Advertisement

ಐಪಿಎಲ್: ಹೈದರಾಬಾದ್‌ಗೆ ಶರಣಾದ ಗುಜರಾತ್‌ ಟೈಟಾನ್ಸ್‌

11:57 PM Apr 11, 2022 | Team Udayavani |

ಮುಂಬಯಿ: ಅಗ್ರ ಕ್ರಮಾಂಕದ ಆಟಗಾರರ ಭರ್ಜರಿ ಆಟದಿಂದಾಗಿ ಸನ್‌ರೈಸರ್ ಹೈದರಾಬಾದ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಹೊಸ ತಂಡವಾದ ಗುಜರಾತ್‌ ಟೈಟಾನ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ.

Advertisement

ಗೆಲ್ಲಲು 163 ರನ್‌ ತೆಗೆಯುವ ಸವಾಲು ಪಡೆದ ಹೈದರಾಬಾದ್‌ ತಂಡ ಆರಂಭಿಕರ ಉತ್ತಮ ಆಟದಿಂದಾಗಿ 19.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಈ ಮೊದಲು ಗುಜರಾತ್‌ ತಂಡ 7 ವಿಕೆಟಿಗೆ 162 ರನ್ನುಗಳ ಮೊತ್ತ ಪೇರಿಸಿತ್ತು. ಇದು ಈ ಐಪಿಎಲ್‌ನಲ್ಲಿ ಗುಜರಾತ್‌ನ ಮೊದಲ ಸೋಲು ಆಗಿದೆ. ಈ ಸೋಲಿನಿಂದ ಗುಜರಾತ್‌ ಐದನೇ ಸ್ಥಾನಕ್ಕೆ ಜಾರಿದೆ.

ಇನ್ನಿಂಗ್ಸ್‌ ಆರಂಭಿಸಿದ ಅಭಿಷೇಕ್‌ ಶರ್ಮ ಮತ್ತು ಕೇನ್‌ ವಿಲಿಯಮ್ಸನ್‌ ಭರ್ಜರಿಯಾಗಿ ಆಡಿ ಉತ್ತಮ ಅಡಿಪಾಯ ಹಾಕಿ ಕೊಟ್ಟರು.

ಗುಜರಾತ್‌ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಅವರಿಬ್ಬರು ಮೊದಲ ವಿಕೆಟಿಗೆ 64 ರನ್‌ ಪೇರಿಸಿದರು. ಅಭಿಷೇಕ್‌ ಶರ್ಮ 32 ಎಸೆತ ಎದುರಿಸಿ 42 ರನ್‌ ಹೊಡೆದರು. ಆರು ಬೌಂಡರಿ ಹೊಡೆದಿದ್ದರು. ಆಬಳಿಕ ವಿಲಿಯಮ್ಸನ್‌ ಮತ್ತು ರಾಹುಲ್‌ ತ್ರಿಪಾಠಿ ಉತ್ತಮ ಆಟ ಮುಂದುವರಿಸಿ ದ್ವಿತೀಯ ವಿಕೆಟಿಗೆ 65 ರನ್ನುಗಳ ಜತೆಯಾಟ ನಡೆಸಿದರು. ವಿಲಿಯಮ್ಸನ್‌ 46 ಎಸೆತ ಎದುರಿಸಿ 2 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 57 ರನ್‌ ಹೊಡೆದರು.

ಕೊನೆ ಹಂತದಲ್ಲಿ ನಿಕೋಲಾಸ್‌ ಪೂರಣ್‌ ಮತ್ತು ಐಡೆನ್‌ ಮಾರ್ಕ್‌ ರಮ್‌ ಬಿರುಸಿನ ಆಟವಾಡಿದರು. ಸಿಕ್ಸರ್‌ ಬಾರಿಸಿ ತಂಡದ ಗೆಲುವು ಸಾರಿದ ಪೂರಣ್‌ ಕೇವಲ 18 ಎಸೆತಗಳಿಂದ 2 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 34 ರನ್‌ ಗಳಿಸಿ ಅಜೇಯರಾಗಿ ಉಳಿದರು.

Advertisement

ಈ ಮೊದಲು ಈ ಕೂಟದ ಲಕ್ಕಿ ಟೀಮ್‌ ಎನಿಸಿರುವ ಗುಜರಾತ್‌ ಟೈಟಾನ್ಸ್‌ 7 ವಿಕೆಟಿಗೆ 162 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದೆ. ಹಾರ್ದಿಕ್‌ ಪಾಂಡ್ಯ ಕಪ್ತಾನನ ಆಟವಾಡಿ ಗಮನ ಸೆಳೆದರು. ಪಾಂಡ್ಯ ಕೊಡುಗೆ ಅಜೇಯ 50 ರನ್‌.

