Advertisement

ಪಂಚಮಸಾಲಿ ಮೀಸಲು ಹೋರಾಟಕ್ಕೆ ಸದಾ ಬೆಂಬಲ: ಮನಗೂಳಿ ಅಭಿನವಶ್ರೀ

11:41 AM May 23, 2022 | Team Udayavani |

ವಿಜಯಪುರ: ಪಂಚಮಸಾಲಿ 2-ಎ ಮೀಸಲಾತಿ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದ್ದು, ನಾವೇನೂ ಮೀಸಲು ಹೋರಾಟದಿಂದ ಹಿಂದೆ ಸರಿದಿಲ್ಲ. ಆದರೆ ಸರ್ಕಾರಕ್ಕೆ ಪದೇ ಪದೇ ಗಡುವು ನೀಡುವುದು ಸರಿಯಲ್ಲ ಎಂದು ಮನಗೂಳಿ ಅಭಿನವ ಸಂಗನಬಸವ ಶ್ರೀಗಳು ಹೇಳಿದರು.

Advertisement

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲು ಕಲ್ಪಿಸಲು ಮುಖ್ಯಮಂತ್ರಿ ಆಸಕ್ತಿ ಇದ್ದರೂ ಇತರರು ಆಂತರಿಕವಾಗಿ ವಿರೋಧಿಸುತ್ತಿದ್ದಾರೆ ಎಂದು ಸುಳ್ಳು ಹೇಳುವುದು ಸರಿಯಲ್ಲ. ಜನಪ್ರತಿನಿಧಿ ಸ್ಥಾನದಲ್ಲಿ ಇರುವ ವ್ಯಕ್ತಿಗಳು ಮೀಸಲು ಹೋರಾಟದ ವಿಷಯದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಬಾರದು ಎಂದು ಮನವಿ ಮಾಡಿದರು.

ಮೀಸಲು ಹೋರಾಟಕ್ಕೆ ನಾವು ಸಂಪೂರ್ಣ ಒತ್ತಾಸೆತಾಗಿ ನಿಂತಿದ್ದೇವೆ. ಈ ಹೋರಾಟದಿಂದ ನಾವೇನೂ ಹಿಂದೆ ಸರಿದಿಲ್ಲ. ಆದರೆ ಮೀಸಲು ಕಲ್ಪಿಸಲು ಸರ್ಕಾರಕ್ಕೆ ಪದೇ ಪದೇ ಗಡುವು ನೀಡದೆ ಸೌಜನ್ಯ, ಪ್ರೀತಿ, ವಿಶ್ವಾಸದಿಂದ ಮನವೊಲಿಸಿ ಮೀಸಲು ಸೌಲಭ್ಯ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ನಮ್ಮ ಹಾಗೂ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಜಗದ್ಗುರುಗಳ ಮಧ್ಯೆ ಯಾವುದೇ ಭಿನ್ನಮತವಿಲ್ಲ. ಈಚೆಗಷ್ಟೇ ಹಿಟ್ನಳ್ಳಿ ಗ್ರಾಮದಲ್ಲಿ ಜರುಗಿದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಇಬ್ಬರೂ ಶ್ರೀಗಳು ಒಂದೇ ವೇದಿಕೆಯಲ್ಲಿದ್ದು,‌ ಪರಸ್ಪರ ಮಾತನಾಡಿದ್ದೇವೆ. ಹೀಗಾಗಿ ಸಮಾಜದ ಶ್ರೀಗಳಲ್ಲಿ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು ಎಂದರು.

ಇದನ್ನೂ ಓದಿ:ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?

Advertisement

ಮನಗೂಳಿ ಹಿರೇಮಠದ ಲಿಂಗೈಕ್ಯ ಶತಾಯುಷಿ ಸಂಗನಬಸವ ಶ್ರೀಗಳ 39 ನೇ ಪುಣ್ಯ ಸ್ಮರಣೋತ್ಸವ, ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಲಿಂಗೈಕ್ಯ ಮಹಾಂತ ಶ್ರೀಗಳ 9ನೇ ಯಾತ್ರಾ ಮಹೋತ್ಸವದ ಪ್ರಯುಕ್ತ ಮನಗೂಳಿ ಗ್ರಾಮದಲ್ಲಿ ಗುಡ್ಡಾಪುರ ದಾನಮ್ಮದೇವಿ ಪುರಾಣ ಹಮ್ಮಿಕೊಂಡಿದ್ದೇವೆ. ಮೇ 24 ರಂದು 1008 ಮುತೈದೆಯರಿಗೆ ಉಡಿ ತುಂಬುವ, 26 ರಂದು ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ವಿವಿಧ ಮಠಾಧೀಶರು, ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next