Advertisement

ಸೂಪರ್‌ ಓವರ್‌ ಥ್ರಿಲ್ಲರ್‌; ಭಾರತಕ್ಕೆ ಬಂಪರ್‌

09:59 AM Jan 31, 2020 | sudhir |

ಹ್ಯಾಮಿಲ್ಟನ್‌: ಸರಣಿಯ ಮೊದಲ ಗೆಲುವಿನತ್ತ ಭರ್ಜರಿ ಓಟ ಬೆಳೆಸಿದ್ದ ಕಿವೀಸ್‌, ಅಂತಿಮ ಓವರ್‌ನಲ್ಲಿ ಶಮಿ ಬೌಲಿಂಗ್‌ ಮೋಡಿ, ಪಂದ್ಯಕ್ಕೆ ಟೈ ಮುದ್ರೆ, ಓವರ್‌ ಟು ಸೂಪರ್‌ ಓವರ್‌, ರೋಹಿತ್‌ ಶರ್ಮ ಅಸಾಮಾನ್ಯ ಸಾಹಸ, ಅಂತಿಮ 2 ಎಸೆತಗಳಲ್ಲಿ ಆಗಸಕ್ಕೆ ನೆಗೆದ ಸೌಥಿ ಎಸೆತ, ಸಿಕ್ಸರ್‌ ಸಿಡಿತ… ಈ ರೀತಿಯಾಗಿ ಚುಟುಕು ಕ್ರಿಕೆಟಿನ ಅಷ್ಟೂ ರೋಮಾಂಚನ, ರಸದೌತಣವನ್ನು ಉಣಬಡಿಸಿದ ಬುಧವಾರದ ಹ್ಯಾಮಿಲ್ಟನ್‌ ಪಂದ್ಯವನ್ನು ಗೆಲ್ಲುವ ಮೂಲಕ ಟೀಮ್‌ ಇಂಡಿಯಾ ನ್ಯೂಜಿಲ್ಯಾಂಡ್‌ ನೆಲದಲ್ಲಿ ಮೊದಲ ಸಲ ಟಿ20 ಸರಣಿ ವಶಪಡಿಸಿಕೊಂಡು ಇತಿಹಾಸ ನಿರ್ಮಿಸಿತು!

Advertisement

ಆಕ್ಲೆಂಡ್‌ನ‌ಲ್ಲಿ ನಡೆದ ಎರಡೂ ಪಂದ್ಯಗಳನ್ನು ಗೆದ್ದ ಹುರುಪಿನಲ್ಲಿ ಭಾರತ “ಸೆಡ್ಡನ್‌ ಪಾರ್ಕ್‌’ನಲ್ಲಿ ಆಡಲಿಳಿದಿತ್ತು. ಮತ್ತೂಮ್ಮೆ ನ್ಯೂಜಿಲ್ಯಾಂಡಿಗೆ ಸಡ್ಡು ಹೊಡೆದು ಮೆರೆದಾಡಿತು. ಮೊದಲು ಬ್ಯಾಟಿಂಗ್‌ ನಡೆಸಿದ ಕೊಹ್ಲಿ ಪಡೆ 5 ವಿಕೆಟಿಗೆ 179 ರನ್‌ ಪೇರಿಸಿತು. ಗೆಲುವಿನ ಹಾದಿಯಲ್ಲಿದ್ದ ನ್ಯೂಜಿಲ್ಯಾಂಡ್‌, ಕೊನೆಯ ಹಂತದಲ್ಲಿ ಲಯ ಕಳೆದುಕೊಂಡು 6 ವಿಕೆಟಿಗೆ 179 ರನ್‌ ಮಾಡಿ ಅಸಹಾಯಕ ನೋಟ ಬೀರಿತು. ಸೂಪರ್‌ ಓವರ್‌ನಲ್ಲಿ ಸೂಪರ್‌ ಪ್ರದರ್ಶನ ನೀಡಿದ ಭಾರತವೀಗ 5 ಪಂದ್ಯಗಳ ಸರಣಿಯಲ್ಲಿ 3-0 ಭರ್ಜರಿ ಮುನ್ನಡೆ ಸಾಧಿಸಿದೆ.

