Advertisement
ಎರಡೂ ಕಡೆಯ ಕುಟುಂಬದವರನ್ನು ಒಪ್ಪಿಸಿಯೇ ಮದುವೆಯಾಗಬೇಕೆಂದು ನಿರ್ಧರಿಸಿ, ನಾವು ಭರ್ತಿ 9 ವರ್ಷ ಕಾದೆವು. ಕಡೆಗೊಂದು ದಿನ, ನನ್ನ ತಂದೆ ವೀರಪ್ಪ ಶೆಟ್ಟಿ ಹೇಳಿದರು: ‘ಆ ಹುಡುಗಿ, ನಿನ್ನನ್ನು ನಂಬಿಕೊಂಡು ಬರ್ತಿದಾಳೆ. ಅವಳ ಕಣ್ಣಲ್ಲಿ ನೀರು ಬಾರದ ಹಾಗೆ ನೋಡ್ಕೋ…
Related Articles
Advertisement
ಹೀಗೆ ಊರಿಗೆ ಬಂದಾಗಲೆಲ್ಲ ಐದಾರು ದಿನಗಳ ಮಟ್ಟಿಗಾದರೂ ಬಂಧುಗಳ ಮನೆಯಲ್ಲಿ ಉಳಿಯುತ್ತಿದ್ದೆವು. ಪ್ರತಿ ಬಾರಿ ಊರಿಗೆ ಬಂದಾಗಲೂ, ವಾಪಸ್ ಮುಂಬಯಿಗೆ ಹೋಗಲೇಬಾರದು. ಇಲ್ಲಿಯೇ ಇದ್ದುಬಿಡಬೇಕು ಅನ್ನಿಸುತ್ತಿತ್ತು. ಆ ಹಳ್ಳಿ, ಅಲ್ಲಿನ ಜನ, ಅವರ ಅಕ್ಕರೆ, ಊರಿನ ವಾತಾವರಣ, ಅಷ್ಟರಮಟ್ಟಿಗೆ ಮೋಡಿ ಮಾಡಿತ್ತು. ಒಮ್ಮೆಯಂತೂ ಅಪ್ಪನ ಮುಂದೆ ಕೂತು- ‘ನೀನೂ ಇಲ್ಲೇ ಇದ್ದುಬಿಡಬೇಕಿತ್ತು ಕಣಪ್ಪ. ಯಾಕಪ್ಪಾ ಬಾಂಬೆಗೆ ಹೋದೆ? ಬಾಂಬೆಗಿಂತ ಈ ಊರೇ ಚೆನ್ನಾಗಿದೆ’ ಅಂದಿದ್ದೆ. ಆವತ್ತು, ಅಪ್ಪ ಏನೂ ಮಾತಾಡಿರಲಿಲ್ಲ. ಸುಮ್ಮನೇ ನಕ್ಕು ಮೌನವಾಗಿದ್ದ.
