Advertisement

ವಿಧಾನ ಪರಿಷತ್‌ನಲ್ಲಿ ರೈಲು ಮಾರ್ಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸುನಿಲ್

06:00 AM Jul 11, 2018 | |

ಮಡಿಕೇರಿ: ದಕ್ಷಿಣ ಕೊಡಗಿನ ಮೂಲಕ ಕೇರಳದ ತಲಚೇರಿಗೆ ರೈಲ್ವೆ ಯೋಜನೆಗೆ ಅವಕಾಶ ನೀಡಿದಲ್ಲಿ ಕೊಡಗಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಸರಕಾರದ ಗಮನ ಸೆಳೆದಿರುವ ವಿಧಾನ ಪರಿಷತ್‌ ಸದಸ್ಯ ಎಂ.ಪಿ.ಸುನಿಲ್‌ ಸುಬ್ರಮಣಿ ಅವರು, ಈ ಸಂಬಂಧ ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ವಿಧಾನಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಈ ಕುರಿತು ವಿಷಯ ಪ್ರಸ್ತಾವಿಸಲು   ಅವಕಾಶ    ನೀಡುವಂತೆ ವಿಧಾನಪರಿಷತ್‌ನ ಸಭಾಪತಿಗಳನ್ನು ಕೋರಿರುವ ಸುನಿಲ್‌ ಸುಬ್ರಮಣಿ ಅವರು, ಕೊಡಗು ಜಿಲ್ಲೆಯ ಮೂಲಕ ಮೈಸೂರು-ತಲಚೇರಿ ರೈಲ್ವೇ ಮಾರ್ಗಕ್ಕೆ ಜಿಲ್ಲೆಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ ನಡೆಸಿ ಸರಕಾರದ ಗಮನಸೆಳೆದ ಬೆನ್ನಲ್ಲೇ ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಸರ್ವೆಕಾರ್ಯ ಕೈಗೆತ್ತಿಕೊಂಡಿರುವುದು ಬೆಳಕಿಗೆ ಬಂದಿದೆ. 

ಈ ಯೋಜನೆಯ ಸರ್ವೆ ಕಾರ್ಯ ದಕ್ಷಿಣ ಕೊಡಗಿನ ಕುಟ್ಟ, ಕೆ. ಬಾಡಗ ಮತ್ತು ಶ್ರೀಮಂಗಲ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಖಾಸಗಿ ಜಾಗದ ಮಾಲಕರಿಗೆ ಯಾವುದೇ ಮಾಹಿತಿ ನೀಡದೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್‌ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಸರ್ವೆ ಕಾರ್ಯಕ್ಕೆ ಅಧಿಕಾರಿ-ಸಿಬಂದಿಯನ್ನು ನೇಮಕ ಮಾಡಿದ್ದು, ಪರಿಕರಗಳೊಂದಿಗೆ ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದು ಗಮನಸೆಳೆದಿದ್ದಾರೆ.

ಜಿಲ್ಲೆಯ ತಿತಿಮತಿ ಮೂಲಕ ಕೊಡಗು ಪ್ರವೇಶಿಸುವ ಈ ಮಾರ್ಗ ಹಲವೆಡೆಗಳಲ್ಲಿ ಸುರಂಗಳ ಮೂಲಕ ಹಾದು ಹೋಗುವುದಾಗಿ ಹೇಳಲಾಗಿದ್ದು, ಕುಟ್ಟದ ಮೂಲಕ ಕೇರಳವನ್ನು ಸಂಪರ್ಕಿಸಲಿದೆ. ಈ ಮಾರ್ಗವು ಜಿಲ್ಲೆಯ ಅಸ್ತಿತ್ವವಾದ ಕಾಫಿ ತೋಟಗಳಿಗೆ, ಜಿಲ್ಲೆಯ ಜನಜೀವನಕ್ಕೆ ಹಾಗೂ ವಿಶೇಷವಾಗಿ ಕಾವೇರಿ ನದಿಯ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಲಿರುವುದಾಗಿ ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದು, ಈ ಸರ್ವೆ ಕಾರ್ಯದ ಬಗ್ಗೆ ಸರಕಾರದ ನಿಲುವೇನು? ಈ ಸರ್ವೆ ಕಾರ್ಯಕ್ಕೆ ರಾಜ್ಯದಿಂದ ಅನುಮತಿ ನೀಡಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸುನಿಲ್‌ ಸುಬ್ರಮಣಿ ಒತ್ತಾಯಿಸಿದ್ದಾರೆ.

4,106 ಬಯಲು ಬಹಿರ್ದೆಸೆ ಮುಕ್ತ ಗ್ರಾಪಂ.ಗಳು
ರಾಜ್ಯದ 6,022 ಗ್ರಾ.ಪಂ.ಗಳ ಪೈಕಿ ಈವರೆಗೆ 4,106 ಗ್ರಾ.ಪಂ.ಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದ್ದು, ಉಳಿದ 1,916 ಪಂಚಾಯಿತಿಗಳನ್ನು ಅಕ್ಟೋಬರ್‌ ಒಳಗಾಗಿ  ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿ  ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

Advertisement

ವಿಧಾನ ಪರಿಷತ್‌ನಲ್ಲಿ ಸದಸ್ಯ ಸುನಿಲ್‌ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಈ ವರೆಗೆ ರಾಜ್ಯವನ್ನು ಬಯಲು ಶೌಚಮುಕ್ತ ಪ್ರದೇಶವಾಗಿಸಲು ಶೇ. 90ರಷ್ಟು ಪ್ರಗತಿ ಸಾಧಿಸಲಾಗಿದ್ದು, ಶೇ. 10ರಷ್ಟು ಬಾಕಿ ಇದೆ.  2013-13ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಗುರಿಗೆ ಅನುಗುಣವಗಿ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದ್ದು, ಶೌಚಾಲಯಗಳನ್ನೇ ನಿರ್ಮಾಣ ಮಾಡದೆ ಶೇ. 100ರಷ್ಟು ಗುರಿ ಸಾಧಿಸಲಾಗಿದೆ ಎಂಬ ಬಗ್ಗೆ ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಪ್ರಸಕ್ತ ರಾಜ್ಯದಲ್ಲಿ 10 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಮಾಡಲು ಬಾಕಿ ಇದ್ದು, ಅಕ್ಟೋಬರ್‌ ಒಳಗಾಗಿ ಅವುಗಳಲ್ಲಿ ಗುರಿ ಸಾಧಿಸಲಾಗುವುದು. ಗ್ರಾಮೀಣ ಜನರಲ್ಲಿ ಶೌಚಾಲಯಗಳ ಬಳಕೆ ಮತ್ತು ಉಪಯೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಮಾಹಿತಿಯ ಕೊರತೆ ಇರುವುದು, ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದ ಅಭಾವ, ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಬಳಕೆ ಬಗ್ಗೆ ಪ್ರತಿರೋಧವಿರುವುದು ಪ್ರಗತಿ ಕುಂಠಿತವಾಗಲು ಕಾರಣವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next