Advertisement

ನಾಳೆ ಜಿಲ್ಲೆ ಸಂಪೂರ್ಣ ಬಂದ್‌

06:20 PM Sep 27, 2020 | Suhan S |

ಬಳ್ಳಾರಿ: ಕೇಂದ್ರದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ವಿವಿಧ ಕಾಯ್ದೆಗಳ ತಿದ್ದುಪಡಿಗಳನ್ನು ವಿರೋಧಿಸಿ ನಾನಾ ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳ ಸಹಯೋಗದಲ್ಲಿ ಸೆ.28 ರಂದು ಸೋಮವಾರ ಅಖೀಲ ಭಾರತ ರೈತ ಸಮನ್ವಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳುತ್ತಿರುವ ಕರ್ನಾಟಕ ಬಂದ್‌ ಬಳ್ಳಾರಿ ಜಿಲ್ಲೆಯಲ್ಲೂ ಆಚರಿಸಲಾಗುವುದು ಎಂದು ಸಮಿತಿಯ ಮುಖಂಡರು ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕೆಪಿಆರ್‌ ಎಸ್‌ ಜಿಲ್ಲಾಧ್ಯಕ್ಷ ವಿ.ಎಸ್‌. ಶಿವಶಂಕರ್‌, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್‌ ಸೋಂಕು, ಲಾಕ್‌ಡೌನ್‌ ನೆಪವೊಡ್ಡಿ ಕೃಷಿ ಮಸೂದೆ, ಎಪಿಎಂಸಿ, ವಿದ್ಯುತ್ಛಕ್ತಿ, ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಿದೆ. ಈ ತಿದ್ದುಪಡಿ ಕಾಯ್ದೆಗಳಿಂದ ಕಾರ್ಪೋರೇಟ್‌ ಕಂಪನಿಗಳಿಗೆ ಅನುಕೂಲ ಕಲ್ಪಿಸಲಿವೆ.

ಕೇಂದ್ರ ಸರ್ಕಾರ ಮಾರುಕಟ್ಟೆಯನ್ನು ರೈತರ ಬಾಗಿಲಿಗೆ ಕೊಂಡೊಯ್ಯುವುದು ಎಂದು ಹೇಳುತ್ತಿದೆ. ಆದರೆ ರೈತರು ತಾವು ಬೆಳೆದ ಉತ್ಪನ್ನವನ್ನು ಎಪಿಎಂಸಿಗೆ ತರುವ ಮುನ್ನವೇ ಕೃಷಿ ಮುಂಗಡ ಒಪ್ಪಂದವಾಗಿದೆ. ಇದಕ್ಕೂ ಮುನ್ನ ಎಪಿಎಂಸಿಯಿಂದ ಹೊರಗೆ ಖರೀದಿಸಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಆದರೆ, ಇದೀಗ ನೇರವಾಗಿ ರೈತರ ಬಳಿಗೆ ಹೋಗಿ ಖರೀದಿಸಲು ಕಾರ್ಪೋರೇಟ್‌ ಕಂಪನಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಎಪಿಎಂಸಿಗೆ ಲಭಿಸುತ್ತಿದ್ದ ಶೇ. 2ರಷ್ಟು ತೆರಿಗೆ ಹಣವೂ ಕಡಿತವಾಗಲಿದೆ. ಇದೊಂದು ಅವೈಜ್ಞಾನಿಕ ಕಾಯ್ದೆಯಾಗಿದ್ದು, ಸಣ್ಣ ವ್ಯಾಪಾರಿಗಳಿಗೂ ಮಾರಕವಾಗಿದೆ. ಹಿಂದುತ್ವದ ಹೆಸರಲ್ಲಿ ವಿದೇಶಿ ಕಂಪನಿಗಳಿಗೆ ಮಾರಾಟ ಮಾಡುವುದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರವೂ ದಿ. ಮಾಜಿ ಸಿಎಂ ದೇವರಾಜ ಅರಸು ಅವಧಿ ಯಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣೆ ಕಾಯ್ದೆಗೆ ಇದೀಗ ಪುನಃ ತಿದ್ದುಪಡಿ ಮಾಡಿ ಜಾರಿಗೆ ತಂದಿದೆ. ಈ ಮೊದಲು ರೈತರಲ್ಲದವರಿಗೆ ಕೃಷಿ ಜಮೀನು ಖರೀದಿಗೆ ಅವಕಾಶ ಇರಲಿಲ್ಲ. ಆದರೆ, ಇದೀಗ 110 ಯುನಿಟ್‌ (1 ಯುನಿಟ್‌ 4.80 ಎಕರೆ) ಎಕರೆ ಜಮೀನನ್ನು ಒಬ್ಬರು ಖರೀದಿಸಲು ಅವಕಾಶ ಕಲ್ಪಿಸಿದೆ. ಈ ಕಾಯ್ದೆಗಳನ್ನು ವಿರೋಧಿ ಸಿ ಈಗಾಗಲೇ ಪಂಜಾಬ್‌, ಹರ್ಯಾಣ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ದೆಹಲಿಯಲ್ಲಿ 250 ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ ಎಂದು ತಿಳಿಸಿದರು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಈ ಕುರಿತು ಬೆಂಗಳೂರಿನಲ್ಲಿ ಹಲವಾರು ಸಂಘಟನೆಗಳು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರೂ ಫಲಕಾರಿಯಾಗಿಲ್ಲ. ಹೀಗಾಗಿ ಸೆ. 28ರಂದು ಸಂಪೂರ್ಣ ಬಂದ್‌ ಆಚರಿಸಲಾಗುವುದು ಎಂದವರು ತಿಳಿಸಿದರು. ಕರವೇ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ಮಾತನಾಡಿ, ಸೆ. 28ರಂದು ನಡೆಯುವ ರೈತರ ಬಂದ್‌ಗೆ ಕರವೇ ಸಂಘಟನೆ ಬೆಂಬಲ ಸೂಚಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಸಂಗನಕಲ್ಲು ಕೃಷ್ಣಾ, ರಂಜಾನ್‌ಸಾಬ್‌ ಇತರರು ಮಾತನಾಡಿದರು. ಇ. ಹನುಮಂತಪ್ಪ, ಪಾಲಿಕೆ ಮಾಜಿ ಸದಸ್ಯೆ ಪರ್ವಿನ್‌ಬಾಬು, ಕಾಂಗ್ರೆಸ್‌ ಮುಖಂಡ ಹುಮಾಯೂನ್‌ಖಾನ್‌, ಸಿಪಿಎಂನ ಜೆ.ಸತ್ಯಬಾಬು, ಗುರುಸಿದ್ದಮೂರ್ತಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next