ಎಷ್ಟೋ ದಿನಗಳ ನಂತರ, ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಅಪ್ಪ ಹೇಳಿದ್ದರು: ‘ಮನೆಯಲ್ಲಿ ಕೆಟ್ಟ ಬಡತನವಿತ್ತು. ತುತ್ತು ಅನ್ನಕ್ಕೂ ತತ್ವಾರ ಎನ್ನುವಾಗ ಓದುವ ಮನಸ್ಸಾದರೂ ಹೇಗೆ ಬರುತ್ತೆ? ಹಸಿದವನಿಗೆ ಮೊದಲು ಬೇಕಿರುವುದು ಅನ್ನ. ಅಕ್ಷರದ ನೆನಪಾಗುವುದು ಹೊಟ್ಟೆ ತುಂಬಿದ ನಂತರ. ಅನ್ನ ಸಂಪಾದನೆಯ ದಾರಿ ಹುಡುಕಿಕೊಂಡು, ಒಂಭತ್ತನೇ ವಯಸ್ಸಿಗೇ ಮುಂಬಯಿಗೆ ಬಂದುಬಿಟ್ಟೆ. ಆ ದಿನಗಳಲ್ಲಿ ಬಡತನದಿಂದ ಕಂಗಾಲಾದವರೆಲ್ಲ ಓಡಿಬರುತ್ತಿದ್ದಿದ್ದು ಮುಂಬಯಿಗೇ. ಹೆಚ್ಚಿನವರಿಗೆ ಸಿಗುತ್ತಿದ್ದುದು ಹೋಟೆಲ್ನಲ್ಲಿ ಟೇಬಲ್ ಕ್ಲೀನ್ ಮಾಡುವ ಕೆಲಸ. ಸಂಬಳದ ಜೊತೆಗೆ ಊಟ, ವಸತಿಯೂ ಉಚಿತವಾಗಿ ಸಿಗುತ್ತಿದ್ದುದರಿಂದ, ಹೋಟೆಲ್ನ ಸಪ್ಲಯರ್, ಕ್ಲೀನರ್ ಆಗಲು ಯಾರಿಗೂ ಮುಜುಗರವಿರಲಿಲ್ಲ…’
ಬಾಂಬೆಯ ಹೋಟೆಲಿನಲ್ಲಿ ಕ್ಲೀನರ್ ಆದೆನಲ್ಲ; ಅವು ನನ್ನ ಪಾಲಿನ ಕಡು ಕಷ್ಟದ ದಿನಗಳು. ಹೋಟೆಲಿನಲ್ಲಿಯೇ ಉಳಿಯುವ ಅನುಕೂಲವಿತ್ತು. ಆದರೆ ಚಾಪೆ, ಬೆಡ್‌ಶೀಟ್ ಖರೀದಿಸಲು ನನ್ನಲ್ಲಿ ಹಣವಿರಲಿಲ್ಲ. ಹಾಗಂತ, ನೆಲದ ಮೇಲೆ ಮಲಗುವುದೂ ಸಾಧ್ಯವಿರಲಿಲ್ಲ. ಆಗ ನಾನೊಂದು ಮಾರ್ಗ ಹುಡುಕಿದೆ. ಆ ದಿನಗಳಲ್ಲಿ, ಭತ್ತದ ಹೊಟ್ಟಿನಿಂದ ಅಡುಗೆ ತಯಾರಾಗುತ್ತಿತ್ತು. ಹೊಟ್ಟು ತುಂಬಿದ ಚೀಲ ಖಾಲಿಯಾದರೆ ಸಾಕು; ಅದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಮೂರು ಗೋಣಿ ಚೀಲಗಳು ಕಡ್ಡಾಯವಾಗಿ ನನ್ನಲ್ಲಿದ್ದವು. ಒಂದು ಹಾಸಲಿಕ್ಕೆ, ಇನ್ನೊಂದು ಹೊದಿಯಲಿಕ್ಕೆ, ಮತ್ತೂಂದು ತಲೆದಿಂಬಿಗೆ! ಮುಂದೆ, ನನ್ನ ಪಾಲಿಗೂ ಒಳ್ಳೆಯ ದಿನಗಳು ಬಂದವು. ಕ್ಲೀನರ್ ಆಗಿದ್ದೆನಲ್ಲ: ಅದೇ ಹೋಟೆಲನ್ನು ಖರೀದಿಸುವ ಮಟ್ಟಕ್ಕೆ ಬೆಳೆದೆ. ಆ ಹೋಟೆಲಿಗೆ, ಉಡುಪಿ ರೆಸ್ಟೋರೆಂಟ್ ಎಂದು ಹೆಸರಿಟ್ಟೆ…’
ಹೀಗಿತ್ತು, ಹೀಗಾಯ್ತು ಎಂಬ ನಿರುಮ್ಮಳ ಭಾವದಿಂದ ಅಪ್ಪ ಹಳೆಯ ಕಥೆ ಹೇಳಿದ್ದರು. ಅಂಥದೊಂದು ಫೀಲ್ ಯಾಕೆ ಬಂತೋ ಗೊತ್ತಿಲ್ಲ. ಹಸಿವು ಮತ್ತು ಅಸಹಾಯಕತೆಯಿಂದ ಅಪ್ಪ ಓಡಾಡಿದ್ದಾರಲ್ಲ: ಆ ಜಾಗದಲ್ಲೇ ಒಂದು ಹೋಟೆಲ್ ಕಟ್ಟಬೇಕು. ಅಬ್ಬೇಪಾರಿಯಂತೆ ನಡೆದಾಡಿದ ಜಾಗದಲ್ಲೇ ಅಪ್ಪನನ್ನೂ ಅಧಿಪತಿಯನ್ನಾಗಿ ಕೂರಿಸಬೇಕು ಎಂಬ ಬಯಕೆಯೊಂದು ಆವತ್ತೇ ನನ್ನ ಜೊತೆಯಾಯಿತು.
