Advertisement

ಸ್ವಾಭಿಮಾನಿಗೆ ಆಸರೆಯಾಗಿ

06:00 AM Jun 08, 2018 | |

“ಸಾಯೋಕೆ ಪ್ರಯತ್ನ ಪಡ್ತಾ ಇದ್ದೀನಿ, ಆದರೆ, ಈ ಹಾಳಾದ್‌ “ವಿಧಿ’ ನನಗಿನ್ನೂ ಸಾಯೋಕೆ ಬಿಡ್ತಿಲ್ಲ!
– ಇದು ಯಾವುದೋ ಚಿತ್ರದ ಸಂಭಾಷಣೆಯಲ್ಲ. ನಿಜ ಬದುಕಿನಲ್ಲಿ ಸಾವು-ಬದುಕಿನ ಮಧ್ಯೆ ನರಳಾಡುತ್ತಿರುವ, ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕ ಹಾಗೂ ಶಿಸ್ತಿನ ಸಿಪಾಯಿಯಂತಿದ್ದ ಎ.ಟಿ.ರಘು ಅವರ ನೋವು ತುಂಬಿದ ಆಂತರ್ಯದ ಮಾತು. ಹೌದು, ಕನ್ನಡ ಚಿತ್ರರಂಗದಲ್ಲಿ ಕಳೆದ ಐದು ದಶಕಗಳಿಂದಲೂ ತಮ್ಮದೇ ಛಾಪು ಮೂಡಿಸಿ, ಒಂದಷ್ಟು ಕೊಡುಗೆ ನೀಡಿರುವ ಎ.ಟಿ.ರಘು ಅವರ ಸ್ಥಿತಿ ಈಗ ದಯನೀಯವಾಗಿದೆ. ಅತ್ತ ಬದುಕುವಂತೂ ಇಲ್ಲ, ಇತ್ತ ಉಸಿರಿದ್ದೂ ಬದುಕು ಕಾಣುವಂತೂ ಇಲ್ಲ. ಅಂತಹ ಶೋಚನೀಯ ಪರಿಸ್ಥಿತಿಯಲ್ಲೇ ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಸ್ಟಾರ್‌ಗಳಿಗೆ ಗೆಲುವಿನ ಚಿತ್ರ ಕೊಟ್ಟು, ಅವರ ಬದುಕು ಗಟ್ಟಿಗೊಳಿಸಿ, ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಎ.ಟಿ.ರಘು, ಇಂದು ತಮ್ಮ ಬದುಕಿನಲ್ಲಿ ಸೋಲುಂಡು, ನಗುಗೆರೆಯನ್ನು ಎಂದೋ ಅಳಿಸಿ ಹಾಕಿ, ತಮ್ಮ ಉಸಿರು ಉಳಿಸಿಕೊಳ್ಳುವಲ್ಲಿ ಹೋರಾಡುವಂತಹ ವಿಷಮ ಪರಿಸ್ಥಿತಿಯಲ್ಲಿರುವುದು ನಿಜಕ್ಕೂ ದುರಂತವೇ ಸರಿ. ಕೆಟ್ಟು ಹೇಗಾದರೂ ಬದುಕಿಬಿಡಬಹುದು. ಆದರೆ, ಚೆನ್ನಾಗಿ ಬದುಕಿದವರು ಹೀಗೆ ಕೆಡಬಾರದು ಎಂಬ ಮಾತು ಅಕ್ಷರಶಃ ಎ.ಟಿ.ರಘು ಅವರ ಈಗಿನ ಸ್ಥಿತಿ “ಕಸ್ತೂರಿ ನಿವಾಸ’ದ ದುರಂತ ಘಟನೆಗೆ ಸಾಕ್ಷಿಯಂತಾಗಿದೆ.


