ವಿಜಯಪುರ: ರಾಜ್ಯ ಸರಕಾರ ಗ್ರಾ. ಪಂ. ಜನಪ್ರತಿನಿಧಿಗಳ ಮಾಸಿಕ ಗೌರವ ಧನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಶಾಸಕ ಸುನೀಲಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಗ್ರಾ. ಪಂ. ಜನಪ್ರತಿನಿಧಿಗಳಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸುವಂತೆ ಸದನದ ಒಳಗೆ ಮತ್ತು ಹೊರಗೆ ನಾನು ಹಲವು ಬಾರಿ ಧ್ವನಿ ಎತ್ತಿ ಹೋರಾಟ ನಡೆಸಿದ್ದೇನೆ. ಇದೀಗ ರಾಜ್ಯ ಸರಕಾರ ಗೌರವ ಧನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಆದರೆ ಸದರಿ ಆದೇಶದಲ್ಲಿ ಹೆಚ್ಚಿಸಿರುವ ಗೌರವಧನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಗ್ರಾ. ಪಂ. ಅಧ್ಯಕ್ಷರಿಗೆ ರೂ. 3 ಸಾವಿರ ರೂ., ಉಪಾಧ್ಯಕ್ಷರಿಗೆ 2 ಸಾವಿರ ರೂ., ಸದಸ್ಯರಿಗೆ 1 ಸಾವಿರ ರೂ. ಗೌರವ ಧನ ನೀಡಲಾಗುತ್ತಿದೆ. ಈಗ ಸರಕಾರ ಅಧ್ಯಕ್ಷರಿಗೆ 6 ಸಾವಿರ ರೂ., ಉಪಾಧ್ಯಕ್ಷರಿಗೆ 4 ಸಾವಿರ ರೂ, ಸದಸ್ಯರಿಗೆ ರೂ. 2 ಸಾವಿರ ರೂ. ಮಾಸಿಕ ಗೌರವಧನ ಹೆಚ್ಚಳ ಮಾಡಿದೆ. ಇದು ಸರಿಯಲ್ಲ ಎಂದು ಶಾಶಕ ಸುನಿಲಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಮಾದರಿಯಲ್ಲಿ ಅಧ್ಯಕ್ಷರಿಗೆ 13 ಸಾವಿರ ರೂ., ಉಪಾಧ್ಯಕ್ಷರಿಗೆ 10 ಸಾವಿರ ರೂ., ಸದಸ್ಯರಿಗೆ 7 ಸಾವಿರ ರೂ. ಮಾಸಿಕ ಗೌರವ ಧನ ನೀಡಬೇಕು. ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಮುಂದುವರೆಸುವುದಾಗಿ ಸುನೀಲಗೌಡ ಪಾಟೀಲ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದಟ್ಟ ಮಂಜು: ಹರ್ಯಾಣ ಹೆದ್ದಾರಿಯಲ್ಲಿ ಸರಣಿ ಅಪಘಾತ, ನಾಲ್ವರ ಸ್ಥಿತಿ ಗಂಭೀರ