ದೊಡ್ಡ ಸಂಬಳದ ಕೆಲಸ ಪಡೆವ ಆಸೆಯಿಂದಲೇ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದೆ. ಜೊತೆಗೆ, ಕರಾಟೆಯಲ್ಲಿ ಬ್ಲ್ಯಾಕ್‌ಬೆಲ್r! ಆಗ ಪರಿಚಯವಾದವಳೇ ಮನಾ ಅಲಿಯಾಸ್ ಮೋನಿಷಾ, ಗೆಳೆತನ, ಬಲು ಬೇಗನೆ ಪ್ರೀತಿಗೆ ತಿರುಗಿತು. ಜಾತಿಯ ಬಗ್ಗೆ ನಾನೂ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಆದರೆ, ಕಡೆಗೊಮ್ಮೆ ಮನೆಯಲ್ಲಿ ವಿಷಯ ಹೇಳಲೇಬೇಕಲ್ಲ: ಆಗ ನಿಜವಾಗಿ ಕಷ್ಟಕ್ಕೆ ಬಂತು. ಕಾರಣ, ನನ್ನ ಹುಡುಗಿಯ ತಾಯಿ ಪಂಜಾಬಿ- ತಂದೆ ಮುಸ್ಲಿಂ ಆಗಿದ್ದರು! ಜಾತಿ ಬೇರೆ, ಆಚರಣೆಗಳೂ ಬೇರೆ ಬೇರೆ, ಇಷ್ಟು ಸಾಲದೆಂಬಂತೆ- ಇಬ್ಬರದೂ ಒಂದೇ ವಯಸ್ಸು…
ಈ ಸಂದರ್ಭದಲ್ಲಿ, ಬಂಧುಗಳು, ಗೆಳೆಯರು, ಹಿತೈಷಿಗಳು ನನ್ನ ಹೆಗಲು ತಟ್ಟಿ ಹೇಳಿದರು: ‘ಗಂಡ-ಹೆಂಡ್ತಿ ಮಧ್ಯೆ, ಸ್ವಲ್ಪ ಏಜ್ ಢಿಫರೆನ್ಸ್ ಇರಬೇಕು. ಹಾಗಿಲ್ಲದೇ ಹೋದಾಗ, ಮುಂದೆ ಹೊಂದಾಣಿಕೆಯ ಸಮಸ್ಯೆ ಬರಬಹುದು. ಅದಕ್ಕಿಂತ ಮುಖ್ಯವಾಗಿ ಹುಡುಗೀದು ಬೇರೆ ಜಾತಿ. ಅವಳೇ ಆಗಬೇಕಾ? ನಮ್ಮ ಬಂಟ್ಸ್ ಕಮ್ಯೂನಿಟೀಲಿ ಹುಡುಗೀರಿಲ್ವ? ಫೈನಲ್ ಡಿಸಿಷನ್ ತಗೊಳ್ಳುವ ಮುಂಚೆ ಯೋಚನೆ ಮಾಡು…’ ಇಂಥ ಮಾತುಗಳನ್ನು ಹತ್ತಾರು ಜನರಿಂದ ಕೇಳಿದ ನಂತರವೂ ಮನಾಳ ಮೇಲಿನ ಮೋಹ ಕಡಿಮೆಯಾಗಲಿಲ್ಲ. ಎರಡೂ ಕಡೆಯ ಕುಟುಂಬದವರನ್ನು ಒಪ್ಪಿಸಿಯೇ ಮದುವೆಯಾಗಬೇಕೆಂದು ನಿರ್ಧರಿಸಿ, ನಾವು