ಇಷ್ಟಕ್ಕೂ ಎ.ಟಿ.ರಘು ಅವರಿಗೇನಾಗಿದೆ? ಬೆರಳೆಣಿಕೆ ವರ್ಷಗಳಿಂದಲೂ ಎ.ಟಿ.ರಘು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದು ಎಲ್ಲರಿಗೂ ಗೊತ್ತು. ಇದು ಹೊಸ ಸುದ್ದಿ ಅಲ್ಲದಿದ್ದರೂ, ಅವರ ಬದುಕನ್ನು ಆವರಿಸಿರುವ “ವಿಧಿ’ ಅವರನ್ನು ನೆಮ್ಮದಿಯ ಬದುಕನ್ನೇ ಕಸಿದುಕೊಂಡಿದೆ. ಅವರ ಎರಡು ಕಿಡ್ನಿಗಳು ವೈಫ‌ಲ್ಯಗೊಂಡು ಅವರನ್ನು ಮತ್ತಷ್ಟು ಕುಗ್ಗುವಂತೆ ಮಾಡಿದ್ದು ನಿಜ. ವಾರಕ್ಕೆ ಮೂರು ಸಲ ಡಯಾಲಿಸಿಸ್‌ ಮಾಡಿಸಿಕೊಳ್ಳುವ ಮೂಲಕ ಹೇಗೋ ಬೇಡದ ಬದುಕನ್ನು ಸವೆಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಹಣದ ಮುಗ್ಗಟ್ಟು ಎದುರಾದಾಗ, ಈ ಬದುಕೇ ಬೇಡ ಅಂದುಕೊಂಡ ಎ.ಟಿ.ರಘು, ತಮ್ಮ ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೂ ಪತ್ರ ಬರೆದು, “ತಾನಿನ್ನೂ ಈ ಲೋಕದಲ್ಲಿ ಬದುಕಲು ಇಷ್ಟಪಡುವುದಿಲ್ಲ’ ಎಂದು ಹೇಳಿಕೊಂಡಿದ್ದುಂಟು. ಕೊನೆಗೆ ಎ.ಟಿ.ರಘು ಅವರ ಪರಿಸ್ಥಿತಿ ಬಗ್ಗೆ ಚಿತ್ರರಂಗದ ಕಿವಿಗೆ ಬಿದ್ದಾಗ, ಬಹುತೇಕರು ಸಹಾಯ ಮಾಡಿದ್ದುಂಟು. ಮೆಲ್ಲನೆ ಅದರಿಂದ ಹೊರಬಂದು, ಹೊಸ ಬದುಕು ಶುರು ಮಾಡುವ ಹೊತ್ತಿಗೆ ಎ.ಟಿ.ರಘು ಅವರಿಗೆ ಮತ್ತೂಂದು ಆಘಾತ ಎದುರಾಯಿತು. ಅದು ಅವರಿಗಾದ ಹೃದಯಾಘಾತ. 


