ರಕ್ಷಣಾ ಸಚಿವರಾಗಿ ಜಾರ್ಜ್ ಫೆರ್ನಾಂಡಿಸ್ ಪ್ರದರ್ಶಿಸಿರುವ ಕೆಚ್ಚೆದೆಯ ನೆನಪು ಇಂದಿಗೂ ಜನಮಾನಸದಲ್ಲಿ ಹಸಿರಾಗಿ ಉಳಿದಿದೆ. 70 ಮೇಲ್ಪಟ್ಟ ವಯಸ್ಸಲ್ಲೂ ಕೊರೆಯುವ ಚಳಿಯ ಸಿಯಾಚಿನ್‌ಗೆ ಭೇಟಿ ನೀಡಿ ಸೈನಿಕರಿಗೆ ಸ್ಥೈರ್ಯ ತುಂಬಿದರು. ಮಿಗ್ ವಿಮಾನದಲ್ಲಿ ಹಾರಾಟ ನಡೆಸಿ ಕೆಚ್ಚೆದೆ ಪ್ರದರ್ಶಿಸಿದರು.
ಪ್ರಧಾನಿ ವಾಜಪೇಯಿ 1998ರಲ್ಲಿ ಪರಮಾಣು ಪರೀಕ್ಷೆಯಂಥ ದಿಟ್ಟ ನಿರ್ಧಾರ ಕೈಗೊಂಡ ವೇಳೆ ರಕ್ಷಣಾ ಸಚಿವರಾಗಿದ್ದವರು ಇದೇ ಜಾರ್ಜ್. ಪಾಕಿಸ್ಥಾನದ ವಿರುದ್ಧ ಭಾರತ 1999ರಲ್ಲಿ ಕಾರ್ಗಿಲ್ ಯುದ್ಧ ಗೆದ್ದಿದ್ದು ಕೂಡ ಜಾರ್ಜ್ ರಕ್ಷಣಾ ಸಚಿವರಾಗಿದ್ದಾಗಲೇ.
2003ನೇ ಇಸವಿಯ ಜುಲೈ ತಿಂಗಳು. ಮಿಗ್ ಫೈಟರ್ ಜೆಟ್‌ಗಳಿಗೆ ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ ಅಂಟಿದ್ದ ಕಾಲ ವದು. ಈ ವೇಳೆಯಲ್ಲೇ ಹೊಸತಾಗಿ ಬಂದಿದ್ದ ಸುಖೋಯ್- 30 ಸೂಪರ್‌ಸಾನಿಕ್ ಯುದ್ಧ ವಿಮಾನದಲ್ಲಿ ರಕ್ಷಣಾ ಸಚಿವ ಜಾರ್ಜ್ ಹಾರಾಟ ನಡೆಸಿದ್ದರು. ವಿಪಕ್ಷಗಳ ಟೀಕೆಗೆ ವಸ್ತುವಾಯಿತು. ಸುರಕ್ಷಿತ ಸುಖೋಯ್‌ನಲ್ಲಿ ಅಲ್ಲ, ಮಿಗ್-21 ವಿಮಾನದಲ್ಲಿ ಹಾರಲಿ ನೋಡೋಣ ಎಂದು ಸಂಸತ್ತಿನಲ್ಲಿ ನ್ಯಾಶನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಅವರು ಜಾರ್ಜ್ ಅವರಿಗೆ ಸವಾಲೆಸೆದರು. ಅದಕ್ಕೆ ಉತ್ತರಿಸಿದ ಜಾರ್ಜ್, ಆದಷ್ಟು ಶೀಘ್ರದಲ್ಲಿ ನಾನು ಮಿಗ್‌ನಲ್ಲಿ ಪ್ರಯಾಣಿಸಲಿದ್ದೇನೆ ಎಂದು ಘೋಷಿಸಿದರು. ಇದಾದ ಒಂದೇ ವಾರಕ್ಕೆ ಅಂದರೆ ಆಗಸ್ಟ್ 1ರಂದು 73ರ ಹರೆಯದ ಜಾರ್ಜ್ ಅವರು ಮಿಗ್- 21 ವಿಮಾನದಲ್ಲಿ ಕುಳಿತು 25 ನಿಮಿಷ ಹಾರಾಟ ನಡೆಸಿದ್ದರು. ¤.
ಮಿಗ್ ವಿಮಾನಗಳ ಸಮಸ್ಯೆಯನ್ನು ಸ್ವತಃ ಅರಿ ಯುವ ದೃಷ್ಟಿಯಿಂದ ಜಾರ್ಜ್ ಈ ಹಾರಾಟ ಕೈಗೊಂಡಿದ್ದರು. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂಬ ಹಿರಿಮೆಗೆ ಪಾತ್ರವಾಗಿರುವ ಕಾಶ್ಮೀರದ ಸಿಯಾಚಿನ್‌ಗೆ ಜಾರ್ಜ್ ಫೆರ್ನಾಂಡಿಸ್ ಅವರು ರಕ್ಷಣಾ ಸಚಿವರಾಗಿ 32 ಬಾರಿ ಭೇಟಿ ನೀಡಿ ದಾಖಲೆ ನಿರ್ಮಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಸಿಯಾಚಿನ್‌ಗೆ ಮೊದಲ ಭೇಟಿ ನೀಡಿದಾಗ, ಅಲ್ಲಿ ಕೊರೆಯುವ ಚಳಿಯ ಮಧ್ಯೆ ಗಡಿ ಕಾಯುತ್ತಿದ್ದ ಸೈನಿಕರಿಗೆ ಬಟ್ಟೆಗಳ ಕೊರತೆಯಿರುವುದು ಜಾರ್ಜ್‌ಗೆ ಕಂಡುಬಂತು. ಕಾರಣ ಕೇಳಿದಾಗ ಬಜೆಟ್ ಸಮಸ್ಯೆ ಎಂಬ ಉತ್ತರ ದೊರಕಿತು. ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಸಿಯಾಚಿನ್‌ಗೆ ಭೇಟಿ ನೀಡುವಂತೆ ಆದೇಶಿಸಿದರು. ಯೋಧರಿಗೆ ಬಟ್ಟೆಗಳು, ಸ್ನೋಮೊಬೈಲ್‌ಗಳ ವ್ಯವಸ್ಥೆಯಾಗಿತ್ತು. ತಮ್ಮ ಹುಟ್ಟುಹಬ್ಬ, ಕ್ರಿಸ್‌ಮಸ್ ಸಂದರ್ಭಗಳನ್ನು ಯೋಧರ ಜತೆ ಕಳೆಯುತ್ತಿದ್ದರು. ಸೇನಾ ಮುಖ್ಯಸ್ಥರು, ಜನರಲ್‌ಗಳನ್ನು ಮಾತನಾಡಿಸಲು ಜಾರ್ಜ್ ತೆರಳುವಾಗ ಕೈಯಲ್ಲಿ ನೋಟ್‌ಬುಕ್, ಪೆನ್ ಸದಾ ಇರುತ್ತಿತ್ತು. ಜಾರ್ಜ್ ಭಾಷಣ ಮಾಡುತ್ತಿರಲಿಲ್ಲ. ದೂರುಗಳನ್ನು ತಮ್ಮ ಪುಸ್ತಕದಲ್ಲಿ ದಾಖಲಿಸುತ್ತಿದ್ದರು.