ಬೆಂಗಳೂರು: “ಸ್ವಾಮಿ.. ಜೈಲುಗಳಲ್ಲಿ ಮನೆ ಊಟಕ್ಕೆ ಅವಕಾಶ ಇಲ್ಲ ಎಂದು ಹೇಳ್ತಾರೆ, ಆದರೆ ಹಣ ಕೊಟ್ಟವ ರಿಗೆ ಅದೂ ಸಿಗುತ್ತೆ, ಅಷ್ಟೇ ಏಕೆ ರಾಜ್ಯದ ಕಾರಾಗೃಹಗಳ ಒಳ ಗಡೆಗೆ ಗನ್, ಗಾಂಜಾ ಮತ್ತು ಬುಲೆಟ್ ಪೂರೈಕೆ ಯಾಗುತ್ತಿದೆ ಎಂಬುದಾಗಿ ವಕೀಲರೊಬ್ಬರು ಹೈಕೋರ್ಟ್ ಮುಂದೆ ಗಂಭೀರವಾದ ಆರೋಪ ಮಾಡಿದ್ದಾರೆ.
ಮನೆ ಊಟ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಮಂಗಳವಾರ ವಿಚಾರಣೆ ನಡೆದಿತ್ತು. ಈ ವೇಳೆ ಇಂತಹದ್ದೇ ಮನವಿ ಇರುವ ಅರ್ಜಿ ಸಲ್ಲಿಸಿರುವ ವಿಚಾರಣಾಧೀನ ಕೈದಿಯೊ ಬ್ಬರ ಪರ ವಕೀಲರು ಈ ಆರೋಪ ಮಾಡಿದರು. ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಹೌದಾ! ಏನ್ರಿ ಇದೆಲ್ಲ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.
ಜೈಲಿನಲ್ಲಿ ಗನ್, ಗಾಂಜಾ ಮತ್ತು ಬುಲೆಟ್ ಪೂರೈಕೆಯಾಗುತ್ತಿದೆ ಎಂದು ಹೇಳ್ತಿದ್ದಾರಲ್ಲ, ಇದರ ಬಗ್ಗೆ ಪರಿಶೀಲನೆ ನಡೆಸಿ ಎಂದು ಮೌಖೀಕ ಸೂಚನೆ ನೀಡಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬರಿಗೆ ಮನೆ ಊಟ ಪೂರೈಸಲು ಅನುಮತಿ ನೀಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶನ ನೀಡ ಬೇಕು ಎಂದು ಕೈದಿಯ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ವಕೀಲ ಸಿರಾಜುದ್ದೀನ್ ಅಹ್ಮದ್ ಹಾಜರಾಗಿ, ತಮ್ಮ ಕಕ್ಷಿದಾರನ ಅಳಿಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಅವರಿಗೆ ಮನೆ ಊಟ ಪೂರೈಸಲು ಅನುಮತಿ ನೀಡಲು ಕೋರಿ ಜೈಲು ಅಧೀಕ್ಷಕರು, ಕಾರಾಗೃಹ ಇಲಾಖೆ ಡಿಜಿಪಿಗೆ ಮನವಿ ಮಾಡಲಾಗಿದೆ. ಆದರೆ ಮನೆ ಊಟ ಸರಬರಾಜು ಮಾಡಲು ಅನುಮತಿ ನೀಡಿದರೆ, ಜೈಲಿನ ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಲಾಗುತ್ತಿದೆ. ಬಳ್ಳಾರಿ, ಬೆಳಗಾಂ, ಚಿತ್ರದುರ್ಗದ ಜೈಲಿನಲ್ಲಿ ಕೈದಿಗಳಿಗೆ ಮನೆ ಊಟ ಸರಬರಾಜು ಮಾಡಲು ಅನು ಮತಿ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಜೈಲಿನಲ್ಲಿ ಬಿಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅಷ್ಟೇ ಅಲ್ಲ ರಾಜ್ಯದ ಜೈಲುವೊಂದರ ಒಳಗಡೆಗೆ ನಿಷೇಧಿತ ವಸ್ತುಗಳು ಪೂರೈಕೆ ಮಾಡಲಾಗುತ್ತಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ನಿಷೇ ಧಿತ ವಸ್ತುಗಳು ಅಂದರೆ ಯಾವುವು? ಎಂದು ಕೇಳಿದರು. ಸಿರಾಜುದ್ದೀನ್ ಅಹ್ಮದ್ ಉತ್ತರಿಸಿ, ಮೊಬೈಲ್, ಗಾಂಜಾ, ಗನ್ ಮತ್ತು ಬುಲೆಟ್ ಅನ್ನು ಜೈಲಿನ ಒಳಗಡೆಗೆ ಜೈಲು ಅಧಿಕಾರಿಗಳೇ ಪೂರೈಸುತ್ತಿದ್ದಾರೆ. ಆ ಕುರಿತು ಕೈದಿಯೊಬ್ಬರು ತನ್ನ ಪತ್ನಿಗೆ ಮಾಹಿತಿ ನೀಡಿದ್ದಾರೆ.
ಕೈದಿಯ ಪತ್ನಿಯು ಕಾರಾಗೃಹ ಡಿಜಿಪಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಅದರಿಂದ ಕೈದಿಯನ್ನು ಏಕಾಂತ ಸೆರೆಮನೆ ವಾಸಕ್ಕೆ ದೂಡಲಾಗಿದೆ. ಇನ್ನೂ ಕಾರಾಗೃಹದ ಜೈಲರ್ ಒಬ್ಬರು ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಂತರ ರಾಜ್ಯ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು, ಎಸ್ಪಿಪಿ ಅವರೇ ಏನಿದು ಕಾರಾಗೃಹದಲ್ಲಿ ಹಳೆಯ ಕಾಲದ ಸಮಸ್ಯೆಗಳು? ಎಂದು ಪ್ರಶ್ನಿಸಿದರು.
ಅದಕ್ಕೆ ಅರ್ಜಿದಾರರ ಪರ ವಕೀಲರು, ಪ್ರಕರಣದ ಕುರಿತು ಹೆಚ್ಚಿನ ವಿವರ ನ್ಯಾಯಪೀಠಕ್ಕೆ ನೀಡಲು ಮುಂದಾದರು. ಸದ್ಯ ನಿಮ್ಮ ಅರ್ಜಿ ವಿಚಾರಣೆಗೆ ಬಂದಿಲ್ಲ. ನಿಮ್ಮ ಅರ್ಜಿ ವಿಚಾರಣೆಗೆ ಬಂದಾಗ ವಾದ ಮಂಡಿಸಿ. ಎಂದು ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಸೆ.5ಕ್ಕೆ ಮುಂದೂಡಿದರು.