Advertisement

ಸಚಿವರಿಂದ ಭ್ರಷ್ಟಾಚಾರಕ್ಕೆ ಬೆಂಬಲ: ಬೇಳೂರು

03:38 PM Aug 03, 2017 | |

ಸಾಗರ: ಸಚಿವ ಕಾಗೋಡು ತಿಮ್ಮಪ್ಪ ಅವರು ಭ್ರಷ್ಟಾಚಾರಕ್ಕೆ ಪೋಷಣೆ ನೀಡುತ್ತಿದ್ದಾರೆ. ನಗರದಲ್ಲಿ ವಿತರಣೆ ಮಾಡಿರುವ ಆಶ್ರಯ ನಿವೇಶನ ಹಂಚಿಕೆಯಲ್ಲಿ ದೊಡ್ಡಮಟ್ಟದ ಗೋಲ್‌ ಮಾಲ್‌ ನಡೆದಿದ್ದು, ಬಡಜನರಿಗೆ ಕಾಂಗ್ರೆಸ್‌ ಹಾಗೂ ಕಾಗೋಡು ತಿಮ್ಮಪ್ಪ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ದೂರಿದರು.

Advertisement

ಇಲ್ಲಿನ ನಗರಸಭೆಯಲ್ಲಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಸಾರ್ವಜನಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಆಡಳಿತರೂಢ ಕಾಂಗ್ರೆಸ್‌ ಸದಸ್ಯರು ಒಂದೊಂದು ನಿವೇಶನಕ್ಕೆ ಸುಮಾರು 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಬಡವರಿಗೆ ನಿವೇಶನ ನೀಡುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಎಂದು ತಮ್ಮ ಪಕ್ಷದ ನಗರಸಭಾ ಸದಸ್ಯರಿಗೆ ಕಿವಿಮಾತು ಹೇಳಿದ್ದ ಕಾಗೋಡು ತಿಮ್ಮಪ್ಪ ಅವರು ತಮ್ಮ ಮೂಗಿನ ನೇರದಲ್ಲಿಯೇ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಮೌನವಾಗಿರುವುದು ಅವಮಾನಕರ ಸಂಗತಿಯಾಗಿದೆ. ಕಳೆದ ಇಪ್ಪತ್ತೆದು ಮೂವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದ ಬಡವರಿಗೆ ನಿವೇಶನ ನೀಡದೆ ಈಚೆಗೆ ಸಾಗರಕ್ಕೆ ವಲಸೆ ಬಂದವರಿಂದ 1 ಲಕ್ಷ ರೂ., ಹಾಲಿ ನಿವೇಶನ ಮನೆ ಇದ್ದವರಿಂದ 2 ಲಕ್ಷ ರೂಪಾಯಿ ಹಣ ಪಡೆದು ಕಾಂಗ್ರೆಸ್‌ ಸದಸ್ಯರು ಬಡವರಿಗೆ ಸಿಗಬೇಕಾಗಿದ್ದ ನಿವೇಶನವನ್ನು ಉಳ್ಳವರಿಗೆ ನೀಡಿದ್ದಾರೆ ಎಂದರು. 

ನಗರ ಆಶ್ರಯ ಸಮಿತಿ ಅಧ್ಯಕ್ಷ ಅಧ್ಯಕ್ಷ ಮಕೂºಲ್‌ ಅಹ್ಮದ್‌ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ನಿವೇಶನ ಸಿಗದೆ ತಮ್ಮ ಅಳಲನ್ನು ಹೇಳಿಕೊಳ್ಳಲು ಬಂದರೆ ನಿಮ್ಮನ್ನು ನಗರಸಭೆಯಿಂದ ಹೊರಗೆ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನಗರಸಭೆ ಮಕೂºಲ್‌
ಅವರ ಅಪ್ಪನ ಮನೆಯ ಆಸ್ತಿಯಲ್ಲ. ನೊಂದವರ ಅಳಲನ್ನು ಕೇಳಲು ಸಾಧ್ಯವಾಗದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ.
ಕಾಗೋಡು ಅವರ ಬೇಜವಾಬ್ದಾರಿಯೇ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿದರು.

ಯಾವಾಗಲೂ ಕಾಗೋಡು ಅವರಿಗೆ ಬಡವರಿಗಿಂತ ತಮ್ಮ ಚೇಲಾಗಳ ಬಗ್ಗೆ ಹೆಚ್ಚಿನ ಒಲವು ಇರುತ್ತದೆ. ಮಂಗಳಬೀಸು ಕೈಗಾರಿಕಾ ವಸಹಾತು ಪ್ರದೇಶದಲ್ಲಿ ಸಹ ಕಾಗೋಡು ತಿಮ್ಮಪ್ಪ ಅವರು ಕೈಗಾರಿಕೆ ನಡೆಸುವವರಿಗೆ ನೀಡಬೇಕಾಗಿದ್ದ ನಿವೇಶನವನ್ನು ತಮ್ಮ ಚೇಲಾಗಳಿಗೆ ನೀಡಿದ್ದಾರೆ.
ಆಶ್ರಯ ನಿವೇಶನ ಹಂಚಿಕೆ ಸಹ ಕಾಗೋಡು ತಿಮ್ಮಪ್ಪ ಅವರ ಹತ್ತಿರದ ನಗರಸಭಾ ಸದಸ್ಯರು ಹಣ ಪಡೆದು ಮಾರಿಕೊಂಡಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಮುಂದಿನ ಒಂದೆರಡು ದಿನಗಳಲ್ಲಿ ನಿವೇಶನ ವಂಚಿತ ಬಡವರ ಬೃಹತ್‌ ಪ್ರತಿಭಟನೆಯನ್ನು
ನಗರಸಭೆ ಎದುರಿನಲ್ಲಿ ನಡೆಸಲಾಗುತ್ತದೆ. ಹಾಲಿ ಪ್ರಕಟವಾಗಿರುವ ಆಶ್ರಯ ನಿವೇಶನ ಫಲಾನುಭವಿಗಳಲ್ಲಿ ಅರ್ಹರನ್ನು ಹೊರತುಪಡಿಸಿ ಅನರ್ಹರನ್ನು ಪಟ್ಟಿಯಿಂದ ಕೈಬಿಡಬೇಕು. ಉಳ್ಳವರಿಗೆ ನೀಡಿದ ನಿವೇಶನವನ್ನು ಹಿಂದಕ್ಕೆ ಪಡೆದು, ಅದನ್ನು ಬಡವರಿಗೆ ನೀಡಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ನಗರಸಭಾ ಸದಸ್ಯ ಎಸ್‌.ಎಲ್‌. ಮಂಜುನಾಥ್‌, ಜನಜೀವನ್‌ ಜಾಗೃತ್‌ ವೇದಿಕೆಯ ಅಧ್ಯಕ್ಷ ಶಶಿಕುಮಾರ್‌ ಗಾಂಧಿ ನಗರ, ಪುರಸಭಾ ಮಾಜಿ ಸದಸ್ಯ ಪ್ರಕಾಶ್‌, ಬಿಜೆಪಿ ಯುವ ಮೋರ್ಚಾದ ಪ್ರಮುಖರಾದ ರಾಜು ಬಿ. ಮಡಿವಾಳ, ಗಣೇಶ್‌ ಗಟ್ಟಿ, ಸಂತೋಷ ಕೆ.ಜಿ., ಪ್ರಮುಖರಾದ ಅಶೋಕ ಬೇಳೂರು, ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next