ಕೂಡಲೇ ಆಸ್ಪತ್ರೆಗೆ ದಾಖಲಾದ ಅವರಿಗೆ “ಓಪನ್‌ ಸರ್ಜರಿ’ಯಾಯಿತು. ಇಷ್ಟೆಲ್ಲಾ ಆದ ಅವರಿಗೆ ಆ ಚಿಕಿತ್ಸೆ ಹಣ ಭರಿಸಲೂ ಸಾಧ್ಯವಿಲ್ಲದಂತಾಗಿದೆ. ರಘು ಅವರಿಗೆ ಇರುವಷ್ಟು ದಿನವಾದರೂ ಚೆನ್ನಾಗಿ ಬದುಕಬೇಕೆಂದೆನಿಸಿದೆ. ಅದಕ್ಕೆ ಬೇಕಿರುವುದು ಸಮಾಧಾನ, ಹಾರೈಕೆಯಲ್ಲ. ಬದಲಾಗಿ ಸಹಾಯ. ಅದೂ ಹಣದ ಸಹಾಯ. ಸಿನಿಮಾದಲ್ಲೊಂದು ಸಾಲಿದೆ. “ಹ್ಯಾಪಿ ಡ್ರೀಮ್ಸ್‌ ಎಂಡ್ಸ್‌ ವಿಥ್‌ ಟ್ರಾಜಿಡಿ..’ ಅಂತ. ಅಂದರೆ, ಆಸೆ ಕಂಡ ಕನಸುಗಳೆಲ್ಲ ದುಃಖದಲ್ಲಿ ಕೊನೆಗೊಳ್ಳುತ್ತವೆ ಎಂಬುದು. ಬಹುತೇಕ ಚಿತ್ರಗಳಲ್ಲಿ ಹ್ಯಾಪಿ ಎಂಡಿಂಗೂ ಇದೆ. ಟ್ರಾಜಿಡಿಯೂ ಇದೆ. ಎ.ಟಿ.ರಘು ನಿರ್ದೇಶಿಸಿರುವ ಹಲವು ಚಿತ್ರಗಳಲ್ಲಿ ಹ್ಯಾಪಿ, ಟ್ರಾಜಿಡಿ ಎರಡೂ ಇದೆ. ಆದರೆ, ಇಷ್ಟು ವರ್ಷಗಳ ಕಾಲ ಕಲರ್‌ಫ‌ುಲ್‌ ಲೋಕದಲ್ಲಿ ಕಲರ್‌ ಕಲರ್‌ ಚಿತ್ರ ಕಟ್ಟಿಕೊಟ್ಟಿದ್ದ ಎ.ಟಿ.ರಘು ತಮ್ಮ ಬಾಳ ಕ್ಲೈಮ್ಯಾಕ್ಸ್‌ನಲ್ಲಿ ಟ್ರಾಜಿಡಿಗೆ ಒಳಗಾಗಿದ್ದಾರೆ. ಅನೇಕ ಚಿತ್ರಗಳ ಕಥಾನಾಯಕ ಲೈಫ‌ು ಟ್ರಾಜಿಡಿಯಾಗುವಂತೆ ಮಾಡಿದ್ದ, ಕಥೆಗಾರನ ಲೈಫ‌ು ಇದೀಗ ಟ್ರಾಜಿಡಿಯಲ್ಲಿದೆ ಎಂಬುದು ವಿಪರ್ಯಾಸ. 


