Advertisement

ಏನಿದು ‘ಮಾಮ್’ ಕಥೆ? : ಹೆಚ್ಚುವರಿ ಎದೆ ಹಾಲನ್ನು ನವಜಾತ ಶಿಶುಗಳಿಗೆ ನೀಡುವ ಮಹಾತಾಯಿ ರುಶೀನಾ!

09:55 AM Jan 03, 2020 | Hari Prasad |

ಅಹಮದಾಬಾದ್: ನವಜಾತ ಶಿಶುಗಳಿಗೆ ತಮ್ಮ ಬೆಳವಣಿಗೆಯ ಹಲವು ಸಮಯದವರೆಗೆ ತಾಯಿಯ ಎದೆಹಾಲೇ ಅತ್ಯಮೂಲ್ಯವಾದ ಆಹಾರ. ಆದರೆ ಬಹಳಷ್ಟು ಹೆರಿಗೆ ಪ್ರಕರಣಗಳಲ್ಲಿ ವೈದ್ಯಕೀಯ ಕಾರಣಗಳಿಂದ ಮತ್ತು ಬಾಣಂತಿಯಲ್ಲಿ ಸಾಕಷ್ಟು ಪ್ರಮಾಣದ ಎದೆಹಾಲು ಉತ್ಪತ್ತಿಯಾಗದೇ ಇರುವುದರಿಂದ ಮತ್ತು ತಾಯಿಯ ಅನಾರೋಗ್ಯದ ಕಾರಣದಿಂದ ಹಲವಾರು ನವಜಾತ ಶಿಶುಗಳು ತಾಯಿ ಹಾಲಿನಿಂದ ವಂಚಿತವಾಗುತ್ತಿವೆ.

Advertisement

ಆದರೆ ಇಲ್ಲೊಬ್ಬರು ಈ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿರುವ ರುಶೀನಾ ಡಾಕ್ಟರ್ ಮರ್ಫಾತಿಯಾ ಎಂಬ 29 ವರ್ಷದ ಮಹಿಳೆಯೊಬ್ಬರು ತಮ್ಮ ಮಗುವಿಗೆ ನೀಡಿ ಮಿಕ್ಕಿದ ಎದೆಹಾಲನ್ನು ನಗರದ ಆಸ್ಪತ್ರೆಗಳ ನವಜಾತ ತುರ್ತು ನಿಗಾ ಘಟಕದಲ್ಲಿ ದಾಖಲಾಗಿರುವ ಶಿಶುಗಳಿಗೆ ಉಣಿಸುವ ಮಾದರಿ ಕಾರ್ಯವೊಂದನ್ನು ಪ್ರಾರಂಭಿಸಿದ್ದಾರೆ. ಇದುವರೆಗೆ ಈ ಮಹಾತಾಯಿ 12 ಲೀಟರ್ ಗಳಷ್ಟು ಎದೆಹಾಲನ್ನು, ತಾಯಿ ಹಾಲಿನ ಅಗತ್ಯವಿರುವ ನವಜಾತ ಶಿಶುಗಳಿಗೆ ಉಣಿಸಿದ್ದಾರೆ.

ಮಾತ್ರವಲ್ಲದೇ ‘ಸೂಪರ್ ಮಾಮ್’ ರುಶೀನಾ ಅವರ ಈ ಕಾರ್ಯದಿಂದ ಪ್ರೇರಣೆ ಪಡೆದು ‘ಅಪರ್ಣಾ ನವಜಾತ ಶಿಶು ಪಾಲನಾ ಕೇಂದ್ರ’ ಎಂಬ ಸಂಸ್ಥೆಯೊಂದು ಇವರ ಜೊತೆ ಕೈಜೋಡಿಸಿದೆ. ಈ ಸಂಸ್ಥೆ ಇದೀಗ ‘ತಾಯಿಯ ಸ್ವಂತ ಹಾಲು’ (ಮದರ್ಸ್ ಓನ್ ಮಿಲ್ಕ್- ಮಾಮ್) ಎಂಬ ಹೆಸರಿನ ಬ್ಯಾಂಕ್ ಒಂದನ್ನು ಸ್ಥಾಪಿಸಿದೆ.

ಈ ಬ್ಯಾಂಕ್ ಮೂಲಕ ಹೆಚ್ಚುವರಿ ಎದೆಹಾಲನ್ನು ಹೊಂದಿರುವ ತಾಯಂದಿರು ನೀಡಿದ ಹಾಲನ್ನು ಸಂಗ್ರಹಿಸಿ ಅವುಗಳನ್ನು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಷೆ ಪಡೆಯುತ್ತಿರುವ ನವಜಾತ ಶಿಶುಗಗಳಿಗೆ ಉಣಿಸುವ ಪ್ರಶಂಸಾರ್ಹ ಕಾರ್ಯವನ್ನು ಅಪರ್ಣಾ ಸಂಸ್ಥೆ ಕಳೆದೊಂದು ವರ್ಷದಿಂದ ಪರಿಣಾಮಕಾರಿಯಾಗಿ ಮಾಡುತ್ತಿದೆ.

