ಶಹಾಪುರ: ನಗರದ ಅಭಿವೃದ್ಧಿ ಕಾರ್ಯಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಸಾಕಷ್ಟು ಮಾಡಲಾಗಿದೆ. ಇನ್ನೂ ಪ್ರಮುಖ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ತಾವೆಲ್ಲರೂ ನಮ್ಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮನವಿ ಮಾಡಿದರು.
ನಗರದ ವಾರ್ಡ್ ಸಂಖ್ಯೆ 12 ಮತ್ತು 15ರಲ್ಲಿ ಕೈಗೊಂಡ ಅಭ್ಯರ್ಥಿಗಳ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಮೊದಲು 1980ರ ಸಮಯದಲ್ಲಿ ನಗರಕ್ಕೆ ಬೇಕಾದ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗಿತ್ತು. ಪ್ರಸಕ್ತ ದಿನಗಳಲ್ಲಿ ಬೆಳೆಯುತ್ತಿರುವ ನಗರ ಇದಾಗಿದ್ದು, ಹಳೇ ಫಿಲ್ಟರ್ ನೀರು ಸರಬರಾಜು ನಗರಕ್ಕೆ ಸರಿಹೋಗುತ್ತಿಲ್ಲ. ಹೀಗಾಗಿ ಶಾಶ್ವತ ಕುಡಿಯುವ ನೀರಿನ ಸರಬರಾಜು ಶುದ್ಧ ಘಟಕ ನೀರಿನ ವ್ಯವಸ್ಥೆಗೆ ಪ್ರಸಕ್ತ ಸಾಲಿನಲ್ಲಿ ಹದಿನಾರುವರೆ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.
ಈ ಬಾರಿ ಮಳೆ ಕೊರತೆಯಿಂದ ಅಂತರ್ಜಲ ಬತ್ತಿದ್ದು, ಇದರಿಂದ ಸಾಕಷ್ಟು ಕುಡಿಯುವ ನೀರಿನ ತೊಂದರೆಯಾಗಿದೆ. ಕೊಳವೆ ಬಾವಿ ಕೊರೆಸಿದರು ನೀರು ಬರುತ್ತಿಲ್ಲ. ಅಂತರ್ಜಲ ಕಾಪಾಡುವ ವ್ಯವಸ್ಥೆ ಮಾಡಬೇಕಿದೆ. ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗಿದೆ. ಇಂಗು ಗುಂಡಿ ವ್ಯವಸ್ಥೆ ಮಾಡಬೇಕಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಎಸ್‌ಎಫ್‌ಸಿ ಅನುದಾನ ಸೇರಿದಂತೆ 14 ಫೈನಾನ್ಸ್ ಅನುದಾನ ಸೇರಿ ಹದಿನಾರುವರೆ ಕೋಟಿ ಹಣವನ್ನು ಶುದ್ಧ ನೀರು ಘಟಕ ನಗರಕ್ಕೆ ನೀರು ಸರಬರಾಜು ಕಾರ್ಯಕ್ಕೆ ಮೀಡಲಿಡಲಾಗಿದೆ. ಈ ಬಾರಿ ಮೊದಲನೇ ಆದ್ಯತೆ ನೀರಿಗೆ ಇಡಲಾಗಿದೆ. ಆ ನಂತರ ಉದ್ಯಾನವನ ಇತರೆ ಕೆಲಸಕ್ಕೆ ಎಂದು ಅವರು ತಿಳಿಸಿದರು. ಕಾರಣ ಸರ್ವರೂ ಈ ಬಾರಿ ಮತ್ತೂಮ್ಮೆ ಕಾಂಗ್ರೆಸ್ ಅಧಿಕಾರ ಹಿಡಿಯುವಂತೆ ಆಶೀರ್ವಾದ ಮಾಡುವಂತೆ ಕೋರಿದರು. ಈ ಸಂದರ್ಭದಲ್ಲಿ ವಾರ್ಡ್ ನಂ 12ರ ಅಭ್ಯರ್ಥಿ ಭಗವಂತ ಮತ್ತು ವಾರ್ಡ್ ಸಂಖ್ಯೆ 15 ಅಭ್ಯರ್ಥಿ ಮಹೇಶ ಮಡಿವಾಳಕರ್ ಇದ್ದರು. ಮುಖಂಡರಾದ ಶರಣಪ್ಪ ಸಲಾದಪುರ, ಚಂದ್ರಶೇಖರ ಆರಬೋಳ, ರುದ್ರಪ್ಪ ಚಟ್ರಕಿ, ಮರಿಗೌಡ ಹುಲಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.