Advertisement

ದೋಷರಹಿತ ಮತದಾರರ ಪಟ್ಟಿಗೆ ಸಹಕರಿಸಿ

01:36 PM Sep 02, 2019 | Suhan S |

ಚಿತ್ರದುರ್ಗ: ಜಿಲ್ಲೆಯಲ್ಲಿ ಸೆ. 1 ರಿಂದ ಮತದಾರರ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಆರಂಭವಾಗಿದ್ದು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಇನ್ನಿತರೆ ವಿವರಗಳು ಸರಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮಕ್ಕೆ ಭಾನುವಾರ ನಗರದ ತರಾಸು ರಂಗಮಂದಿರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಮತದಾರರ ಪಟ್ಟಿಯನ್ನು ದೋಷ ರಹಿತ ಮಾಡಲು ಚುನಾವಣಾ ಆಯೋಗ ಮುಂದಾಗಿದ್ದು, ಎಲ್ಲ ಮತದಾರರ ವಿವರ ಸಮರ್ಪಕವಾಗಿರಬೇಕು ಎನ್ನುವ ಉದ್ದೇಶದಿಂದ, ಸೆ. 1 ರಿಂದ 30 ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದೆ. ಈ ಅವಕಾಶ ಬಳಸಿಕೊಂಡು ಜಿಲ್ಲೆಯ ಎಲ್ಲ ಮತದಾರರೂ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ, ತಂದೆ ಹೆಸರು, ವಾರ್ಡ್‌ ಇನ್ನಿತರೆ ಎಲ್ಲ ವಿವರಗಳೂ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಂಡು ಖಾತ್ರಿ ಪಡಿಸಿಕೊಳ್ಳಬೇಕು. ಮತದಾರರ ಸಹಾಯವಾಣಿ 1950 ಮೂಲಕವೂ ಮತದಾರರ ಪಟ್ಟಿಯಲ್ಲಿನ ತಮ್ಮ ವಿವರ ಪಡೆದು, ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮನೆ ಭೇಟಿ ಸಂದರ್ಭದಲ್ಲಿ ವಿವರ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ವಿಶೇಷವಾಗಿ ಮತದಾರರ ಸ್ಲಿಪ್‌ ಸಿದ್ಧಪಡಿಸಲಾಗಿದ್ದು, ಎಲ್ಲ ಮತದಾರರೂ ಈ ಸ್ಲಿಪ್‌ನಲ್ಲಿ ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು, ವಿವರ ಸರಿ ಇದ್ದರೆ ಸರಿಯಿದೆ ಎಂಬುದಾಗಿ ಹಾಗೂ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿ ಸ್ಲಿಪ್‌ ಭರ್ತಿ ಮಾಡಿ ಡ್ರಾಪ್‌ ಬಾಕ್ಸ್‌ನಲ್ಲಿ ಹಾಕಬೇಕು. ಎಲ್ಲಾ ಮತಗಟ್ಟೆಗಳಲ್ಲಿ, ಸರ್ಕಾರಿ ಕಚೇರಿಗಳು, ತಹಶೀಲ್ದಾರರ ಕಚೇರಿಯಲ್ಲಿಯೂ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲ ಮತದಾರರೂ ಈ ವಿಶೇಷ ಪರಿಶೀಲನಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಮಾತನಾಡಿ, ಮತದಾರರು ಮತ ಚಲಾವಣೆ ಮಾಡುವುದಷ್ಟೇ ಅಲ್ಲ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿವರ ಸರಿ ಇದೆಯೇ ಇಲ್ಲವೇ ಎಂಬುದನ್ನು ಈಗಲೇ ಸರಿಪಡಿಸಿಕೊಂಡು, ಮುಂದಿನ ದಿನಗಳಲ್ಲಿ ದೋಷರಹಿತ ಮತದಾರರ ಗುರುತಿನ ಚೀಟಿ ಲಭ್ಯವಾಗುವಂತೆ ಮಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದರು.

ಉಪವಿಭಾಗಾಧಿಕಾರಿ ವಿಜಯಕುಮಾರ್‌, ತಹಶೀಲ್ದಾರ್‌ ವೆಂಕಟೇಶಯ್ಯ, ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಡಮರುಗ ಬಾರಿಸುವ ಮೂಲಕ ವಿಶಿಷ್ಟವಾಗಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ತರಾಸು ರಂಗಮಂದಿರದವರೆಗೆ ಸಾಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next