ಭರ್ತಿ 9 ವರ್ಷ ಕಾದೆವು. ಕಡೆಗೊಂದು ದಿನ, ನನ್ನ ತಂದೆ ವೀರಪ್ಪ ಶೆಟ್ಟಿ ಹೇಳಿದರು: ‘ಆ ಹುಡುಗಿ, ನಿನ್ನನ್ನು ನಂಬಿಕೊಂಡು ಬರ್ತಿದಾಳೆ. ಅವಳ ಕಣ್ಣಲ್ಲಿ ನೀರು ಬಾರದ ಹಾಗೆ ನೋಡ್ಕೋ…’
ಮನಾಳ ಜೊತೆಯಲ್ಲೇ ನನ್ನ ಬಾಳಿಗೆ ಮಹಾಲಕ್ಷ್ಮಿಯ ಪ್ರವೇಶವೂ ಆಯಿತೆನ್ನಬಹುದು. ಏಕೆಂದರೆ, ಮದುವೆಯಾದ ಆರೇ ತಿಂಗಳಲ್ಲಿ ನನ್ನ ಮೊದಲ ಸಿನಿಮಾ ‘ಬಲ್ವಾನ್’ ಬಿಡುಗಡೆಯಾಯಿತು. ಆ ನಂತರದಲ್ಲಿ ಹಣ, ಕೀರ್ತಿ, ಸಿನೆಮಾಗಳು ಹುಡುಕಿಕೊಂಡು ಬಂದವು. ನೋಡನೋಡುತ್ತಲೇ 110 ಸಿನಿಮಾಗಳಲ್ಲಿ ನಟಿಸಿ, ಸೆಂಚುರಿ ಸ್ಟಾರ್ ಅನ್ನಿಸಿಕೊಂಡೆ. ಅಪ್ಪ ಸಪ್ಲೈಯರ್ ಆಗಿ ಕೆಲಸ ಮಾಡಿದ್ದನಲ್ಲ, ಒಂದು ಕಾಲದಲ್ಲಿ ಅಬ್ಬೇಪಾರಿಯಂತೆ ಓಡಾಡಿದ್ದನಲ್ಲ, ಅದೇ ಜಾಗವನ್ನು ಖರೀದಿಸಿ ಅಲ್ಲೊಂದು ದೊಡ್ಡ ಹೋಟೆಲ್ ಕಟ್ಟಿಸಿದೆ. ಮ್ಯಾನೇಜಿಂಗ್ ಡೈರೆಕ್ಟರ್‌ನ ಸ್ಥಾನದಲ್ಲಿ ತಂದೆಯನ್ನು, ಕೂರಿಸಿ ಅಪ್ಪಾ, ನೀನೀಗ ಅಬ್ಬೇಪಾರಿಯಲ್ಲ. ಈ ಜಾಗದ ಅಧಿಪತಿ ಎಂದು ಹೇಳಿ ಖುಷಿಪಟ್ಟೆ. ರಿಯಲ್ ಎಸ್ಟೇಟ್, ಫರ್ನಿಚರ್ ಶಾಪ್, ಫಿಲ್ಮ್ ಪ್ರೊಡ ಕ್ಷನ್, ಹೋಟೆಲ್ ಮ್ಯಾನೇಜ್‌ಮೆಂಟ್…ಹೀಗೆ, ಹಲವು ಉದ್ಯಮಗಳಲ್ಲಿ ಹಣ ತೊಡಗಿಸಿದೆ. ಪರಿಣಾಮ, ಕೆಲವೇ ದಿನಗಳಲ್ಲಿ, ಎರಡು ತಲೆಮಾರು ಕೂತು ತಿಂದರೂ ಆಗಿ ಮಿಗುವಷ್ಟು ಸಂಪತ್ತು ನನ್ನದಾಯಿತು. ವೆಚ್ಚಕ್ಕೆ ಹೊನ್ನು, ಇಚ್ಛೆಯನರಿತ ಪತ್ನಿ, ಮುದ್ದಾದ ಮಕ್ಕಳು, ಅರಮನೆಯಂಥ ಮನೆ, ಸಮಾಜದಲ್ಲಿ ಗೌರವ, ಅದಕ್ಕಿಂತ ಮಿಗಿಲಾಗಿ, ಮಗನ ಬೆಳವಣಿಗೆ ಕಂಡು ಕಣ್ತುಂಬಿಕೊಂಡ ತಂದೆ… ಇದಿಷ್ಟೂ ನನ್ನದಾಗಿತ್ತು. ಬಯಸಿದ್ದೆಲ್ಲವೂ ಬದುಕಲ್ಲಿ ಸಿಕ್ಕಿದೆ. ವಾಹ್, ಲೈಫ್ ಈಸ್ ಬ್ಯೂಟಿಫುಲ್ ಎಂದು ನನಗೆ ನಾನೇ ಹೇಳಿಕೊಂಡು ಖುಷಿಪಡುತ್ತಿದ್ದಾಗಲೇ ಆ ಘಟನೆ ನಡೆದುಹೋಯ್ತು.
ಅದೊಂದು ಬೆಳಗ್ಗೆ, ತಂದೆಯವರು ಬ್ಯಾಲೆನ್ಸ್ ಕಳೆದುಕೊಂಡು ಬಿದ್ದುಬಿಟ್ಟರು. ‘ಅಯ್ಯಯ್ಯೋ, ಇದೇನಾಗಿ ಹೋಯ್ತು?’ ಎಂದುಕೊಂಡು ಆಸ್ಪತ್ರೆಗೆ ಹೋದರೆ-‘ಸಾರಿ, ನಿಮ್ಮ ತಂದೆಯವರಿಗೆ ಸ್ಟ್ರೋಕ್ ಆಗಿಬಿಟ್ಟಿದೆ. ಅವರಿಗೆ ವಯಸ್ಸಾಗಿದೆ ನೋಡಿ, ಹಾಗಾಗಿ ಬೇಗ ಪಿಕಪ್ ಆಗುವುದು ಕಷ್ಟ. ಆದರೂ ಹೋಪ್ ಕಳೆದುಕೊಳ್ಳುವುದು ಬೇಡ. ಟ್ರೀಟ್ಮೆಂಟ್ ಶುರುಮಾಡೋಣ… ಅಂದರು ಡಾಕ್ಟರ್. ಆಗ ನನ್ನ ಕೈಲಿ ನಾಲ್ಕಾರು ಸಿನೆಮಾಗಳಿದ್ದವು. ಶೂಟಿಂಗ್‌ನ ಸಮಯದಲ್ಲಿ, ಸೂಪರ್‌ಮ್ಯಾನ್ ಥರ ನನ್ನ ಪಾತ್ರಗಳು ಓಡುತ್ತಿದ್ದವು. ನಿರ್ದೇಶಕ ಆ್ಯಕ್ಷನ್ ಎಂದ ತಕ್ಷಣ-ಅಸಾಧ್ಯ ಅನಿಸಿದ್ದನ್ನೆಲ್ಲ ಸಾಧ್ಯವಾಗಿಸುವ ಹೀರೋ ಆಗಿ ನಾನು ಮಿಂಚುತ್ತಿದ್ದೆ. ಶೂಟಿಂಗ್ ಮುಗಿಸಿಕೊಂಡು ಮನೆಗೆ-ಆಸ್ಪತ್ರೆಗೆ ಬಂದರೆ, ರೆಕ್ಕೆ ಮುರಿದುಕೊಂಡ ಗುಬ್ಬಿಯಂತೆ ಮಲಗಿದ್ದ ಅಪ್ಪ ಕಾಣಿಸುತ್ತಿದ್ದರು. ತೆರೆಯ ಮೇಲೆ ಪವಾಡಗಳನ್ನು ಮಾಡುತ್ತಿದ್ದ ನನಗೆ, ಮಾತು ಹೊರಡದೆ ತೊದಲುತ್ತಿದ್ದ ಅಪ್ಪನಿಂದ ಒಂದೇ ಒಂದು ಶಬ್ದ ಹೊರಡಿಸಲೂ ಸಾಧ್ಯವಾಗಲಿಲ್ಲ. ಶೂಟಿಂಗ್‌ನಲ್ಲಿ ನಾನು ಹೀರೋ ಗೆಟಪ್‌ನಲ್ಲಿ ಮೆರೆದಾಡುವ ವೇಳೆಯಲ್ಲಿ, ಇಲ್ಲಿ ಆಸ್ಪತ್ರೆಯಲ್ಲಿ ಅಪ್ಪನಿಗೆ ನನ್ನ ನೆನಪಾಗಿಬಿಟ್ಟರೆ, ಮಗನನ್ನು ನೋಡಬೇಕು ಎಂದು ಹಂಬಲಿಸಿ, ಅದನ್ನು ಹೇಳಲಾಗದೆ ಆತ ಒದ್ದಾಡಿಹೋದರೆ…ಅನ್ನಿಸಿತು. ಹಿಂದೆಯೇ, ಈ ಹಣ, ದುಡಿಮೆ ಯಾರಿಗೋಸ್ಕರ ಎಂಬ ಪ್ರಶ್ನೆ ಜೊತೆಯಾಯ್ತು. ಆಗಲೇ, ಅಪ್ಪ ಇರುವಷ್ಟು ದಿನ ಅವರೊಂದಿಗೇ ಇರಬೇಕು. ಅವರ ಸಣ್ಣ ಕದಲಿಕೆಗೂ ಹೆಗಲಾಗಬೇಕು ಅನ್ನಿಸ್ತು.
ಆನಂತರ ನಾನು ತಡಮಾಡಲಿಲ್ಲ. ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಬೇಗ ಬೇಗ ಮುಗಿಸಿದೆ. ಹೊಸ ಪ್ರಾಜೆಕ್ಟ್ಗೆ ಸಹಿ ಹಾಕುವುದನ್ನು ನಿಲ್ಲಿಸಿದೆ. ಎಲ್ಲ ವ್ಯವಹಾರದ ಉಸ್ತುವಾರಿಯನ್ನು ನಂಬಿಗಸ್ತರಿಗೆ ವಹಿಸಿದೆ. ನಂತರ, ಅಪ್ಪನ ಎದುರು ಮಂಡಿಯೂರಿ ಕೂತು-‘ಇನ್ಮೇಲೆ ಶೂಟಿಂಗ್‌ಗೆ ಹೋಗಲ್ಲ ಕಣಪ್ಪಾ. ಇಡೀ ದಿನ ನಿನ್ನ ಜೊತೇಲೇ ಇರ್ತೇನೆ. ಹೆದರಿಕೋಬೇಡ. ನಿನ್ನನ್ನು ಉಳಿಸಿಕೊಳ್ತೇನೆ’-ಎಂದೆ. ಆನಂತರವೂ ಅಪ್ಪನನ್ನು ನೋಡುತ್ತಾ ಹೀಗೆಲ್ಲ ಹೇಳುತ್ತಿದ್ದೆ. ಆಗೆಲ್ಲ, ಅಪ್ಪ ತುಟಿಯಂಚಿನಲ್ಲಿ ನಗುತ್ತಿದ್ದ. ನಡುಗುತ್ತಲೇ ನನ್ನ ಕೈ ಹಿಡಿಯುತ್ತಿದ್ದ. ‘ಥ್ಯಾಂಕ್ಸ್ ಕಣೋ..’ ಅನ್ನುವಂಥ ಸಂತೃಪ್ತ ಭಾವ ಅವನ ಮೊಗದಲ್ಲಿ ಎದ್ದು ಕಾಣುತ್ತಿತ್ತು.
