ಜಗಳೂರು: ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಸನ್ನಿವೇಶವಿದ್ದು, ಯಾವುದೇ ಕಾರಣಕ್ಕೂ ಉದಾಸೀನ ಮಾಡುವಂತಿಲ್ಲ. ಪ್ರತಿಯೊಬ್ಬರು ಕಟ್ಟೇಚ್ಚರವಾಗಿ ಕೆಲಸ ಮಾಡಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ್ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ವಾಲ್ಮೀಕಿ ಭವನದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಕಾಂಗ್ರೆಸ್‌ನ್ನು ತಿರಸ್ಕರಿಸಲು ಜನತೆ ನಿರ್ಧಾರ ಮಾಡಿದ್ದಾರೆ. ನಿಜ ಅದಕ್ಕೆ ಪೂರಕವಾದಂತಹ ಕೇಂದ್ರ ಸರ್ಕಾರದ ಯೋಜನೆಗಳನ್ನು ಮತ್ತು ಮೋದಿಯವರ ಸಾಧನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಸಮರೋಪಾದಿಯಲ್ಲಿ ಆಗಬೇಕಿದೆ ಎಂದರು. ನಿಬಂಧನೆಯ ಸಾಲಮನ್ನಾ ಮಾಡಿರುವ ರಾಜ್ಯ ಸರ್ಕಾರ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆರ್‌ಎಸ್‌ಎಸ್ ಕಾಯಕರ್ತರ ಕೊಲೆ, ಅತ್ಯಾಚಾರದಂತಹ ಹೇಯ ಕೃತ್ಯಗಳು ರಾಜ್ಯದಲ್ಲಿ ನಡೆಯುತ್ತಿದ್ದು ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, 150 ವಿಧಾನ ಸಭಾ ಕ್ಷೇತ್ರಗಳ ಗೆಲುವಿನ ಗುರಿ ಯಶಸ್ವಿಯಾಗಬೇಕಾದರೆ ಕಾರ್ಯಕರ್ತರು ಪಕ್ಷದ ಕೆಲಸವನ್ನು ಕುಟುಂಬದ ಕೆಲಸದಂತೆ ನಿರ್ವಹಿಸಬೇಕು. ಹಗಲಿರುಳೆನ್ನದೇ ಶ್ರಮಿಸಬೇಕು ಎಂದು ಹೇಳಿದರು. ದಕ್ಷಿಣ ಭಾರತದಲ್ಲಿನ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರ ತರುವ ಉದ್ದೇಶದಿಂದ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೂ ಪ್ರವಾಸ ಮಾಡಲು ಬಿಜೆಪಿಯ ರಾಷ್ಟ್ರೀಯ ನಾಯಕರು ತೀರ್ಮಾನಿಸಿದ್ದಾರೆ. ಕಾರ್ಯಕರ್ತರಾದ ನೀವು ನಿಮಗೆ ವಹಿಸಿದ ಬೂತ್‌ಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಪಕ್ಷ ವಹಿಸಿದ ಕೆಲಸ ಕರ್ತವ್ಯವೆಂದು ಭಾವಿಸಬೇಕೆಂದು ಕಿವಿ ಮಾತು ಹೇಳಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬರಬೇಕಾದರೆ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು. ಎಲ್ಲಾ ಮಂಡಲ ಹಾಗೂ ಗ್ರಾಮಗಳ ಮಟ್ಟದಲ್ಲಿ ಕಾರ್ಯಕರ್ತರಲ್ಲಿ ತಾರತಮ್ಯವಿಲ್ಲದೇ ಕೆಲಸಗಳನ್ನು
ಜಿಲ್ಲಾಧ್ಯಕ್ಷರು ವಹಿಸಿದಾಗ ಮಾತ್ರ ಪಕ್ಷ ಅಧಿಕಾರಕ್ಕೆ ಬರಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಕುರುಡು ಕಾಂಚಾಣ ಕುಣಿಯುತ್ತಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ, ಕೂಲಿಕಾರರ ಬದುಕಿನ ಆಧಾರವಾಗಿದ್ದ ನರೇಗಾ ಯೋಜನೆ ಜಗಳೂರು ತಾಲೂಕಿನಲ್ಲಿ ದುರ್ಬಳಕೆಯಾಗಿದೆ. 11 ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳು ಇದಕ್ಕೆ ಸಾಕ್ಷಿ ಎಂದರು. ಸಂಸದರು ನರೇಗಾ ಯೋಜನೆಯಲ್ಲಾಗಿರುವ ಅವ್ಯವಹಾರ ಮತ್ತು ಭ್ರಷ್ಠಚಾರವನ್ನು ತನಿಖೆ ನಡೆಸಬೇಕು. ಆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ತುರ್ತಾಗಿ ಬಡವರಿಗೆ ಕೂಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಸದರಲ್ಲಿ ಮನವಿ ಮಾಡಿದರು. ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಬಿ.ಪಿ.ಹರೀಶ್, ಬಸವರಾಜನಾಯ್ಕ, ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧ್ಯಕ್ಷ ಯಶವಂತ್‌ರಾವ್ ಜಾಧವ್, ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ್, ಹೇಮಂತ್,
ಧನುಂಜಯ್ ಕಡ್ಲೆಬಾಳು, ಜಿಲ್ಲಾ ವಿಭಾಗ ಸಹ ಪ್ರಭಾರಿ ಜಿ.ಎಂ. ಸುರೇಶ್, ಜಿಪಂ ಉಪಾಧ್ಯಕ್ಷೆ ಗೀತಾ ಗಂಗಾಧರ್, ಮಾಜಿ ಬಿಜೆಪಿ ಅಧ್ಯಕ್ಷ ಜೀವನ್ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ, ಸ್ಲಂಮೋರ್ಚಾ ರಾಜ್ಯಾಧ್ಯಕ್ಷ ಜಯಪ್ರಕಾಶ್, ಜಿಪಂ ಮಾಜಿ ಸದಸ್ಯ ಎಚ್.ನಾಗರಾಜ್, ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಜೆ.ವಿ.ನಾಗರಾಜ್, ಬಿ.ಆರ್.ಅಂಜಿನಪ್ಪ, ಜಿಲ್ಲಾ ಬಿಜೆಪಿಮುಖಂಡರಾದ ಸಹನರವಿ, ರುದ್ರಮುನಿಸ್ವಾಮಿ, ರಮೇಶ್‌ನಾಯ್ಕ, ಪ್ರಭು ಕಲಬುರ್ಗಿ, ಜಿಪಂ, ತಾಪಂ ಸದಸ್ಯರು ಹಾಗೂ ಜಿಲ್ಲೆಯ ವಿವಿಧ ಮಂಡಲಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.