Advertisement

ಕೈ ಕಾರ್ಯಕರ್ತರ ಸಭೆಯಲ್ಲಿ ಸುಮಲತಾಗೆ ಜೈಕಾರ!

11:47 AM Apr 10, 2019 | keerthan |

ಕೆ.ಆರ್‌.ನಗರ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಮಗೆ ಇಷ್ಟವಿಲ್ಲ. ಹೀಗಾಗಿ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.
ಕುಮಾರಸ್ವಾಮಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖೀಲ್‌ ಅವರ ಹೆಸರು ಎತ್ತಬೇಡಿ ಎಂದು ತಾಕೀತು ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರು, ಸುಮಲತಾ ಅಂಬರೀಶ್‌ ಪರ ಜೈಕಾರ ಕೂಗಿದರು.

Advertisement

ಕೆ.ಆರ್‌.ನಗರಕ್ಕೆ ಏ.13ರಂದು mರಾಹುಲ್‌ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಆರಂಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್‌, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇ ಗೌಡ ಮತ್ತು ಇತರ ಕಾಂಗ್ರೆಸ್‌ ಮುಖಂಡರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು. ಮೈತ್ರಿ ಅಭ್ಯರ್ಥಿಯ ಪರ ಮತ ಯಾಚಿಸಲು ಬರುತ್ತಿರುವ ರಾಹುಲ್‌ ಗಾಂಧಿ ಮತ್ತು ಇತರ ಮುಖಂಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ವರಿಷ್ಠರ ಆದೇಶ ಪಾಲಿಸಲ್ಲ: ನಾವು ಯಾವುದೇ ಕಾರಣಕ್ಕೂ ನಿಖೀಲ್‌ಗೆ ಮತ ಚಲಾಯಿಸುವುದಿಲ್ಲ ಎಂದು ಏರಿದ ಧ್ವನಿಯಲ್ಲಿ ಹೇಳಿದ ಪುರಸಭೆ ಮಾಜಿ ಸದಸ್ಯರಾದ ಕೆ.ಜಿ.ಸುಬ್ರಹ್ಮಣ್ಯ, ಕೆ. ವಿನಯ್‌, ಕೋಳಿಪ್ರಕಾಶ್‌, ತಾಪಂ ಮಾಜಿ ಸದಸ್ಯ ಮಿರ್ಲೆ ಸೀತಾರಾಂ ಮತ್ತು ಇತರ ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ನಾವು ವರಿಷ್ಠರ ಆದೇಶ ಪಾಲಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಸಮಾದಾನಪಡಿಸಲು ಹರಸಾಹಸ ಮಾಡಿದ ಡಾ.ಬಿ.ಜೆ.ವಿಜಯಕುಮಾರ್‌, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಸದಸ್ಯರಾದ ಅಚ್ಚುತಾನಂದ ಮತ್ತು ಡಿ.ರವಿಶಂಕರ್‌ ಎಷ್ಟೇ ಮನ ಮಾಡಿದರೂ ಸುಮ್ಮನಾಗದ ಕಾರ್ಯಕರ್ತರು ಸುಮಲತಾ ಅಂಬರೀಶ್‌ ಪರವಾಗಿ ಜೈಕಾರ ಕೂಗಿದರು.

ಸುಮಲತಾಗೆ ನಮ್ಮ ಓಟು: ಈ ಸಂದರ್ಭದಲ್ಲಿ ಮಾತನಾಡಿದ ತಾಪಂ ಮಾಜಿ ಸದಸ್ಯ ಮಿರ್ಲೆ ಸೀತಾರಾಂ, ನಮಗೆ ರಾಹುಲ್‌ಗಾಂಧಿ ಮತ್ತು
ಕಾಂಗ್ರೆಸ್‌ ಬಗ್ಗೆ ಅಪಾರ ಗೌರವವಿದೆ. ಅವರ ಸ್ವಾಗತಕ್ಕೆ ನಾವು ಬರುತ್ತೇವೆ. ಆದರೆ, ಮೈತ್ರಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವ ಪ್ರಶ್ನೆಯೇ ಇಲ್ಲ ಎಂದಾಗ ಇದಕ್ಕೆ ಧ್ವನಿಗೂಡಿಸಿದ ಕಾರ್ಯಕರ್ತರು, ನಮ್ಮ ಓಟು ಪಕ್ಷೇತರ
ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರಿಗೆ ಎಂದು ಘೋಷಣೆ ಮೊಳಗಿಸಿದರು.
ಕಾರ್ಯಕರ್ತರ ಸಿಟ್ಟಿಗೆ ಬೆದರಿದ ಪಕ್ಷದ ಮುಖಂಡರು ಮೈತ್ರಿ ಅಭ್ಯರ್ಥಿ ನಿಖೀಲ್‌ ಮತ್ತು ಜೆಡಿಎಸ್‌ ಮುಖಂಡರ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸದೆ ರಾಹುಲ್‌ಗಾಂಧಿಯವರ ಕಾರ್ಯಕ್ರಮ ಮತ್ತು ಸ್ವಾಗತದ ಬಗ್ಗೆ ಚರ್ಚಿಸಿ
ಸಭೆಯನ್ನು ಕೊನೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next