ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿದ್ದ ಪ್ರಕರಣವನ್ನು ಭೇದಿಸಿರುವ ವೈಯಾಲಿಕಾವಲ್ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿ.20ರಂದು ನಡೆದ ಸಿದ್ಧಾಂತಿ ಬ್ಲಾಕ್‌ನ ನಿವಾಸಿ ವಿನುತಾ (34) ಕೊಲೆ ಪ್ರಕರಣ ಸಂಬಂಧ, ಸುಪಾರಿ ನೀಡಿದ ಪತಿ ನರೇಂದ್ರ ಬಾಬು, ಕೊಲೆ ಮಾಡಿದ ಪ್ರಶಾಂತ್, ಜಗ್ನನ್ನಾಥ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಡಿ.21ರಂದು ಬೆಳಿಗ್ಗೆ ತನ್ನ ಮನೆಯಲ್ಲಿ ವಿನುತಾ ಪ್ರಜ್ಞಾಹೀನಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಆಕೆಯ ತಾಯಿ ಮುನಿಲಕ್ಷ್ಮೀ ಅವರು ನೋಡಿದ್ದರು. ವಿನುತಾ ಸಾವಿನ ಸಂಬಂಧ ಆಕೆಯ ಗಂಡ ನರೇಂದ್ರ ಬಾಬು ಹಾಗೂ ಅವರ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶೇಷಾದ್ರಿಪುರ ಉಪವಿಭಾಗದ ಎಸಿಪಿ ಬಶೀರ್ ಅಹ್ಮದ್ ಮತ್ತು ಇನ್ಸ್‌ಪೆಕ್ಟರ್ ಯೋಗೇಂದ್ರ ಕುಮಾರ್ ನೇತೃತ್ವದ ತಂಡ, ವಿನುತಾ ಅವರು ವಾಸವಿದ್ದ ಕಟ್ಟಡದ ಮೇಲ್ಚಾವಣಿಯಲ್ಲಿರುವ ಕೊಠಡಿಯಲ್ಲಿ ವಾಸವಿರುವ ಪ್ರಶಾಂತ್‌ನನ್ನು ವಶಕ್ಕೆ ಪಡೆದು ಆತ ನೀಡಿದ ಮಾಹಿತಿ ಮೇರೆಗೆ ಆಟೋ ಚಾಲಕ ಜಗನ್ನಾಥ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಚು ಬಹಿರಂಗಪಡಿಸಿದ್ದಾರೆ. ವಿನುತಾ ಅವರನ್ನು ಕೊಲ್ಲಲು ಅವರ ಪತಿ ನರೇಂದ್ರ ಸುಪಾರಿ ನೀಡಿದ್ದ ಎಂಬುದಾಗಿಯೂ ತಿಳಿಸಿದ್ದಾರೆ.
ಕೌಟುಂಬಿಕ ಕಲಹಕ್ಕೆ ಸುಪಾರಿ: “ವಿಚ್ಛೇದನಕ್ಕೆ ತಡೆಯಾಜ್ಞೆ ತರುವ ಜತೆಗೆ, ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ಪತ್ನಿ ವಿನುತಾ ಕಿರುಕುಳ ನೀಡುತ್ತಿದ್ದಳು. ಅಲ್ಲದೆ, ಮನೆಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಬೇಡಿಕೆ ಇಟ್ಟ ಕಾರಣ ಕೊಲೆ ಮಾಡಿಸಿದ್ದಾಗಿ ಆರೋಪಿ ನರೇಂದ್ರ ಬಾಬು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನರೇಂದ್ರ ಬಾಬುನಿಂದ ಸುಪಾರಿ ಪಡೆದಿದ್ದ ಆರೋಪಿಗಳಾದ ಪ್ರಶಾಂತ್ ಮತ್ತು ಜಗನ್ನಾಥ್, ವಿನುತಾ ಅವರು ಮನೆಯಲ್ಲಿ ಇಲ್ಲದ ವೇಳೆ ಡಿ.20ರಂದು ಸ್ನಾನದ ಕೊಠಡಿಯ ಕಿಟಕಿಯ ಸರಳು ಕತ್ತರಿಸಿ ಒಳ ನುಗ್ಗಿ ಅವಿತುಕೊಂಡಿದ್ದರು. ಮಧ್ಯಾಹ್ನ ಆಕೆ ಮನೆಗೆ ಬಂದು ಸೋಫಾ ಮೇಲೆ ಕುಳಿತಿದ್ದಾಗ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿ ಪರಾರಿ ಯಾಗಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಡಿ.31ರವರೆಗೆ ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿ ಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು ಹೇಳಿದರು.