Advertisement

ಭೀಮಾ ತೀರದಲ್ಲಿ ಮತ್ತೆ ಸುಪಾರಿ ಗ್ಯಾಂಗ್ ಹಾವಳಿ: ಬೀದರ್ ಯುವಕನ ಅಪಹರಿಸಿ, ಚಿತ್ರಹಿಂಸೆ

02:24 PM Nov 20, 2021 | Team Udayavani |

ವಿಜಯಪುರ‌: ಭೀಮಾ ತೀರದಲ್ಲಿ ಮತ್ತೆ ಹಣಕ್ಕಾಗಿ ಕ್ರಿಮಿನಲ್ ಕೃತ್ಯ ಎಸಗುವ ಸುಪಾರಿ ಗೂಂಡಾಗಿರಿ ತಲೆ ಎತ್ತಿದೆ. ಬೀದರ್ ಮೂಲದ ಓರ್ವ ವ್ಯಕ್ತಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕೃತ್ಯ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆಗೆ ಇಳಿದಿದ್ದಾರೆ.

Advertisement

ಭೀಮಾ ತೀರದಲ್ಲಿ ಹಣಕ್ಕಾಗಿ ಅಪಹರಣ ಮಾಡುವ ದಂಧೆಗೆ ಕೈ ಹಾಕಿರುವ ಗೂಂಡಾಗಳು, ಬೀದರ್ ಮೂಲದ ಯುವಕನನ್ನು ಅಪಹರಿಸಿ ಜಿಲ್ಲೆಯ ಆಲಮೇಲಗೆ ಕರೆತಂದಿದ್ದಾರೆ ಎನ್ನಲಾಗಿದೆ.

ಕಬ್ಬು ಕಟಾವು ವಿಷಯದಲ್ಲಿ ಪಡೆದಿದ್ದ ಮುಂಗಡ ಹಣದ ವಿಷಯದಲ್ಲಿ ಉಂಟಾದ ಜಗಳದಲ್ಲಿ ವ್ಯಕ್ತಿಯನ್ನು ಅಪಹರಿಸಲು ಸುಪಾರಿ ನೀಡಿದ ಆರೋಪ ಕೇಳಿ ಬಂದಿದೆ. 6 ಲಕ್ಷ ರೂ. ವ್ಯವಹಾರ ಹಣ ವಸೂಲಿಗೆ ಬದಲಾಗಿ 30 ಲಕ್ಷ ರೂ.ಗೆ ಬೇಡಿಕೆ ಇರಿಸಿ, ಚಿತ್ರಹಿಂಸೆ ನೀಡುತ್ತಿರುವ ಪ್ರಕರಣ ಹೊರ ಬಿದ್ದಿದೆ.

ಬೀದರ್ ಜಿಲ್ಲೆಯ ಔರಾದ್ ಮೂಲದ ರವಿ ರಾಠೋಡ್ ಎಂಬಾತನೇ ಅಪಹರಣಕ್ಕೀಡಾದ ಯುವಕ. ವಿಜಯಪುರ ಜಿಲ್ಲೆಯ ಆಲಮೇಲ ಮೂಲದ ಈರಣ್ಣ ಹುನ್ನೂರು ಎಂಬಾತ ನೀಡಿದ ಸುಪಾರಿ ಹಣದಿಂದಾಗಿ ಯುವಕನನ್ನು ಅಪಹರಿಸಿ ತಂದಿದ್ದಾರೆ. ಕಳೆದ 10 ದಿನಗಳಿಂದ ರವಿ ರಾಠೋಡ್‌ನನ್ನು ತಮ್ಮ ಬಳಿಯೇ ಇರಿಸಿಕೊಂಡು ಚಿತ್ರಹಿಂಸೆ ನೀಡುತ್ತಿದ್ದಾರೆ.