ಎರಡೂ ಕಿಡ್ನಿಗಳ ವೈಫ‌ಲ್ಯ, ಅದೂ ಸಾಲದೆಂಬಂತೆ ಹೃದಯ ಶಸ್ತ್ರಚಿಕಿತ್ಸೆ. ಇದೆಲ್ಲವೂ ರಘು ಅವರನ್ನು ಇನ್ನಷ್ಟು ಕ್ಷೀಣವಾಗಿಸಿದೆ. ರಘು ಅವರ ಪರಿಸ್ಥಿತಿ ಈಗ ಚಿಂತಾಜನಕ. ಮಾತನಾಡಲಾಗುತ್ತಿಲ್ಲ. ಏಳಿಸಲು, ಕೂರಿಸಲು ಇಬ್ಬರು ಬೇಕು. ಇಂತಹ ಸ್ಥಿತಿಯಲ್ಲಿರುವ ರಘು ಅವರಿಗೆ ಎಲ್ಲೋ ಒಂದು ಕಡೆ ಬದುಕುವ ಸಣ್ಣ ಆಸೆ. ಆದರೆ, ಕೈಯಲ್ಲಿ ಕಾಸಿಲ್ಲ. ಹತ್ತು ರುಪಾಯಿ ಆದಾಯವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ರಘು ಅವರಿಗೆ ಬೇಕಿರೋದು ಒಂದೇ ಒಂದು ಸಹಾಯ. ಚಿತ್ರರಂಗದಲ್ಲಿ ನೂರಾರು ಮಂದಿ ಉದ್ಯಮಿಗಳಿದ್ದಾರೆ. ದೊಡ್ಡ ಸ್ಟಾರ್ಗಳಿದ್ದಾರೆ. ಇವರೆಲ್ಲರೂ ಸಣ್ಣ ಮನಸ್ಸು ಮಾಡಿದರೂ, ಒಂದು ಜೀವವನ್ನು ಬದುಕಿಸಲು ಸಹಾಯ ಆಗಬಹುದೇನೋ? ಕಳೆದ ಹದಿನೈದು ದಿನಗಳಿಂದಲೂ ಸರಿಯಾಗಿ ಮಾತನಾಡದಂತಹ ಸ್ಥಿತಿಯಲ್ಲಿರುವ ಎ.ಟಿ.ರಘು, ಕೈ ಸನ್ನೆ ಮೂಲಕ … “ಸಾವು ಬಾ ಅಂದ್ರೆ ಬರಲ್ಲ…’ ಅನ್ನುತ್ತಲೇ ಅಸಹಾಯಕತೆ ತೋರುತ್ತಾರೆ. ಇಡೀ ದಿನ ದ್ರವ ಪದಾರ್ಥ, ಅರ್ಧ ಇಡ್ಲಿ ಮಾತ್ರ ಸೇವಿಸೋ ಅವರು ಕಣ್ಣೀರು ಹಾಕಿದರೂ ಕಣ್ಣುಗಳು ಬತ್ತಿಹೋಗಿ, ಒಂದನಿ ಕಣ್ಣೀರು ಕೂಡ ಬರದಂತಾಗಿದೆ. ಈಗ ಎಲ್ಲವೂ ಹಾಸಿಗೆ ಮೇಲೆಯೇ ಆಗಬೇಕಿದೆ. ಒಳಗೊಳಗೇ ದುಃಖ ತುಂಬಿಕೊಂಡು ಕಣ್ಣಲ್ಲೇ ಚಿತ್ರಂರಂಗದ ಹಳೆಯ ನೆನಪು ಮೆಲುಕು ಹಾಕುತ್ತಿರುವ ರಘು ಅವರ ಈ ಸ್ಥಿತಿಗೆ ಮಮ್ಮಲ ಮರಗುವ ಮಂದಿಗಿಂತ, ಒಂದಷ್ಟು ಸಹಾಯ ಹಸ್ತ ಚಾಚಿದರೆ ಅದಕ್ಕಿಂತ ದೊಡ್ಡ ಸಹಾಯ ಬೇರೊಂದಿಲ್ಲ. ಚಿತ್ರರಂಗ ಮಾತ್ರವಲ್ಲ, ರಘು ಅವರ ಚಿತ್ರ ನೋಡಿ ಮೆಚ್ಚಿಕೊಂಡ ಬಹುತೇಕ ಕನ್ನಡಿಗರೂ ಇದ್ದಾರೆ. ರಘು ಅವರ ಜೀವ ಹಾಸಿಗೆಯಿಂದ ಮೇಲೇಳುವಂತಾದರೆ ಅಷ್ಟು ಸಾಕು. ರಘು ಬದುಕು ಟ್ರಾಜಿಡಿಯಲ್ಲಿದೆ. ಈಗಾದರೂ ರಘು ಮೊಗದಲ್ಲಿ ಸಣ್ಣ ನಗುವಿನ ಗೆರೆ ಮೂಡಿಸಲು ಸಾಧ್ಯವಿದೆ. ಅದಕ್ಕೆ ಬೇಕಾಗಿರೋದು ಹಣದ ಸಹಾಯವಷ್ಟೇ.

