“ಇಡೀ ವರ್ಷ ಓದಿದ್ದನ್ನು ಪೇಪರ್ ಮೇಲೆ ವಾಂತಿ ಮಾಡ್ಕೊಳ್ಳೋದಕ್ಕೇ ಪರೀಕ್ಷೆ ಅಂತಾರೆ. ಎಷ್ಟು ಹೆಚ್ಚು ವಾಂತಿ ಮಾಡ್ಕೊಳ್ತಾನೋ ಅಷ್ಟಷ್ಟು ಜಾಣ ಅಂತನೇ ಲೆಕ್ಕಾ….”- ಇದು ಶ್ರೇಷ್ಠ ನಾಟಕಕಾರ ಟಿ.ಪಿ. ಕೈಲಾಸಂರವರ ನುಡಿ… ಬಹಳ ದಿನ ಆಯ್ತು ಓದಿ, ಕಲಿಸಿ… ಸ್ವಲ್ಪ ಶಬ್ದಾಂತರ ಆಗಿದ್ದೀತು… ಅರ್ಥಾಂತರ ಮಾತ್ರ ನೋ ಚಾನ್ಸ್. ಆಗಿನ ಪರೀಕ್ಷೆಗಳು ಹಂಗನ ಇರತಿದ್ರು. ತೀರ ಇತ್ತೀಚಿನ ತನಕಾನೂ ಅಂದ್ರ, ಈ ನ್ಯೂ ಟೈಪ್ ಕ್ವಶ್ಚನ್ ಗಾಳಿ ಬೀಸೂತನಕಾಂತನ್ರಿ. ನಾವು ಪರೀಕ್ಷೆಗೆ ಹೋಗೋ ಸಂಭ್ರಮ ಏನಂತೀರಿ ನೀವು! 1960-75 ರ ಕಾಲದ ಪರೀಕ್ಷಾರ್ಥಿಗಳು ನಾವು!
ಪ್ರೈಮರಿಯೊಳಗಿದ್ದಾಗಂತೂ ನಾಲ್ಕನೇ ಕ್ಲಾಸಿನ ತನಕಾ ಪರೀಕ್ಷಾ ಯಾವಾಗ ಬಂದ್ರು ಯಾವಾಗ ಹೋದ್ರು ಅಂತನ ತಿಳೀಲಾರದ ಖೋಡಿ ಬುದ್ಧಿ ನಮ್ಮದು. ಈಗಿನಹುಡುಗರೂ, ಅವರ ಅಮ್ಮಂದ್ರೂ ಲೋವರ್ ಕೆಜಿ, ಅಪ್ಪರ್ ಕೆಜಿಗೆ ಮಾಡೋ ಪರೀಕ್ಷಾ ತಯಾರಿ ನಾವು ಎಸ್ಸೆಸ್ಸೆಲ್ಸಿಗಿದ್ದಾಗರೆ ಮಾಡೇವೋ ಇಲ್ಲೋ! ಹೂಂ. ನಮ್ಮ ಕಾಲದ ಸುದ್ದಿಗೆ ಬರೋಣ? ಐದನೇ ಕ್ಲಾಸಿನಿಂದ ಒಂದಿಷ್ಟು ಎಳೇನಿಂಬೀ ಬಲಿಯೂ ಲಕ್ಷಣಾ ಕಂಡ್ರು. ಕಿರುಪರೀಕ್ಷಾ, ವಾರದ ಪರೀಕ್ಷಾ, ಟರ್ಮಿನಲ್ಲು, ಪ್ರಿಲಿಮಿನರಿ, ವಾರ್ಷಿಕ… ಅಂತ ಪರೀಕ್ಷಾದ ಹೆಸರು ತಿಳಕೋಳಿಕ್ಕತ್ತಿದ್ವಿ… ನಮ್ಮ ಕಾಲಕ್ಕ ಇನ್ನೂ ಬಾಲ್ ಪೆನ್ನು ಬಂದಿದ್ದಿಲ್ಲಾ.. ಮಸಿ ತುಂಬೋ ಪೆನ್ನು! ಮೂರ ಮೂರ ಪೆನ್ನು ಹೊಟ್ಟೀ ತುಂಬಾ ಮಸಿ ಹೊತ್ತು ತಯಾರಾಗತಿದ್ರು. ಕಂಪಾಸಬಾಕ್ಸ್! ಅದಂತೂ ವರ್ಷಕ್ಕ ಒಂದ ಬೇಕಬೇಕು. ತಗಡಿನ ಡಬ್ಬಿ.. ಅದರಾಗ ಉಪ್ಪು, ಕಾರದ ಚೀಟಿ ಇಟಗೊಂಡ ವರ್ಷನ್ನೂದರಾಗನ ಅದು ಖತೆನೆಟ್ಟ ಹೋಗಿರತಿತ್ತು… ಹುಣಸೆ ಕಾಯಿ, ಮಾವಿನಕಾಯಿ, ಪ್ಯಾರಲಕಾಯಿ.. ನಮ್ಮ ಪಾಕೆಟ್ ಮನಿಗೆ ಅಂದ್ರ ಒಂದಾಣಿ, ಎರಡಾಣಿಗೆ ಬರೋ ರುಚಿಕರ ವಸ್ತು!
ಪರೀಕ್ಷಾ ಪೇಪರ್ ಬರಿಯೋವಷ್ಟರಾಗನ ಮೈಕೈಯೆಲ್ಲಾ ಮಸಿಮಯಾ! ಇನ್ನು ಅಡಿಷನಲ್ ಶೀಟಿನದಂತೂ ದೊಡ್ಡ ರಾಮಾಯಣ! ನಾ ಏಳನೆ ಕ್ಲಾಸಿಗೆ ಬರೋದರಾಗನ ಬೃಹಸ್ಪತಿಗಳ ಸಾಲಿಗೆ ಸೇರಿಬಿಟ್ಟಿದ್ದೆ. ನಮ್ಮದು ಏಳನೇ ಕ್ಲಾಸಂದ್ರ ಪಬ್ಲಿಕ್ ಎಕ್ಸಾಮು. ಎಷ್ಟೆಷ್ಟು ಅಡಿಷನಲ್ ಶೀಟ್ ತೊಗೋತೀರಿ ಅಷ್ಟಷ್ಟು ಶಾಣೇರೂಂತ ಲೆಕ್ಕಾ. ತಗೋ, ಅದಕ್ಕೂ ಪೈಪೋಟಿ! ನಾ ಮೂರ ಸಪ್ಲಿಮೆಂಟ್ ಹಚ್ಚಿದೆ,
ನಾ ನಾಲ್ಕು ಹಚ್ಚೀದೆ ಅಂತ! ನಾಲ್ಕು ಹಚ್ಚಿದಾಕಿಗೆ ಮೂರ ಹಚ್ಚಿದಾಕಿಗಿಂತಾ ಕಡಿಮೀ ಮಾರ್ಕ್ಸ್ ಬಂದರ ಜುಟ್ಟಾ ಜುಟ್ಟಿ! ಇದು ಹೀಂಗನ ಮುಂದುವರೀತು.. ಆದರ ನಾ ಲಿಂಗ್ವಿಸ್ಟಿಕ್ಕದಾಗ ಒಂದೂ ಅಡಿಷನಲ್ ಶೀಟ್ ಹಚ್ಚಲಾರದ ಮಸ್ತ್ ಮಾರ್ಕ್ಸ್ ತೊಗೊಂಡಾಗ ನನಗ ಈ ಅಡಿಷನಲ್ ಶೀಟಿನ ಬಗ್ಗೆ ಇರೋ ಭ್ರಮಾ ಕರಗಿದಂಗಾತು ನೋಡ್ರಿ!
–ಮಾಲತಿ ಮುದಕವಿ