ಸ್ಟ್ರೋಕ್‌ನ ಕಾರಣದಿಂದ, ಅಪ್ಪ ಹಾಸಿಗೆ ಹಿಡಿದಿದ್ದು ಪೂರ್ತಿ ನಾಲ್ಕು ವರ್ಷ. ಕೆಲವೊಮ್ಮೆ ಅಪ್ಪ ಗಂಟೆಗಳ ಕಾಲ ನಿದ್ರೆಗೆ ಜಾರಿ ಬಿಡುತ್ತಿದ್ದ. ‘ಅವರಿಗೆ ಎಚ್ಚರವಾಗಲು ತುಂಬಾ ಸಮಯ ಬೇಕಾಗುತ್ತೆ. ಹೊರಗೆ ಹೋಗಿ ಸುತ್ತಾಡಿಕೊಂಡು ಬನ್ನಿ, ಸ್ವಲ್ಪ ಮೈಂಡ್ ಫ್ರೆಶ್ ಆಗುತ್ತೆ’ಎಂದು ಮನೆಯವರೆಲ್ಲ ಹೇಳುತ್ತಿದ್ದರು. ಆದರೆ, ಹಾಗೆ ಮಾಡಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಅಪ್ಪನಿಗೆ ಪ್ರಜ್ಞೆ ಇಲ್ಲದಿರಬಹುದು. ಆದರೆ, ನನಗಿದೆ ಅಲ್ವ? ಅಪ್ಪ ಅಸಹಾಯಕ, ಆಶಕ್ತ ಮತ್ತು ರೋಗಿ ಎಂದು ತಿಳಿದೂ ಆತನನ್ನು ಒಂಟಿಯಾಗಿ ಬಿಟ್ಟು ಹೋಗಬೇಡ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು.
ಆಸ್ಪತ್ರೆಗೆ ಹೋಗುವಾಗ, ಊಟ ಮಾಡುವಾಗ, ಸ್ನಾನಕ್ಕೆ ಕೂರಿಸಿದಾಗ ಅಪ್ಪ, ತುಂಟ ಮಗುವಿನಂತೆ ಹಠ ಮಾಡುತ್ತಿದ್ದ. ಟಾಯ್ಲೆಟ್‌ಗೆ ಕರೆದೊಯ್ದಾಗ ಸಂಕಟಪಡುತ್ತಿದ್ದ. ಒಮ್ಮೊಮ್ಮೆ, ಇದ್ದಕ್ಕಿದ್ದಂತೆ ಕಣ್ತುಂಬಿಕೊಳ್ಳುತ್ತಿದ್ದ. ನಾಲ್ಕು ತುತ್ತು ತಿಂದಾಕ್ಷಣ, ಸಾಕು ಎಂದು ಕೈ ಆಡಿಸುತ್ತಿದ್ದ. ಆಗೆಲ್ಲಾ ‘ಇನ್ನು ಒಂದೇ ಒಂದ್ ತುತ್ತು. ಇದೇ ಕೊನೆಯ ತುತ್ತು…’ ಎಂದೆಲ್ಲಾ ಹೇಳಿ ಊಟ ಮಾಡಿಸುತ್ತಿದ್ದೆ. ಆಗೆಲ್ಲ, ಅಪ್ಪನ ಬಾಯಿಂದ ಒಂದು ಶಬ್ದವೂ ಹೊರಡುತ್ತಿರಲಿಲ್ಲ. ಆದರೆ, ಅವನ ಕಂಗಳು ಮಾತಾಡುತ್ತಿದ್ದವು. ತಾಯಿಯೊಬ್ಬಳು ತನ್ನ ಮಗುವನ್ನು ಕಾಪಾಡುತ್ತಾಳಲ್ಲ; ಅಷ್ಟೇ ಎಚ್ಚರದಿಂದ ನಾನೂ ಅಪ್ಪನನ್ನು ನೋಡಿಕೊಂಡೆ. ಅಪ್ಪನಿಗೆ ತುತ್ತು ತಿನ್ನಿಸುವ ಅದೃಷ್ಟ ಎಲ್ಲಾ ಮಕ್ಕಳಿಗೂ ಬರಲ್ಲ. ಅಂಥದೊಂದು ಅದೃಷ್ಟ ನನ್ನದಾಗಿತ್ತು. ತಂದೆಯ ಸೇವೆ ಮಾಡಿದಾಗ ದಕ್ಕಿದ ಖುಷಿ, ಫಿಲ್ಮ್ಫೇರ್ ಪ್ರಶಸ್ತಿ ಪಡೆದಾಗಲೂ ಆಗಿರಲಿಲ್ಲ.
ನಾಲ್ಕು ವರ್ಷಗಳ ಆ ಅವಧಿಯಲ್ಲಿ, ಅಪ್ಪನೊಳಗೇ ನನಗೆ ದೇವರು ಕಾಣಿಸಿದ. ‘ಪುಟ್ಟಮಗು’ವಿನಂತೆ ನಗುತ್ತ, ಅಳುತ್ತ, ಹುಸಿಮುನಿಸು ತೋರುತ್ತ, ದಿಢೀರ್ ಸಿಟ್ಟಾಗುತ್ತಾ ನನ್ನೊಂದಿಗಿದ್ದ ಅಪ್ಪ, ಕಡೆಗೊಮ್ಮೆ ಉಸಿರು ಚೆಲ್ಲಿದರು. ಕಣ್ಮುಚ್ಚುವ ಮೊದಲು, ಮೆಚ್ಚುಗೆಯಿಂದ ನನ್ನತ್ತ ನೋಡಿದರು. ಅದು ನನ್ನ ಬದುಕಿನ ಸಾರ್ಥಕ ಕ್ಷಣ. ಈ ಮಧ್ಯೆ, ಹಿಂದಿ ಚಿತ್ರರಂಗದಲ್ಲೂ ಹಲವು ಬದಲಾವಣೆಗಳಾದವು. ಒಂದರ್ಥದಲ್ಲಿ, ಜನ ನನ್ನನ್ನು ಮರೆತೂಬಿಟ್ಟರು. ಅದಕ್ಕಾಗಿ ವಿಷಾದವಿಲ್ಲ. ಈಗ ಯಾರಾದರೂ ಸಮಾಜಕ್ಕೆ, ಇಂದಿನ ಯುವ ಪೀಳಿಗೆಗೆ ನಿಮ್ಮ ಸಂದೇಶವೇನು ಎಂದು ಕೇಳಿದರೆ-‘ತಾಯ್ತಂದೆಯ ರೂಪದಲ್ಲೇ ದೇವರಿದ್ದಾನೆ. ಹಾಗಾಗಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದಷ್ಟೇ ಹೇಳ್ತೇನೆ…’
ಎ.ಆರ್.ಮಣಿಕಾಂತ್