Advertisement

ಎ.ಟಿ.ರಘು ಜೊತೆ ಕೆಲಸ ಮಾಡಿದವರು ಈಗ ಯಶಸ್ವಿ ನಿರ್ದೇಶಕರಾದವರಿದ್ದಾರೆ. ಎಸ್‌.ನಾರಾಯಣ್‌, ವಿಕ್ಟರಿ ವಾಸು, ಎನ್‌.ಎಸ್‌.ಶಂಕರ್‌, ಆರ್‌.ಸಿಂ.ರಂಗ, ವೆಂಕಟೇಶ್‌ ಹೀಗೆ ಅನೇಕರು ರಘು ಶಿಷ್ಯರಾಗಿದ್ದವರು. ಈ ಪೈಕಿ ಸುಮಾರು 12 ಚಿತ್ರಗಳಿಗೆ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದವರು ವಿಕ್ಟರಿ ವಾಸು. ತಮ್ಮ ಗುರುಗಳ ಸ್ಥಿತಿ ಕಂಡು ಕಣ್ಣೀರು ಹಾಕುತ್ತಾರೆ. 1989 ರಿಂದ “ಜೈಲರ್‌ ಜಗನ್ನಾಥ್‌’ ಚಿತ್ರದಿಂದ “ಬೇಟೆಗಾರ’ ಚಿತ್ರದವರೆಗೂ ಕೆಲಸ ಮಾಡಿದ್ದ ವಿಕ್ಟರಿ ವಾಸು, “ರಘು ಅವರು ಕನ್ನಡಕ್ಕೆ ಸಾಕಷ್ಟು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಶಿಸ್ತಿನ ವ್ಯಕ್ತಿಗೆ ಇಂತಹ ಸ್ಥಿತಿ ಬಂದಿದ್ದು ಶೋಚನೀಯ. ಚಿತ್ರರಂಗದ ಯಾರಿಗೂ ಇಂತಹ ಸ್ಥಿತಿ ಬರಬಾರದು. ಈಗಾಗಲೇ ಹಲವರು ರಘು ಅವರಿಗೆ ಸಹಾಯ ಮಾಡಿದ್ದಾರೆ. ಹಾಗಾಗಿ ಇಲ್ಲಿಯವರೆಗೆ ಬದುಕು ನೋಡಿದ್ದಾರೆ. ಈಗ ಇನ್ನಷ್ಟು ಸಹಾಯ ಆಗಬೇಕಿದೆ. ಅವರಿಗೆ ಬಂದಿದ್ದ ಪ್ರಶಸ್ತಿಗಳು, ಶೀಲ್ಡ್‌ಗಳು, ಪುರಸ್ಕಾರಗಳ ಪತ್ರಗಳೆಲ್ಲವೂ ಮೂಲೆ ಸೇರಿವೆ. ಅವೆಲ್ಲವನ್ನೂ ನೋಡಿ ಬೇಸರವಾಯ್ತು. ಯಾವ ಪ್ರಶಸ್ತಿ, ಪುರಸ್ಕಾರಗಳು ಅವರನ್ನೀಗ ಖುಷಿಪಡಿಸುತ್ತಿಲ್ಲ. ಅದ್ಯಾವುದೂ ಈಗ ಬೇಕಿಲ್ಲ. ಬದುಕೋಕೆ ಒಂದು ಸಹಾಯ ಬೇಕು. ಸಿನಿಮಾ ಮಂದಿ ಮನಸು ಮಾಡಿದರೆ ಒಂದು ಜೀವವನ್ನು ಇರುವಷ್ಟು ಕಾಲ ಉಳಿಸಬಹುದು. ಅದೀಗ ಸಾಂಗೋಪವಾಗಿ ನಡೆಯಬೇಕಿದೆ’ ಎಂದು ವಿಕ್ಟರಿ ವಾಸು ದುಃಖೀಸುತ್ತಾರೆ.

ರಘು ಸಹನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು
ಸೋತು ಗೆದ್ದವಳು, ದೇವರ ಕಣ್ಣು, ಕುದುರೆ ಮುಖ, ಮನೆ ಬೆಳಕು, ಮಗ ಮೊಮ್ಮಗ, ಮುಯ್ಯಿಗೆ ಮುಯ್ಯಿ, ಸವತಿಯ ನೆರಳು, ಪಾವನ ಗಂಗಾ, ಅಪರಾಧಿ, ಪಕ್ಕಾ ಕಳ್ಳ, ಸ್ನೇಹದ ಸಂಕೋಲೆ 

ರಘು ಸಹನಿರ್ದೇಶಕರಾಗಿ ಕೆಲಸ ಮಾಡಿದ ಡಾ. ರಾಜ್‌ ಅವರ ಚಿತ್ರಗಳು
ಪ್ರೇಮದ ಕಾಣಿಕೆ, ಬಡವರ ಬಂಧು, ಬಹದ್ದೂರ್‌ ಗಂಡು, ಶ್ರೀನಿವಾಸ ಕಲ್ಯಾಣ, ತಾಯಿಗೆ ತಕ್ಕ ಮಗ, ಶಂಕರ್‌ ಗುರು, ಸಂಪತ್ತಿಗೆ ಸವಾಲ್‌, ಗಿರಿಕನ್ಯೆ, ರಾಜ ನನ್ನ ರಾಜ ರಘು ನಿರ್ದೇಶನದಲ್ಲಿ ಅಂಬರೀಶ್‌ ಅಭಿನಯಿಸಿದ ಚಿತ್ರಗಳು ನ್ಯಾಯ ನೀತಿ ಧರ್ಮ, ಶಂಕರ್‌ ಸುಂದರ್‌, ಆಶಾ, ಅವಳ ನೆರಳು, ಬೆಂಕಿ ಚೆಂಡು, ಇನ್ಸ್‌ಪೆಕ್ಟರ್‌ ಕ್ರಾಂತಿಕುಮಾರ್‌, ಅಂತಿಮ ತೀರ್ಪು, ಧರ್ಮಯುದ್ಧ, ಅಪತ್ಭಾಂದವ, ಸೂರ್ಯೋದಯ, ಮೈಸೂರ ಜಾಣ, ಪ್ರೀತಿ, ಮಿಡಿದ ಹೃದಯಗಳು, ಗೂಂಡಾ ಗುರು, ಗುರು ಜಗದ್ಗುರು, ಅರ್ಜುನ್‌, ನ್ಯಾಯಕ್ಕಾಗಿ ನಾನು, ಕೆಂಪು ಸೂರ್ಯ, ಮಿಡಿದ ಹೃದಯಗಳು, ಮಂಡ್ಯದ ಗಂಡು, ಬೇಟೆಗಾರ, ದೇವರ ಮನೆ

ರಘು ನಿರ್ದೇಶನದ ಇತರೆ ಚಿತ್ರಗಳು
ಅಜಯ್‌ ವಿಜಯ್‌, ಕಾಡಿನ ರಾಜ, ಕೆಂಪು ಸೂರ್ಯ, ರ್‍ಯಾಂಬೋರಾಜ ರಿವಾಲ್ವರ್‌ ರಾಣಿ, ಕಾಳಿ, ಶ್ರಾವಣ ಸಂಜೆ, ತಲ್ವಾರ್‌, ಪದ್ಮವ್ಯೂಹ, ಪುಟ್ಟ ಹೆಂಡ್ತಿ, ಕೃಷ್ಣ ಮೆಚ್ಚಿದ ರಾಧೆ, ಹಿಂದಿಯ ಮೇರಿ ಅದಾಲತ್‌

Advertisement

ರಘು ಅವರ ಬ್ಯಾಂಕ್‌ ಖಾತೆಯ ವಿವರ
ಕೋಟಕ್‌ ಮಹಿಂದ್ರ ಬ್ಯಾಂಕ್‌
ಮಡಿಕೇರಿ ಶಾಖೆ
ಐ.ಎಫ್.ಎಸ್‌.ಸಿ. ಕೋಡ್‌ – ಕೆಕೆಬಿಕೆ 0008272
ಅಕೌಂಟ್‌ ನಂಬರ್‌ – 144010031268

ಚಿತ್ರ ಸಂಗ್ರಹ: ಡಿ.ಸಿ. ನಾಗೇಶ್‌
ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next