Advertisement

ಆಲಮೇಲ ಮೂಲದ ಈರಣ್ಣ ಹುನ್ನಳ್ಳಿ ಎಂಬಾತ ಸುಪಾರಿ ನೀಡಿ ಅಪಹರಣ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ 6 ಲಕ್ಷ ರೂ ಬದಲಿಗೆ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಅಪಹರಣಕಾರರು ರವಿಗೆ ನಿತ್ಯವೂ ದೈಹಿಕ ಹಿಂಸೆ ನೀಡುತ್ತಿದ್ದಾರೆ. ಸೂಜಿಯಿಂದ ರವಿಗೆ ಚುಚ್ಚಿ ಚಿತ್ರಹಿಂಸೆ ನೀಡುತ್ತಲೇ ಆತನ ಕುಟುಂಬ ಸದಸ್ಯರಿಗೆ ಮೊಬೈಲ್ ಕರೆ ಮಾಡಿ, ರವಿ ಅನುಭವಿಸುತ್ತಿರುವ ರೋಧನ ಕೇಳಿಸುತ್ತಾ ಹಣಕ್ಕಾಗಿ ಬೇಡಿಕೆ ಇರಿಸಿ, ಬೆದರಿಕೆ ಹಾಕುತ್ತಿದೆ. ಹೀಗಂತ ರವಿ ಪೋಷಕರು ತಮ್ಮ ಮಗನ‌ ರಕ್ಷಣೆಗೆ ಅಗ್ರಹಿಸಿ ಬೀದರ‌ ಪೊಲೀಸರಿಗೆ ದೂರು ನೀಡಿದ್ದಾರೆ.

ರವಿಯನ್ನು ಮಹಾರಾಷ್ಟ್ರದ ನಾಂದೆಡ್ ಜಿಲ್ಲೆಯ ಮರಕಲ್ ಬಳಿಯಿಂದ ಅಪಹರಿಸಿದ್ದಾಗಿ, ಮರಕಲ್ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಜೊತೆಗೆ ಮಗನ ರಕ್ಷಣೆ ಮಾಡುವಂತೆ ಬೀದರ ಜಿಲ್ಲೆಯ ಎಸ್ಪಿ ಕಚೇರಿಗೂ ರವಿ ಪೋಷಕರು ಮನವಿ ಸಲ್ಲಿಸಿದ್ದಾರೆ.

ಇತ್ತ ದೂರು ದಾಖಲಿಸಿಕೊಂಡಿರುವ ಮಹಾರಾಷ್ಟ್ರದ ನಾಂದೇಡ ಪೊಲೀಸರು ಜಿಲ್ಲೆಯ ಆಲಮೇಲಗೆ ಆಗಮಿಸಿದ್ದು, ಆರೋಪಿ ಹಾಗೂ ಅಪಹೃತನ ರಕ್ಷಣೆಗೆ ಶೋಧ ನಡೆಸಿದ್ದಾರೆ.

ಮಹಾರಾಷ್ಟ್ರ ಪೊಲೀಸರು ಆಲಮೇಲಕ್ಕೆ ಬಂದಿದ್ದು, ತನಗಾಗಿ ಶೋಧ ಆರಂಭಿಸಿರುವ ವಿಷಯ ಈರಣ್ಣನಿಗೆ ತಿಳಿದಿದೆ. ಹೀಗಾಗಿ ತನ್ನ ಬಳಿ ಹಿಡಿತದಲ್ಲಿರುವ ರವಿ ರಾಠೋಡಗೆ ವಿಕೃತ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾನೆ ಎಂದು ರವಿ ಪೋಷಕರು ಬೀದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಪಹರಣಕಾರ ಈರಣ್ಣ ಹುನ್ನಳ್ಳಿ ದೊಡ್ಡ ಮಟ್ಟದ ತಂಡ ಹೊಂದಿದ್ದು, ಪೊಲೀಸರ ಪ್ರತಿ ಚಲನವಲನಗಳ ಮಾಹಿತಿ ಪಡೆಯುತ್ತಿದ್ದಾನೆ ಎನ್ನಲಾಗಿದೆ.

ತನ್ನ ಶೋಧಕ್ಕೆ ಬಂದಿರುವ ಪೊಲೀಸರು ಎಲ್ಲಿದ್ದಾರೆ, ಯಾರೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ, ಸ್ಥಳೀಯ ಪೊಲೀಸ್ ಠಾಣೆಗೆ ಇಷ್ಟು ಜನರೊಂದಿಗೆ,ಎಷ್ಟು ಗಂಟೆಗೆ ಬಂದಿದ್ದಾರೆ ಎಂದು ಪೋನ್ ನಲ್ಲಿ ರವಿ ಪೋಷಕರಿಗೆ ಮಾಹಿತಿ ನೀಡುತ್ತಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ಉಪ್ಪಿನಂಗಡಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿ ವಿದ್ಯಾರ್ಥಿನಿ

ಹೀಗಾಗಿ ರವಿ ಕುಟುಂಬದವರು ಪೊಲೀಸರ ಮೇಲೆ ಅನುಮಾನದ ಜೊತೆಗೆ, ಮಗನ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾರೆ ಎನ್ನಲಾಗಿದೆ.

