ಪುತ್ತೂರು: ಕಾಲೇಜು ಸಮವಸ್ತ್ರ ಧರಿಸಿರುವ ವಿದ್ಯಾರ್ಥಿ , ವಿದ್ಯಾರ್ಥಿನಿಯರು ಕಾರೊಂದರಲ್ಲಿ ಸರಸದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ದಕ್ಷಿಣ ಕನ್ನಡ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
ಒಬ್ಬಳು ಕಾಲೇಜು ವಿದ್ಯಾರ್ಥಿನಿ ಮತ್ತು ಮೂವರು ವಿದ್ಯಾರ್ಥಿಗಳು ಸಾಮೂಹಿಕವಾಗಿ ಈ ಕೃತ್ಯದಲ್ಲಿ ತೊಡಗಿರುವ ವೀಡಿಯೊ ವೈರಲ್ ಆಗಿದ್ದು ಇದರಲ್ಲಿ ಇನ್ನೋರ್ವ ವಿಡಿಯೋ ಚಿತ್ರೀಕರಣ ಮಾಡುತ್ತಿರುವಂತೆ ಕಂಡುಬಂದಿದೆ.
ಗ್ಯಾಂಗ್ ರೇಪ್ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಇರುವ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜಿನವರು ಎನ್ನುವ ವಿಚಾರ ವೈರಲ್ ಆಗುತ್ತಿದ್ದಂತೆ ದ.ಕ. ಜಿಲ್ಲಾ ಎಸ್ ಪಿ. ಲಕ್ಷ್ಮಿ ಪ್ರಸಾದ್ ಕಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರಕಟನೆ ನೀಡಿದ ಎಸ್ ಪಿ, ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳ ಕುರಿತು ತನಿಖೆ ನಡೆಯುತ್ತಿದೆ. ಯಾರೂ ಈ ವೀಡಿಯೋವನ್ನು ಹಂಚಿಕೊಳ್ಳಬಾರದು. ಹಾಗೆ ಮಾಡುವುದು ಅಪರಾಧ ಎಂದು ತಿಳಿಸಿದ್ದಾರೆ.
ಗಾಂಜಾ ಸೇವನೆಯ ಜಾಲ ಇದರ ಹಿಂದಿರುವ ಗುಮಾನಿ ಇದ್ದು, ವಿದ್ಯಾರ್ಥಿನಿಗೆ ಮಾದಕ ದ್ರವ್ಯ ಕೊಟ್ಟು ಈ ಕೃತ್ಯಕ್ಕೆ ಬಳಸಿಕೊಂಡು ಅದನ್ನು ಚಿತ್ರೀಕರಿಸಲಾಯಿತೇ ಎಂಬ ಚರ್ಚೆ ನಡೆಯುತ್ತಿದೆ.
ಈ ವೀಡಿಯೋ ಪ್ರಸಾರದ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ.
ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.