ಭಾರತದ ಅಬ್ಬರಕ್ಕೆ ಬ್ರೇಕ್‌
ಭಾರತಕ್ಕೆ ರೋಹಿತ್‌-ಕೆ.ಎಲ್‌. ರಾಹುಲ್‌ ಭರ್ಜರಿ ಆರಂಭ ಒದಗಿಸಿದರು. ಇಬ್ಬರೂ ಹತ್ತರ ಸರಾಸರಿಯಲ್ಲಿ ಬ್ಯಾಟ್‌ ಬೀಸತೊಡಗಿದರು. 9 ಓವರ್‌ಗಳಿಂದ 89 ರನ್‌ ಒಟ್ಟುಗೂಡಿತು. ಈ ಅಬ್ಬರ ಕಂಡಾಗ ಭಾರತ ಇನ್ನೂರರ ಗಡಿ ದಾಟಿ ಬಹಳ ಮುಂದೆ ಸಾಗುವ ಸೂಚನೆ ನೀಡಿತ್ತು. ಆದರೆ ಅನಂತರ ಕಿವೀಸ್‌ ಬೌಲರ್ ಪ್ರವಾಸಿಗರಿಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾದರು.

ಮೊದಲು ನಿರ್ಗಮಿಸಿದ ರಾಹುಲ್‌ 19 ಎಸೆತಗಳಿಂದ 27 ರನ್‌ ಮಾಡಿದರು (2 ಬೌಂಡರಿ, 1 ಸಿಕ್ಸರ್‌). ಸರಣಿಯಲ್ಲಿ ಮೊದಲ ಸಲ ಸಿಡಿದ ರೋಹಿತ್‌ 40 ಎಸೆತ ಎದುರಿಸಿ 65 ರನ್‌ ಬಾರಿಸಿದರು. 6 ಬೌಂಡರಿ, 3 ಸಿಕ್ಸರ್‌ ಬಾರಿಸಿ ರಂಜಿಸಿದರು.
ವನ್‌ಡೌನ್‌ನಲ್ಲಿ ಬಂದ ಶಿವಂ ದುಬೆ ಕ್ಲಿಕ್‌ ಆಗಲಿಲ್ಲ. ಅವರ ಆಟ ಮೂರೇ ರನ್ನಿಗೆ ಮುಗಿಯಿತು. ಅನಂತರ ಕ್ರೀಸ್‌ ಇಳಿದ ಕ್ಯಾಪ್ಟನ್‌ ಕೊಹ್ಲಿ ಕೊಡುಗೆ 27 ಎಸೆತಗಳಿಂದ 38 ರನ್‌ (2 ಬೌಂಡರಿ, 1 ಸಿಕ್ಸರ್‌). ಕಳೆದೆರಡು ಪಂದ್ಯಗಳ ಹೀರೋ ಶ್ರೇಯಸ್‌ ಅಯ್ಯರ್‌ 17 ರನ್ನಿಗೆ ಔಟಾದರು (16 ಎಸೆತ, 1 ಸಿಕ್ಸರ್‌). ಪಾಂಡೆ (14)-ಜಡೇಜ (10) ಅಜೇಯರಾಗಿ ಉಳಿದರು.

ಸಿಹಿ ತರದ “ಕೇನ್‌’
ನ್ಯೂಜಿಲ್ಯಾಂಡ್‌ ಕೇನ್‌ ವಿಲಿಯಮ್ಸನ್‌ ಸಾಹಸದೊಂದಿಗೆ ಗೆಲುವಿನತ್ತ ಓಟ ಬೆಳೆಸಿತು. ಗಪ್ಟಿಲ್‌ (31)-ಮುನ್ರೊ (14) ಅಬ್ಬರ ಕೂಡ ಜೋರಾಗಿಯೇ ಇತ್ತು. 5.4 ಓವರ್‌ಗಳಿಂದ 47 ರನ್‌ ಒಟ್ಟುಗೂಡಿತು. 11ನೇ ಓವರಿನಲ್ಲಿ ಸ್ಯಾಂಟ್ನರ್‌ (9) 3ನೇ ವಿಕೆಟ್‌ ರೂಪದಲ್ಲಿ ಔಟಾದ ಬಳಿಕ ವಿಲಿಯಮ್ಸನ್‌ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತಂದರು. ಭಾರತದ ಬೌಲರ್‌ಗಳನ್ನು ದಂಡಿಸಿ ಬೊಂಬಾಟ್‌ ಪ್ರದರ್ಶನವಿತ್ತರು. ಈ ನಡುವೆ ಗ್ರ್ಯಾಂಡ್‌ಹೋಮ್‌ (5) ವಿಕೆಟ್‌ ಬಿದ್ದರೂ ವಿಲಿಯಮ್ಸನ್‌ ವಿಚಲಿತರಾಗಲಿಲ್ಲ. ದುರದೃಷ್ಟವಶಾತ್‌ “ಕೇನ್‌’ಗೆ ಗೆಲುವಿನ ಸಿಹಿ ಕೊಡಲಾಗಲಿಲ್ಲ.

Advertisement

ವಿಲಿಯಮ್ಸನ್‌ 48 ಎಸೆತಗಳಿಂದ 95 ರನ್‌ ಬಾರಿಸಿದರು. ಇದರಲ್ಲಿ 6 ಪ್ರಚಂಡ ಸಿಕ್ಸರ್‌, 8 ಫೋರ್‌ ಒಳಗೊಂಡಿತ್ತು. ಇದು ಅವರ 11ನೇ ಅರ್ಧ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

ಭಾರತದ ಪರ ಠಾಕೂರ್‌, ಶಮಿ ತಲಾ 2 ವಿಕೆಟ್‌ ಕಿತ್ತರು. ಬುಮ್ರಾ ಎರಡೂ ಸಲ ಚೆನ್ನಾಗಿ ದಂಡಿಸಿಕೊಂಡರು.

ಸೂಪರ್‌ ಓವರ್‌ ಕಲ್ಪನೆಯೇ ಇರಲಿಲ್ಲ: ರೋಹಿತ್‌
“ನನಗೆ ಸೂಪರ್‌ ಓವರ್‌ ಕಲ್ಪನೆಯೇ ಇರಲಿಲ್ಲ. ಇದರ ನಿರೀಕ್ಷೆಯಲ್ಲೂ ಇರಲಿಲ್ಲ. ಇದು ನನಗೆ ಮೊದಲ ಅನುಭವ. ಇದನ್ನು ಹೇಗೆ ನಿಭಾಯಿಸಬೇಕೆಂಬ ಸ್ಪಷ್ಟ ಅರಿವು ನನ್ನಲ್ಲಿರಲಿಲ್ಲ…’ ಎಂಬುದಾಗಿ ಹ್ಯಾಮಿಲ್ಟನ್‌ ಪಂದ್ಯದ ಹೀರೋ ರೋಹಿತ್‌ ಶರ್ಮ ಹೇಳಿದ್ದಾರೆ.

“ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು ಎಂಬ ಗೊಂದಲ ನನ್ನನ್ನು ಕಾಡುತ್ತಲೇ ಇತ್ತು. ಮೊದಲ ಎಸೆತದಲ್ಲೇ ದೊಡ್ಡ ಹೊಡೆತ ಬಾರಿಸಬೇಕೇ ಅಥವಾ ಕೊನೆಯ ಎಸೆತಗಳಲ್ಲಿ ಸಿಡಿಯಬೇಕೇ ಎಂದು ಯೋಚಿಸುತ್ತಿದ್ದೆ. ಕೊನೆಗೆ ಬೌಲರ್‌ ತಪ್ಪು ಮಾಡುವುದನ್ನೇ ಕಾಯುತ್ತ ಉಳಿದೆ. ಇದರ ಫ‌ಲವೇ ಈ ಸಿಕ್ಸರ್…’ ಎಂದು ರೋಹಿತ್‌ ತಮ್ಮ ಸಾಹಸವನ್ನು ಬಣ್ಣಿಸಿದರು.

ಈ ಸಂದರ್ಭದಲ್ಲಿ ಅವರು ಇನ್ನೊಂದು ಸ್ವಾರಸ್ಯವನ್ನೂ ತೆರೆದಿಟ್ಟರು. “ಪಂದ್ಯ ಸೂಪರ್‌ ಓವರ್‌ಗೆ ಕಾಲಿಡಲಿದೆ ಎಂಬ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ನನ್ನ ಬ್ಯಾಟಿಂಗ್‌ ಮುಗಿದೊಡನೆ ಪರಿಕರಗಳನ್ನೆಲ್ಲ ಪ್ಯಾಕ್‌ ಮಾಡಿದ್ದೆ. ಸೂಪರ್‌ ಓವರ್‌ ವೇಳೆ ಮತ್ತೆ ಬ್ಯಾಟಿಂಗಿಗೆ ಇಳಿಯಬೇಕಾಗಿ ಬಂದಾಗ ನನ್ನ “ಅಬೊxàಮೆನ್‌ ಗಾರ್ಡ್‌’ (ರಕ್ಷಾಕವಚ) ಹುಡುಕಲು 5 ನಿಮಿಷ ತಗುಲಿತು. ಇದನ್ನು ಎಲ್ಲಿಟ್ಟಿದ್ದೆ ಎಂಬುದೇ ಮರೆತು ಹೋಗಿತ್ತು…!’ ಎಂದರು.

ಸತತ 2 ಸಿಕ್ಸರ್‌ ಬಾರಿಸಿ ತಂಡವನ್ನು ಗೆಲ್ಲಿಸುವ ಕಾಲವಿದು!
ಶಾರ್ಜಾದಲ್ಲಿ ನಡೆದ 1986ರ ಆಸ್ಟ್ರೇಲೇಶ್ಯ ಕಪ್‌ ಫೈನಲ್‌ನಲ್ಲಿ ಜಾವೇದ್‌ ಮಿಯಾಂದಾದ್‌ ಭಾರತದ ಚೇತನ್‌ ಶರ್ಮ ಎಸೆದ ಪಂದ್ಯದ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಪಾಕಿಸ್ಥಾನಕ್ಕೆ ಗೆಲುವು ತಂದಿತ್ತದ್ದು ಆ ಕಾಲಕ್ಕೆ ಅಸಾಮಾನ್ಯ ಸಾಹಸವಾಗಿತ್ತು. ಆದರೀಗ ಕಾಲ ಬದಲಾಗಿದೆ. ಒಂದಲ್ಲ, ಪಂದ್ಯದ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿ ತಂಡದ ಜಯಭೇರಿ ಮೊಳಗಿಸುವ ಸಾಹಸಿಗಳ ಜಮಾನಾ ಇದು. ಬುಧವಾರ ಹ್ಯಾಮಿಲ್ಟನ್‌ನಲ್ಲಿ ಇದಕ್ಕೆ ಉತ್ತಮ ನಿದರ್ಶನ ಸಿಕ್ಕಿತು.