ಕಬ್ಬಿನ ಕಟಾವು ಕೆಲಸಕ್ಕೆ ಅಡ್ವಾನ್ಸ್ ರೂಪದಲ್ಲಿ ಈರಣ್ಣ ಹುನ್ನಳ್ಳಿ ಬೀದರ ಮೂಲದ ರವಿ ರಾಠೋಡ, ಆತನ ಗೆಳೆಯ ಮಾರುತಿ ಜಾಧವ ಗೆ 6 ಲಕ್ಷ ರೂ. ಪಡೆದುದ್ದು, ಇದೀಗ ಮಾರುತಿ ಪರಾರಿ ಆಗಿದ್ದಾನೆ ಎನ್ನಲಾಗಿದೆ.‌ ಈ ಕಾರಣಕ್ಕಾಗಿಯೇ ಹಣಕಾಸು ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ರವಿಯನ್ನು ಅಪಹರಿಸಲು ಈರಣ್ಣನು ಕುಖ್ಯಾತ ಭೀಮಾ ತೀರದ ಕ್ರಿಮಿನಲ್ ತಂಡಕ್ಕೆ ಅಪಹರಣ ಸುಪಾರಿ ನೀಡಿದ್ದಾನೆ ಎನ್ನಲಾಗಿದೆ.

ಒಂದೊಮ್ಮೆ ತಾವು ಕೇಳಿದಷ್ಟು ಹಣ ನೀಡದಿದ್ದರೆ ರವಿಯ ಕಿಡ್ನಿ ಕತ್ತರಿಸಿ ಮಾರ್ತಿವಿ, ಕೊಲೆ ಮಾಡಲೂ ಹಿಂಜರಿಯಲ್ಲ ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದಾರೆ ಎಂದು ರವಿ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿ, ಆತಂಕ ತೋಡಿಕೊಂಡಿದ್ದಾರೆ.

ಪೊಲೀಸರಿಗೆ ದೂರು ಕೊಟ್ಟಿದ್ದರಿಂದ ರವಿಯನ್ನ ಇನ್ನೂ 1000 ಕಿ.ಮೀ ದೂರ ನಿಗೂಢ ಸ್ಥಳಕ್ಕೆ ಕೊಂಡೊಯ್ಯುತ್ತೇವೆ ಎಂದು ಈರಣ್ಣ ಹೇಳುತ್ತಿದ್ದಾನಂತೆ. ಅಲ್ಲದೇ ರವಿಗೆ ಚಿತ್ರಹಿಂಸೆ ನೀಡುವಾಗ ಚೀರಾಡುತ್ತ ನರಳುವ ಧ್ವನಿಯನ್ನು ಕೇಳಿಸಿ ಅಪಹರಣಕಾರರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆತಂಕ ತೋಡಿಕೊಂಡಿದ್ದಾರೆ.

ಹಣಕ್ಕಾಗಿ ಬೀದರನಲ್ಲಿರುವ ಜಮೀನು ಮಾರಾಟ ಮಾಡಲು ರವಿ ಕುಟುಂಬಸ್ಥರು ಮುಂದಾಗಿದ್ದಾರೆ. ತುರ್ತಾಗಿ ಹಣ ಹೊಂದಿಸಿಕೊಂಡು ನೇರವಾಗಿ ಹಣ ತರದೇ, ಬ್ಯಾಂಕ್ ಅಕೌಂಟ್ ಗೆ ಹಾಕಿ ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ರವಿ ಕುಟುಂಬದವರು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ರವಿಯ ಜೊತೆ ಇನ್ನಿಬ್ಬರನ್ನ ಹೆಣ ಬೀಳೋಹಾಗೆ ಹೊಡೆದಿದ್ದೀವಿ ಎಂದಿರುವ ಅಪಹರಣಕಾರರ ಮಾತಿನಿಂದ, ಮೂವರ ಅಪಹರಣ ಆಗಿರುವ ಶಂಕೆಯೂ ವ್ಯಕ್ತವಾಗಿದೆ.

ಈ ಮಧ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದು, ಎಸ್ಪಿ ಆನಂದಕುಮಾರ ಆದೇಶದ ಮೇರೆಗೆ ವಿಜಯಪುರ ಜಿಲ್ಲೆಯ ಇಂಡಿ ಉಪ ವಿಭಾಗದ ಡಿಎಸ್ಪಿ ಶ್ರೀಧರ ದೊಡ್ಡಿ ನೇತೃತ್ವದ ಪೊಲೀಸರ ತಂಡವೂ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next