Advertisement
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಸಮಾಜಮುಖೀ ಕಾರ್ಯಗಳಲ್ಲಿ ನಿರತರಾಗಿರುವ 11 ಮಹಿಳೆಯರಿಗೆ ಪ್ರಶಸ್ತಿ ಜತೆಗೆ ತಲಾ 25,000 ರೂ. ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
Related Articles
Advertisement
ಅಸಾಧಾರಣ ಸಾಧಕಿಯರು: ಎಚ್‌ಐವಿ ಸೋಂಕಿತರು ಗೌರವಯುತ ಜೀವನ ನಡೆಸಲು ಪೂರಕ ವಾತಾವರಣ ನಿರ್ಮಿಸಿ, ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಎಂಸಿಆರ್‌ಐನ ಪ್ರಾಧ್ಯಾಪಕಿ ಡಾ.ಅಸೀಮಾ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರೋತ್ಸಾಹ ನೀಡಿ ಸಾವಯವ ಕೃಷಿ ಉತ್ತೇಜಿಸುತ್ತಿರುವ ಪಿರಿಯಾಪಟ್ಟಣ ಕಣಗಾಲು ಗ್ರಾಮದ ಪದ್ಮಮ್ಮ, ಬಡ ಮಕ್ಕಳಿಗೆ ಉಚಿತ ಊಟ, ವಸತಿ, ಮನೆಪಾಠ, ಶಿಕ್ಷಣ ನೀಡುತ್ತಿರುವ ಬೆಂಗಳೂರಿನ ಗುಬ್ಬಲಾಳದ ಮಂಗಳಾ ಮೇತ್ರಿ, ಅಶಿಕ್ಷಿತ ಮಹಿಳೆಯರಿಗೆ ಊಟ, ವಸತಿ ಜತೆಗೆ ಶಿಕ್ಷಣ ನೀಡಿ ಗೌರವಯುತ ಜೀವನ ನಡೆಸಲು ನೆರವಾದ ಚಿತ್ರದುರ್ಗದ ಎಂ.ಆರ್.ವಿಜಯಲಕ್ಷ್ಮೀ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಬಲರ ಬಾಳಿಗೆ ಆಶಾಕಿರಣ: ಮಧ್ಯಮ ವರ್ಗದ ಮಹಿಳೆಯರಿಗೆ ಕಲೆ ಮತ್ತು ಕರಕುಶಲ ತರಬೇತಿ ನೀಡಿ ಉದ್ಯಮಿಗಳಾಗಲು ನೆರವಾಗುತ್ತಿರುವ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮುದಿಗೌಡಕೇರಿಯ ಕಾಂಚನಾ, ಅಂಧ, ವಿಕಲಚೇತನ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕೆ.ಕೆ.ಕಾವ್ಯ, ಶಾಲೆಯಿಂದ ಹೊರಗುಳಿದ ಮಕ್ಕಳು ಶಿಕ್ಷಣ ಪಡೆಯಲು ನೆರವಾಗುವ ಜತೆಗೆ ಕೈಗಾರಿಕೆಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ತರಬೇತಿ ನೀಡುತ್ತಿರುವ ಮಂಗಳೂರಿನ ವಿಶಾಖ ಕಾಮತ್, ದನಿಯಿಲ್ಲದ, ದಮನಿತ ಮಹಿಳೆಯರ ಪರ ದನಿಯೆತ್ತುವ ಜತೆಗೆ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮೈಸೂರಿನ ಗೀತಾ ವೇಲುಮಣಿ ಅವರಿಗೂ ಸಾಧಕರ ಗೌರವ ಸಂದಿತು.
ಮಹಿಳಾ ಜಾಗೃತಿಯ ಕಿಡಿಗಳು: ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಸ್ವಾವಲಂಬಿಗಳನ್ನಾಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಶಿವಮೊಗ್ಗ ಚನ್ನಕೇಶವನಗರದ ಕೆ.ಪುಷ್ಪಲತಾ, ಮಕ್ಕಳ ಶಿಕ್ಷಣ ಹಾಗೂ ಮಕ್ಕಳ ಹಕ್ಕುಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಎನ್.ಸುಜಾತಾ ಹಾಗೂ ಮಹಿಳಾ ಸಬಲೀಕರಣ, ಮಕ್ಕಳ ಪೋಷಣೆ ಜತೆಗೆ ಮಹಿಳಾ ಮಾನಸಿಕ ಆರೋಗ್ಯ ಬಲವರ್ಧನೆಯಲ್ಲಿ ತೊಡಗಿಸಿಕೊಂಡಿರುವ ಮನೋರೋಗ ತಜ್ಞೆ ಡಾ.ಪದ್ಮಾಕ್ಷಿ ಲೋಕೇಶ್ ಅವರನ್ನು ಅಭಿನಂದಿಸಲಾಯಿತು. ಎಂ.ಕೆ. ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರೂ ಆದ ಮಾಸೂಮ್ ಟ್ರಸ್ಟ್‌ನ ಟ್ರಸ್ಟಿ ಸಲ್ಮಾ ಸುಭಾನ್, ಅವರ ಪುತ್ರಿ ಫರಾ ಖಾನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.