚರ ವಹಿಸಬೇಕು. ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್.ಲಿಂಗದಾಳ ಹೇಳಿದರು.
ತಾಲೂಕಿನ ಅಡವಿಸೋಮಾಪೂರ ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರ ವ್ಯಾಪ್ತಿಯ ದೊಡ್ಡತಾಂಡೆ(ಜಲಶಂಕರ ನಗರ)ದಲ್ಲಿ ಯವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚಾರಣೆ ಜಾಗೃತಿಯ ಜಾಥಾದಲ್ಲಿ ಮಾತನಾಡಿದರು.
ಮಲೇರಿಯಾ ಎಂಬ ರೋಗ ಅನಾಫಿಲಿಸ್ ಜಾತಿಯ ಹೆಣ್ಣು ಸೊಳ್ಳೆಗಳಿಂದ ಒಬ್ಬರಿಂದೊಬ್ಬರಿಗೆ ಹರಡಿತ್ತದೆ. ಚಳಿ, ನಂತರ ವಿಪರೀತ ಜ್ವರ, ಸ್ವಲ್ಪ ಹೊತ್ತಿನ ನಂತರ ಮೈಬೆವರುವುದು, ಮೈಕೈ ನೋವು ಮಲೇರಿಯಾ ಕಾಯಿಲೆಯ ಲಕ್ಷಣಗಳಾಗಿವೆ. ಅಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ವೈದ್ಯರ ಸಲಹೆ ಮೇರೆಗೆ ರಕ್ತ ಪರೀಕ್ಷೆ ಮಾಡುವುದರ ಮೂಲಕ ಮಲೇರಿಯಾ ರೋಗವನ್ನು ಕಂಡು ಹಿಡಿಯಬಹುದು. ಅದಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು, ಗುಣಮುಖರಾಗಬಹುದು ಎಂದು ತಿಳಿಸಿದರು. ಆರೋಗ್ಯ ನೀರಿಕ್ಷಣಾಧಿಕಾರಿ ಎಸ್.ಬಿ.ಗಡಾದ ಮಾತನಾಡಿ,
ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ಸ್ವಚ್ಛವಾಗಿಡಬೇಕು. ಮನೆಯ ಒಳಗೆ ನೀರು ತುಂಬುವ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ಒಣಗಿಸಬೇಕು. ನೀರು ಸಂಗ್ರಹ ಪರಿಕರಗಳನ್ನು ಸದಾ ಮುಚ್ಚಿಡಬೇಕು. ಮನೆಯ ಕಿಟಕಿಗಳಿಗೆ ಜಾಲರಿಗಳನ್ನು ಬಳಸಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಸಂಜೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಎಂದು ಸುರಕ್ಷತಾ ಕ್ರಮಗಳನ್ನು ವಿವರಿಸಿದರು.
ಗ್ರಾಪಂ ಸದಸ್ಯೆ ಸೀತವ್ವ ಲಮಾಣಿ, ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಸಿ.ಹಿರೇಹಾಳ, ಗೋಪಾಲ ರಾಠೊಡ, ಲಕ್ಷ್ಮಣ ರಾಠೊಡ, ಲಲಿತಾ ಅಂಗಡಿ, ಮಂಜಳಾ ಆರಿ, ಲಕ್ಷ್ಮೀ ಪೂಜಾರ, ಸುಮಿತ್ರಾ ಲಮಾಣಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.