Advertisement

ಅಯ್ಯಪ್ಪ ಭಕ್ತರಿಗೆ ಬೆಂಬಲ: ಶಾ

06:00 AM Oct 28, 2018 | |

ಕಣ್ಣೂರು: ಶಬರಿಮಲೆ ದೇಗುಲದೊಳಗೆ ಮಹಿಳೆಯರ ಪ್ರವೇಶ ನೀಡಬಾರದು ಎಂದು ಹೋರಾಟ ಮಾಡಿದವರ ಪರವಾಗಿ ನಾವಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಘೋಷಿಸಿದ್ದಾರೆ. ಕೇರಳದಲ್ಲಿರುವ ಎಡಪಕ್ಷಗಳ ಸರ್ಕಾರವು ಅಯ್ಯಪ್ಪ ಭಕ್ತರನ್ನು ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಮಾತ್ರ ಇವರೊಂದಿಗೆ ಹೆಬ್ಬಂಡೆಯಂತೆ ನಿಂತಿದೆ ಎಂದು ಅವರು ಹೇಳಿದ್ದಾರೆ. ಕಣ್ಣೂರಿನಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅಮಿತ್‌ ಶಾ, ಆರೆಸ್ಸೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರೂ ಸೇರಿದಂತೆ 2000 ಕ್ಕೂ ಹೆಚ್ಚು ಭಕ್ತರನ್ನು ಸರ್ಕಾರ ಬಂಧಿಸಿದೆ ಎಂದು ಆರೋಪಿಸಿದ್ದಾರೆ.

Advertisement

“ಸ್ವಾಮಿಯೇ ಶರಣ ಅಯ್ಯಪ್ಪ’ ಎನ್ನುತ್ತ ಭಾಷಣ ಆರಂಭಿಸಿದ ಶಾ, ಪ್ರತಿಭಟನಾಕಾರರನ್ನು ಹತ್ತಿಕ್ಕುವುದನ್ನು ಮುಂದುವರಿಸಿದರೆ ಪಿಣರಾಯಿ ವಿಜಯನ್‌ ಸರ್ಕಾರ ಭಾರೀ ಬೆಲೆ ತೆರಬೇಕಾಗುತ್ತದೆ. ಸರ್ಕಾರ ಅಗ್ನಿಯೊಂದಿಗೆ ಸರಸವಾಡುತ್ತಿದೆ. ಕೋರ್ಟ್‌ ಆದೇಶವನ್ನು ಅನುಸರಿಸುವ ಹೆಸರಿನಲ್ಲಿ ನಡೆಸುತ್ತಿರುವ ದೌರ್ಜನ್ಯವನ್ನು ಮುಖ್ಯಮಂತ್ರಿ ನಿಲ್ಲಿಸಬೇಕು ಎಂದು ಅವರು ಕಿಡಿಕಾರಿದ್ದಾರೆ. ಅಲ್ಲದೆ, ದೇವಾಲಯಗಳ ವಿರುದ್ಧ ಕಮ್ಯೂನಿಸ್ಟರು ದಾಳಿ ನಡೆಸುತ್ತಿದ್ದು, ಇದು ವ್ಯವಸ್ಥಿತ ಸಂಚು ಎಂದೂ ಶಾ ಆರೋಪಿಸಿದ್ದಾರೆ.

ವಿಜಯನ್‌ ಟೀಕೆ:
ಶಾ ಮಾತಿಗೆ ತಿರುಗೇಟು ನೀಡಿರುವ ಸಿಎಂ ಪಿಣರಾಯಿ ವಿಜಯನ್‌, ಅಮಿತ್‌ ಶಾ ಅವರ ಹೇಳಿಕೆಯ ಮೂಲಕ ಬಿಜೆಪಿಯ ಅಜೆಂಡಾ ಬಹಿರಂಗವಾಗಿದೆ. ಸುಪ್ರೀಂಕೋರ್ಟ್‌ ತೀರ್ಪನ್ನೇ ಶಾ ವಿರೋಧಿಸುತ್ತಿದ್ದಾರೆ. ಅವರ ಹೇಳಿಕೆ ಸಂವಿಧಾನ ಹಾಗೂ ಕಾನೂನಿಗೆ ವಿರುದ್ಧವಾಗಿದೆ. ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಇದು ಎಂದು ವಿಜಯನ್‌ ಟೀಕಿಸಿದ್ದಾರೆ.

ನಾರಾಯಣ ಗುರು ಆಶ್ರಮಕ್ಕೆ ಭೇಟಿ: ನೂತನವಾಗಿ ನಿರ್ಮಿಸಲಾಗಿರುವ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಥಮ ಪ್ರಯಾಣಿಕರಾದ ಶಾ ಅವರು ಅನಂತರ ಅವರು ತಿರುವನಂತಪುರ ಬಳಿಯ ವರ್ಕಲದಲ್ಲಿ  ಶ್ರೀ ನಾರಾಯಣ ಗುರು ಮಹಾಸಮಾಧಿಗೈದ 90ನೇ ವರ್ಷದ  ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next