ಯಾದಗಿರಿ: ರೈತ ವಿರೋಧಿ ಹಾಗೂ ಬಂಡವಾಳಿಗರ ಪರವಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿಗಳ ವಿರುದ್ಧ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಸೆ.28ರ ಕರ್ನಾಟಕ ಬಂದ್‌ಗೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿಯು ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ನಿರ್ಬಂಧ ರಹಿತವಾಗಿ ತೆರೆದಿಡಲು ಹೊರಟಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕೂಡ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗೆ ಜಾರಿ ತರುತ್ತಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಕೈ ಹಾಕಿದೆ. ಇವೆಲ್ಲದರಿಂದಾಗಿ ಸಣ್ಣ ಮತ್ತು ಬಡ ರೈತರೇ ಬಹುಪಾಲು ಇರುವ ಈ ದೇಶದಲ್ಲಿ ಅವರೆಲ್ಲರೂ ವಿನಾಶದ ಅಂಚಿಗೆ ತಳ್ಳಲ್ಪಡುತ್ತಾರೆ. ಸರ್ಕಾರದ ನೀತಿ ಖಂಡಿಸಿ ಸೆ.28ರಂದು ಕರ್ನಾಟಕ ಬಂದ್ ಹಮ್ಮಿಕೊಂಡಿವೆ. ಎಲ್ಲ ಕಾರ್ಮಿಕರು, ದುಡಿಯುವ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
ಹೋರಾಟಕ್ಕೆ ಕಾಂಗ್ರೆಸ್ ಕಿಸಾನ್ ಘಟಕ ಬೆಂಬಲ : ಯಾದಗಿರಿ: ಕೇಂದ್ರ ಸರ್ಕಾರದ ಕೃಷಿ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ಕರೆ ನೀಡಲಾಗಿರುವ ಸೆ.28ರ ಬಂದ್‌ಗೆ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಡಿಸಿಸಿ ಕಿಸಾನ್ ಸೆಲ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ಸಣ್ಣ ಅತಿ ಸಣ್ಣ ರೈತರ ಪಾಲಿಗೆ ಮಾರಕವಾಗುವಂತಹ ಕಾನೂನು ತರ ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಈ ಮಸೂದೆಗಳು ರೈತರ ಪಾಲಿಗೆ ಕರಾಳ ದಿನಗಳನ್ನು ತರುವ ಶಾಸನ ಎಂದಿದ್ದಾರೆ. ಹೋರಾಟಕ್ಕೆ ಕಾಂಗ್ರೆಸ್ ರೈತ ಘಟಕದಿಂದ ಬೆಂಬಲಿಸಿ ಪಾಲ್ಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.