ಇವರ ಈ ಕಾರ್ಯಕ್ಕೆ ಇದೀಗ ಹಲವಾರು ಸಮಾನ ಮನಸ್ಕ ತಾಯಂದಿರೂ ಜೊತೆಯಾಗಿರುವುದು ವಿಶೇಷ. ಈಗಾಗಲೇ ಸುಮಾರು 250 ತಾಯಂದಿರು ಅಪರ್ಣಾ ‘ಮಾಮ್ ಬ್ಯಾಂಕ್’ ನಲ್ಲಿ ಸದಸ್ಯರಾಗಿದ್ದಾರೆ. ಇಲ್ಲಿ ಈಗಾಗಲೇ 90 ಲೀಟರ್ ಗಳಷ್ಟು ತಾಯಿ ಎದೆಹಾಲನ್ನು ಸಂಗ್ರಹಿಸಿ ಪ್ರತೀ ಮಗುವಿಗೆ ತಲಾ 150 ಎಂ.ಎಲ್.ನಂತೆ ಸುಮಾರು 600 ಫೀಡಿಂಗ್ ಗಳನ್ನು ಈಗಾಗಲೇ ಮಾಡಿಯಾಗಿದೆ.

Advertisement

ತಮ್ಮ ಮಕ್ಕಳಿಗೆ ಉಣಿಸಿ ಹೆಚ್ಚುವರಿ ಎದೆಹಾಲನ್ನು ಹೊಂದಿರುವ ಮಹಿಳೆಯರು ತನ್ನ ಈ ಕಾರ್ಯದಲ್ಲಿ ಕೈಜೋಡಿಸಬೇಕೆಂದು ರುಶೀನಾ ಅವರು ಎದೆಹಾಲುಣಿಸುವ ತಾಯಂದಿರಿಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ರುಶೀನಾ ಅವರ ಕಾರ್ಯದಿಂದ ಪ್ರೇರಣೆ ಪಡೆದು ತಮಿಳುನಾಡಿನಲ್ಲಿ ಇಬ್ಬರು ಎದೆಹಾಲುಣಿಸುವ ತಾಯಂದಿರು ಎದೆಹಾಲು ನೀಡುವಿಕೆ ಶಿಬಿರಗಳನ್ನು ನಡೆಸಿ ಆ ಮೂಲಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಿಶುಗಳ ಜೀವ ಉಳಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ರುಶೀನಾ ಅವರ ಈ ಕಾರ್ಯಕ್ಕೆ ಬೆಲೆಕಟ್ಟಲಾಗದು. 600 ಗ್ರಾಂನಿಂದ 1.5 ಕೆ.ಜಿ.ವರೆಗೆ ತೂಗುವ ಮತ್ತು ಸೋಂಕುಬಾಧಿತ ಸಾಧ್ಯತೆ ಅಧಿಕವಾಗಿರುವ ನವಜಾತ ಶಿಶುಗಳಿಗೆ ಈಕೆಯ ಎದೆಹಾಲು ಸಂಜೀವಿನಿಯಾಗಿದೆ ಎಂದು ಅಪರ್ಣಾ ನವಜಾತ ಶಿಶು ಪಾಲನಾ ಸಂಸ್ಥೆಯ ಶಿಶುವೈದ್ಯರಾಗಿರುವ ಡಾ. ಆಶೀಶ್ ಮೆಹ್ತಾ ಅವರು ಅಭಿಪ್ರಾಯಪಟ್ಟಿದ್ದಾರೆ.

ನಾರ್ವೆ ಮತ್ತು ಫಿನ್ ಲ್ಯಾಂಡ್ ದೇಶಗಳಲ್ಲಿ ಎದೆ ಹಾಲುಣಿಸುವ ತಾಯಂದಿರು ತಮ್ಮಲ್ಲಿರುವ ಹೆಚ್ಚುವರಿ ಎದೆ ಹಾಲನ್ನು ಅಗತ್ಯ ನವಜಾತ ಶಿಶುಗಳಿಗೆ ನೀಡುವ ಕಾರ್ಯ ರಕ್ತದಾನದ ರೀತಿಯಲ್ಲೇ ನಡೆದುಕೊಂಡು ಬರುತ್ತಿದೆ. ಈ ವಿಧಾನ ನಮ್ಮಲ್ಲೂ ಹೆಚ್ಚು ಪ್ರಚಾರಕ್ಕೆ ಬಂದಲ್ಲಿ ತಾಯಿ ಎದೆಹಾಲಿನಿಂದ ವಂಚಿತವಾಗುವ ಅದೆಷ್ಟೋ ನವಜಾತ ಶಿಶುಗಳಿಗೆ ವರದಾನವಾದೀತು.

Advertisement

Udayavani is now on Telegram. Click here to join our channel and stay updated with the latest news.

Next