ಜಸ್‌ಪ್ರೀತ್‌ ಬುಮ್ರಾ ಎಸೆದ ಸೂಪರ್‌ ಓವರ್‌ನಲ್ಲಿ ನ್ಯೂಜಿಲ್ಯಾಂಡ್‌ ವಿಕೆಟ್‌ ನಷ್ಟವಿಲ್ಲದೆ 17 ರನ್‌ ಪೇರಿಸಿ ಸವಾಲೊಡ್ಡಿತು. ವಿಲಿಯಮ್ಸನ್‌ ಮತ್ತು ಗಪ್ಟಿಲ್‌ ಮೊದಲೆರಡು ಎಸೆತಗಳಲ್ಲಿ ತಲಾ ಒಂದೊಂದು ರನ್‌ ಗಳಿಸಿದರು. ಮುಂದಿನ 3 ಎಸೆತಗಳಲ್ಲಿ ವಿಲಿಯಮ್ಸನ್‌ 11 ರನ್‌ ಚಚ್ಚಿದರು (6, 4, 1). ಗಪ್ಟಿಲ್‌ ಕೊನೆಯ ಎಸೆತವನ್ನು ಬೌಂಡರಿಗೆ ರವಾನಿಸಿದರು.

ಅಬ್ಬರಿಸಿದ ರೋಹಿತ್‌ ಶರ್ಮ
ಚೇಸಿಂಗಿಗೆ ಬಂದವರು ರೋಹಿತ್‌ ಶರ್ಮ ಮತ್ತು ಕೆ.ಎಲ್‌. ರಾಹುಲ್‌. ಬೌಲರ್‌ ಟಿಮ್‌ ಸೌಥಿ. ಮೊದಲೆರಡು ಎಸೆತಗಳಲ್ಲಿ ರೋಹಿತ್‌ 3 ರನ್‌ ಮಾಡಿದರು (2, 1). ಮುಂದಿನೆರಡು ಎಸೆತಗಳಲ್ಲಿ ರಾಹುಲ್‌ ಬ್ಯಾಟ್‌ನಿಂದ 5 ರನ್‌ ಬಂತು. (4, 1). ಕೊನೆಯ 2 ಎಸೆತಗಳಲ್ಲಿ 10 ರನ್‌ ತೆಗೆಯುವ ಒತ್ತಡ… 5ನೇ ಎಸೆತವನ್ನು ಯಾರ್ಕರ್‌ ಹಾಕುವಲ್ಲಿ ಸೌಥಿ ಎಡವಿದರು. ಇದಕ್ಕಾಗಿಯೇ ಕಾದಿದ್ದ ರೋಹಿತ್‌ ಶರ್ಮ ಚೆಂಡನ್ನು ರಾತ್ರಿಯ ಆಗಸದಲ್ಲಿ ಡೀಪ್‌ ಸ್ಕ್ವೇರ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದರು. ಕಿವೀಸ್‌ ಪಾಳೆಯದಲ್ಲಿ ಢವಢವ…ಕೊನೆಯ ಎಸೆತದಲ್ಲಿ 4 ರನ್‌ ತೆಗೆಯುವ ಅನಿವಾರ್ಯತೆ. ಗ್ರೌಂಡ್‌ ಶಾಟ್‌ ಬಾರಿಸಿದರೆ ಲಾಭವಿಲ್ಲ ಎಂಬುದನ್ನು ಅರಿತ ರೋಹಿತ್‌ಶರ್ಮ, ಮತ್ತೂಂದು ದೊಡ್ಡ ಹೊಡೆತಕ್ಕೆ ಸಜ್ಜಾಗಿಯೇ ನಿಂತರು. ತುಸು ನಿಧಾನ ಗತಿಯಲ್ಲಿ ಬಂದ ಚೆಂಡು ಲಾಂಗ್‌ ಆಫ್ ಮಾರ್ಗವಾಗಿ ಆಗಸಕ್ಕೆ ನೆಗೆಯಿತು.

Advertisement

Udayavani is now on Telegram. Click here to join our channel and stay updated with the latest news.

Next