ಮ್ಯಾಥ್ಯೂ ವೇಡ್‌-ಶುಭಮನ್‌ ಗಿಲ್‌ ಪವರ್‌ ಪ್ಲೇ ಒಳಗೆ ನಿರ್ಗಮಿಸಿದ್ದರಿಂದ ಗುಜರಾತ್‌ ತೀವ್ರ ಒತ್ತಡಕ್ಕೆ ಸಿಲುಕಿತು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಗಿಲ್‌ 96 ರನ್‌ ಬಾರಿಸಿ ಮಿಂಚಿದ್ದ ಗಿಲ್‌ ಇಲ್ಲಿ ಕೇವಲ 7 ರನ್ನಿಗೆ ಆಟ ಮುಗಿಸಿದರು. ಭುವನೇಶ್ವರ್‌ ಕುಮಾರ್‌ ತಮ್ಮ ದ್ವಿತೀಯ ಓವರ್‌ನಲ್ಲಿ ಸನ್‌ರೈಸರ್ಗೆ ಮೇಲುಗೈ ಒದಗಿಸಿದರು. ಬಳಿಕ ಟಿ. ನಟರಾಜನ್‌ ಮತ್ತೊಂದು ಯಶಸ್ಸು ತಂದಿತ್ತರು. 11 ರನ್‌ ಮಾಡಿದ ಸಾಯಿ ಸುದರ್ಶನ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು.

ಆರಂಭಕಾರ ಮ್ಯಾಥ್ಯೂ ವೇಡ್‌ ಕ್ರೀಸ್‌ ಆಕ್ರಮಿಸಿಕೊಳ್ಳುವ ಸೂಚನೆ ನೀಡಿದರೂ ಇದಕ್ಕೆ ಉಮ್ರಾನ್‌ ಮಲಿಕ್‌ ಅವಕಾಶ ನೀಡಲಿಲ್ಲ. ಎಸೆತಕ್ಕೊಂದರಂತೆ 19 ರನ್‌ ಮಾಡಿದ ಅವರನ್ನು ಮಲಿಕ್‌ ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. 64 ರನ್ನಿಗೆ 3 ವಿಕೆಟ್‌ ಬಿತ್ತು.

ಪಾಂಡ್ಯ ಎಚ್ಚರಿಕೆಯ ಆಟ
ಈ ಹಂತದಲ್ಲಿ ಕ್ರೀಸಿನಲ್ಲಿದ್ದ ಹಾರ್ದಿಕ್‌ ಪಾಂಡ್ಯ ಎಂದಿನ ಹೊಡಿಬಡಿ ಶೈಲಿಯ ಆಟವನ್ನು ಬದಿಗಿರಿಸಿ ಎಚ್ಚರಿಕೆಯ ಬ್ಯಾಟಿಂಗಿಗೆ ಮುಂದಾದರು. ಒಂದು ಬದಿಯಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ನಿಂತು ಇನ್ನಿಂಗ್ಸ್‌ ಬೆಳೆಸಬೇಕಾದ ಜವಾಬ್ದಾರಿ ಅವರ ಮೇಲಿತ್ತು. ಇದರಲ್ಲಿ ಅವರು ಯಶಸ್ವಿಯೂ ಆದರು.

ಪಾಂಡ್ಯ ಅವರಿಗೆ ಡೇವಿಡ್‌ ಮಿಲ್ಲರ್‌ ಅವರಿಂದ ಯಾವುದೇ ನೆರವು ಲಭಿಸಲಿಲ್ಲ. ಅವರ ಆಟ 15 ರನ್ನಿಗೆ ಮುಗಿಯಿತು. 15 ಎಸೆತ ಎದುರಿಸಿದ ಅವರಿಗೆ ಒಂದೂ ಬೌಂಡರಿ ಹೊಡೆತ ಸಾಧ್ಯವಾಗಲಿಲ್ಲ. ಸ್ಕೋರ್‌ ನೂರರ ಗಡಿ ದಾಟಿದೊಡನೆಯೇ ಮಿಲ್ಲರ್‌ ವಾಪಸಾದರು.

ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ ಅವರಿಗೆ ಬೆಂಬಲವಿತ್ತವರು ಕರ್ನಾಟಕದ ಯುವ ಬ್ಯಾಟರ್‌ ಅಭಿನವ್‌ ಮನೋಹರ್‌. 21 ಎಸೆತ ನಿಭಾಯಿಸಿದ ಅಭಿನವ್‌ 5 ಫೋರ್‌, ಒಂದು ಸಿಕ್ಸರ್‌ ನೆರವಿನಿಂದ 35 ರನ್‌ ಬಾರಿಸಿದರು. ಈ ಜೋಡಿಯಿಂದ 5ನೇ ವಿಕೆಟಿಗೆ ಭರ್ತಿ 50 ರನ್‌ ಒಟ್ಟುಗೂಡಿತು. ಕಳೆದ ಪಂದ್ಯದ “ಮ್ಯಾಚ್‌ ವಿನ್ನರ್‌’ ರಾಹುಲ್‌ ತೆವಾಟಿಯ ಇಲ್ಲಿಯೂ ಕೊನೆಯ ಹಂತದಲ್ಲಿ ಕ್ರೀಸಿಗೆ ಬಂದರು. ಆರಕ್ಕೆ ರನೌಟ್‌ ಆದರು.

Advertisement

Udayavani is now on Telegram. Click here to join our channel and stay updated with the latest news.

Next