ಹುಳಿಯಾರು: ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಊಟ ಬಿಟ್ಟ ಮಕ್ಕಳು: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಿಸಿಯೂಟದ ಸಾಂಬಾರಿನಲ್ಲಿ ಅನೇಕ ದಿನಗಳಿಂದ ಹುಳು ಗಳು ಕಾಣಿಸುತಿತ್ತು. ಹೀಗಾಗಿ ಮಕ್ಕಳು ಶಾಲೆ ಯಲ್ಲಿ ಊಟ ಮಾಡುವುದನ್ನೇ ಬಿಟ್ಟಿದ್ದರು. ಈ ಬಗ್ಗೆ ವಿಚಾರ ತಿಳಿದ ಪೋಷಕರು ಶಾಲೆಗೆ ಆಗಮಿಸಿ ಪರಿಶೀಲಿಸಿದಾಗ ಸಾರಿನಲ್ಲಿ ಹುಳುಗಳು ಕಂಡುಬಂದಿದ್ದು, ತಕ್ಷಣ ಬಿಸಿಯೂಟದ ಸಿಬ್ಬಂದಿ ಹಾಗೂ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಸಿಬ್ಬಂದಿ ಅಸಹಾಯಕತೆ: “ಬಿಸಿಯೂಟಕ್ಕೆ ಸರಬರಾಜು ಆಗುತ್ತಿರುವ ಬೇಳೆಯಲ್ಲೇ ಹುಳುಗಳಿದ್ದು, ಎಷ್ಟು ಸ್ವತ್ಛ ಮಾಡಿ ಹಾಕಿದರೂ ಕಣ್ತಪ್ಪಿ ಒಂದೊಂದು ಬಂದು ಬಿಡುತ್ತದೆ. ನಾವೇನು ಮಾಡೋಣ’ ಎಂದು ಸಿಬ್ಬಂದಿ ಅಸಹಾಯಕತೆ ತೋಡಿಕೊಂಡಿದ್ದರು. ಪರಿಣಾಮ ಶಾಲೆಗೆ ಬೇಳೆ ಇಳಿಸಲು ಬಂದಾಗಲೇ ಪರಿಶೀಲಿಸಿ ಸತ್ಯಾಸತ್ಯತೆ ಅರಿಯಲು ಪೋಷಕರು ನಿರ್ಧರಿಸಿದ್ದರು. ಅದರಂತೆ ಗುರುವಾರ ಶಾಲೆಗೆ ರೇಷನ್ ಇಳಿಸಲು ಬಂದ ಲಾರಿಯಿಂದಲೇ ನೇರವಾಗಿ ಬೇಳೆ ಇಳಿಸಿಕೊಂಡ ಪೋಷಕರು ಪರಿಶೀಲಿಸಿದಾಗ ಬೇಳೆಯಲ್ಲೇ ಹುಳುಗಳಿರುವ ಸತ್ಯ ಬಯಲಿಗೆ ಬಂದಿತು. ಇದರಿಂದ ಆಕ್ರೋಶಗೊಂಡ ಪೋಷಕರು, ಅಧಿಕಾರಿಗಳು ಸ್ಥಳಕ್ಕೆ ಬಂದು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಲಾರಿ ಬಿಡುವುದಿಲ್ಲ ಎಂದು ಮಕ್ಕಳೊಂದಿಗೆ ಧರಣಿಗೆ ಮುಂದಾದರು. ಸರ್ಕಾರಿ ಶಾಲೆ ಉಳಿವು ಹಾಗೂ ಬಡ ಮಕ್ಕಳ ಹಸಿವು ನೀಗಿಸುವ ಸಲುವಾಗಿ ಸರ್ಕಾರ ರೂಪಿಸಿರುವ ಬಿಸಿಯೂಟ ಯೋಜನೆಯಲ್ಲೂ ಅಕ್ರಮ ನಡೆಯುತ್ತಿದ್ದು, ಹುಳು ತುಂಬಿರುವ ಬೇಳೆ ಸರಬರಾಜು ಮಾಡಲಾಗುತ್ತದೆ. ಬಿಸಿಯೂಟ ಸಿಬ್ಬಂದಿ ಅದನ್ನೇ ಸಾಂಬಾರ್ ಮಾಡಿ ನೀಡುವುದರಿಂದ ಮಕ್ಕಳು ಅದನ್ನೇ ತಿನ್ನಬೇಕು. ಏನಾದರೂಅಪಾಯ ಉಂಟಾದರೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಬೇಳೆ ಸರಬರಾಜು ಭರವಸೆ: ವಿಷಯ ತಿಳಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು ಬೇಳೆ ಪರಿಶೀಲಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದರು. ಬೇಳೆಯನ್ನು ಯಾವ ಶಾಲೆಗೂ ಇಳಿಸದಂತೆ ವಾಪಸ್ ತೆಗೆದುಕೊಂಡು ಹೋಗುವಂತೆ ಲಾರಿ ಚಾಲಕನಿಗೆ ಸೂಚನೆ ನೀಡಿದರು. ಇನ್ನೆರಡು ದಿನಗಳಲ್ಲಿ ಗುಣಮಟ್ಟದ ಬೇಳೆ ಸರಬರಾಜು ಮಾಡುವ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಹನುಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಎಂಜಾರಪ್ಪ, ಮಾಜಿ ಸದಸ್ಯ ಲೋಕೇಶ್, ಬಿ.ಆರ್.ರಮೇಶ್, ಸಿಆರ್‌ಪಿ ಲೋಕೇಶ್ ಸೇರಿ ಗ್ರಾಮಸ್ಥರು, ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.