ಚಿಂಚೋಳಿ: ಸ್ವಯಂ ಉದ್ಯೋಗಕ್ಕೆ ಯುವ ಜನತೆ ಆಸಕ್ತಿ ತೋರಿದರೇ ಹೈದ್ರಾಬಾದ್‌ನ ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಕೊಡಿಸಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಆರ್ಥಿಕ ಸಹಾಯ ಒದಗಿಸುವುದಲ್ಲದೇ, ಕೇಂದ್ರ ಸರ್ಕಾರದಿಂದ ಸಾಲ ಸೌಲಭ್ಯ ದೊರಕಿಸಲು ಯತ್ನಿಸುತ್ತೇನೆ ಎಂದು ಕಲಬುರಗಿ ಸಂಸದ ಡಾ|ಉಮೇಶ ಜಾಧವ ಭರವಸೆ ನೀಡಿದರು.
ಪಟ್ಟಣದ ಬೇಕರಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ಉದ್ದಿಮೆ ಸ್ಥಾಪನೆಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಸಾಲ ಪಡೆಯಲು ಯಾರೂ ಹಿಂಜರಿಯಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮೀಣ ರೋಜಗಾರ ಯೋಜನೆ ದೇಶದ 10ಲಕ್ಷ ನಿರುದ್ಯೋಗಿ ಮತ್ತು ಶಿಕ್ಷಿತ ಯುವಕರಿಗೆ ಸುಸ್ಥಿರ ಸ್ವಯಂ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಈ ಯೋಜನೆಯಡಿ ಅನೇಕ ನಿರುದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಿದ್ದಾರೆ. ಇದರಡಿಯಲ್ಲಿ ಉದಯೋನ್ಮುಖ ಉದ್ಯಮಿಗಳು ಸೇವೆ, ವ್ಯಾಪಾರ, ಉತ್ಪಾದನೆ ಸೇರಿದಂತೆ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಾರ, ಉದ್ಯಮ ಪ್ರಾರಂಭಿಸಲು ಅಗತ್ಯ ಹಣ ಪಡೆಯಬಹುದು ಎಂದು ವಿವರಿಸಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ತೆಲಂಗಾಣದ ಮಹೆಬೂಬ್ ನಗರಕ್ಕೆ ಹೋಗುತ್ತದೆ. ಅಲ್ಲದೇ ಬುಲೆಟ್ ಟ್ರೇನ್ ಮಾರ್ಗ ಪ್ರಾರಂಭಕ್ಕೂ ಪ್ರಯತ್ನ ನಡೆದಿದೆ. ಹೀಗಾಗಿ ವ್ಯಾಪಾರ ವಹಿವಾಟು ಹೆಚ್ಚಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಭಿವೃದ್ಧಿಗೆ ಅನುದಾನ: ಅಲ್ಪಸಂಖ್ಯಾತರ ದರ್ಗಾಗಳಿಗೆ ವಕ ಬೋರ್ಡ್ ಮಂಡಳಿಯಿಂದ ಸ್ಮಶಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಡಿದರ್ಗಾ ಅಭಿವೃದ್ಧಿಗೆ 10ಲಕ್ಷ ರೂ. ನೀಡಲಾಗುವುದು ಎಂದು ಡಾ|ಉಮೇಶ ಜಾಧವ ಹೇಳಿದರು. ಮುಖಂಡ ಕೆ.ಎಂ.ಬಾರಿ ಮಾತನಾಡಿದರು.
ಅಕ್ಬರ್ ಹುಸೇನಿ ಸಜ್ಜಾದೇ ನಶಿನ್, ಡಿವೈಎಸ್ಪಿ ಬಸವರಾಜ ಕೆ.ಮುಖ್ಯಾಧಿ ಕಾರಿ ಕಾಶೀನಾಥ ಧನ್ನಿ, ಚಂದ್ರಶೇಖರ ಗುತ್ತೆದಾರ, ಗಣಪತರಾವ್, ಶ್ರೀಮಂತ ಕಟ್ಟಿಮನಿ, ರಾಜು ಪವಾರ ಇನ್ನಿತರಿದ್ದರು. ಹಸೇನ ಹಾಶ್ಮಿ ಸ್ವಾಗತಿಸಿದರು, ಶಹೇನಶಾ ವಂದಿಸಿದರು.