Advertisement

ಜನತಾ ಕರ್ಫ್ಯೂಗೆ ಜನಬೆಂಬಲ

06:17 PM Mar 23, 2020 | Suhan S |

ಗದಗ: ಮಾರಣಾಂತಿಕ ಕೋವಿಡ್ 19 ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

Advertisement

ಜಿಲ್ಲೆಯ ಗದಗ-ಬೆಟಗೇರಿ, ಲಕ್ಷ್ಮೇಶ್ವರ, ಗಜೇಂದ್ರಗಡ, ಮುಂಡರಗಿ, ನರಗುಂದ ಹಾಗೂ ಶಿರಹಟ್ಟಿ, ರೋಣ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ರಸ್ತೆಗಳಲ್ಲಿ ವಾಹನ ಹಾಗೂ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಸ್ತಬ್ಧವಾಯಿತು ಮುದ್ರಣ ನಗರಿ: ಮುದ್ರಣ ನಗರಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ರವಿವಾರ ಇಡೀ ದಿನ ಸ್ತಬ್ಧಗೊಂಡಿತು. ಯಾವುದಾದರೂ ಸಂಘಟನೆ ಅಥವಾ ರಾಜಕೀಯ ಪಕ್ಷಗಳು ಕರೆ ನೀಡಿದರೂ ಇಷ್ಟೊಂದು ಬೆಂಬಲ ವ್ಯಕ್ತವಾಗುತ್ತಿರಲಿಲ್ಲ. ಆದರೆ, ರವಿವಾರ ಪ್ರಧಾನಿ ಕರೆಯ ಮೇರೆಗೆ ಅವಳಿ ನಗರಾದ್ಯಂತ ಮೌನ ಆವರಿಸಿತ್ತು. ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ ಜನ ಸಂಚಾರ ಕಂಡುಬರಲಿಲ್ಲ.

ಜನತಾ ಕರ್ಫ್ಯೂಗೆ ಅವಳಿ ನಗರದ ವರ್ತಕರು ಸ್ವಯಂ ಪ್ರೇರಣೆಯಿಂದ ಬೆಂಬಲಿಸಿದರು. ತಮ್ಮ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಬಂದ್‌ ಮಾಡಿದ್ದರು. ಹೀಗಾಗಿ ಬ್ಯಾಂಕ್‌ ರೋಡ್‌, ಸ್ಟೇಷನ್‌ ರೋಡ್‌, ಸರಾಫ್‌ ಬಜಾರ್‌, ರೋಟರಿ ಸರ್ಕಲ್‌ ಹಾಗೂ ವಸತಿ ಬಡಾವಣೆಗಳಲ್ಲಿರುವ ಸಣ್ಣ- ಪುಟ್ಟ ಅಂಗಡಿಗಳು, ಹೇರ್‌ ಸಲೂನ್‌ಗಳೂ, ತರಕಾರಿ ಮಾರುಕಟ್ಟೆ, ಹೂವು ಹಣ್ಣಿನ ಮಾರುಕಟ್ಟೆ, ಪೆಟ್ರೋಲ್‌ ಬಂಕ್‌ಗಳು ಬಾಗಿಲು ಮುಚ್ಚಿದ್ದರಿಂದ ಮಾರುಕಟ್ಟೆ ಪ್ರದೇಶ ಬಣಗೊಡುತ್ತಿತ್ತು

 ಬಸ್‌, ರೈಲು ಸಂಚಾರ ಸ್ಥಗಿತ: ಕೋವಿಡ್ 19 ಸೋಂಕು ತಡೆಯಲು ಜನತಾ ಕರ್ಫ್ಯೂ ಮುಂಜಾಗ್ರತಾ ಕ್ರಮವಾಗಿ ರವಿವಾರ ವಾಯುವ್ಯ ರಾಜ್ಯ ಸಾರಿಗೆ ಸಂಸ್ಥೆಯು ಗದಗ ವಿಭಾಗದ ಎಲ್ಲ ಮಾರ್ಗಗಳ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಗದಗ ವಿಭಾಗದ ಎಲ್ಲ 535 ಶೆಡ್ನೂಲ್‌ಗ‌ಳನ್ನು ಸ್ಥಗಿತಗೊಳಿಸಿತ್ತು. ಅದರಂತೆ ಕೇಂದ್ರ ಸರಕಾರ ಗದಗ ರೈಲ್ವೆ ಜಂಕ್ಷನ್‌ ಮಾರ್ಗದ ಎಲ್ಲಪ್ರಯಾಣಿಕರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಸದಾ ಜನಜಂಗುಳಿ ಇಲ್ಲಿನ ಹೊಸ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ ಪ್ರಯಾಣಿಕರಿಲ್ಲದೇ ಖಾಲಿ ಖಾಲಿಯಾಗಿತ್ತು.

Advertisement

ಜಿಲ್ಲೆಯ ವಿವಿಧ ಆಟೋ ಮಾಲೀಕರು ಮತ್ತು ಚಾಲಕರ ಸಂಘಟನೆಗಳು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದರಿಂದ ಅವಳಿ ನಗರದಲ್ಲಿ ಆಟೋಗಳು ರಸ್ತೆಗಿಳಿಯಲಿಲ್ಲ. ಮಾರುಕಟ್ಟೆ ಹಾಗೂ ವಾಹನಗಳ ಸಂಚಾರ ಬಂದ್‌ ಆಗಿದ್ದರಿಂದ ಸಾರ್ವಜನಿಕರು ಕೂಡಾ ಹೊರ ಬರಲಿಲ್ಲ. ಹೀಗಾಗಿ ಅವಳಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನರಿಲ್ಲದೇ ಬಣಗೊಡುತ್ತಿತ್ತು.

ಜನತಾ ಕರ್ಫ್ಯೂ ಘೋಷಣೆ ಮಾಡಿದ್ದರಿಂದ ಇಡೀ ಜಿಲ್ಲೆಯಾದ್ಯಂತ ಜನರು ಮನೆಯಲ್ಲೇ ಉಳಿದು ವಿಶ್ರಾಂತಿ ಪಡೆಯುವ ಮೂಲಕ ಸಂಪೂರ್ಣವಾಗಿ ಜನತಾ ಕರ್ಫ್ಯೂಗೆ ಬೆಂಬಲಿಸಿದರು. ಬೆಳಗ್ಗೆ ಬೆರಳೆಣಿಕೆಯ ಜನರು ಕಂಡುಬಂದರೆ, ಮಧ್ಯಾಹ್ನವಂತೂ ರಸ್ತೆಯುದ್ದಕ್ಕೂ ಯಾರೊಬ್ಬರೂ ಕಾಣಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next