ನಟ ಸುನೀಲ್ ರಾವ್, ಸುಧಾರಾಣಿ, ರಾಜ್ ಬಿ. ಶೆಟ್ಟಿ, ಅಚ್ಯುತ ಕುಮಾರ್, ಸಂಯುಕ್ತಾ ಹೆಗ್ಡೆ, ಹಿತಾ ಚಂದ್ರಶೇಖರ್, ಅರುಣಾ ಬಾಲರಾಜ್, ನಾಗೇಂದ್ರ ಶಾ ಮೊದಲಾದ ಕಲಾವಿದರ ಬೃಹತ್ ತಾರಾಗಣ ಹೊಂದಿರುವ “ತುರ್ತು ನಿರ್ಗಮನ’ ಸಿನಿಮಾಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ಸಿನಿಮಾ ಎರಡನೇ ವಾರಕ್ಕೆ ಕಾಲಿಡುತ್ತಿದೆ.
“ಕುಮಾರ್ ಆ್ಯಂಡ್ ಕುಮಾರ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ತುರ್ತು ನಿರ್ಗಮನ’ ಸಿನಿಮಾಕ್ಕೆ ಹೇಮಂತ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಇನ್ನು “ತುರ್ತು ನಿರ್ಗಮನ’ ಸಿನಿಮಾದ ಬಿಡುಗಡೆಯ ಬಳಿಕ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ದೇಶಕ ಹೇಮಂತ ಕುಮಾರ್, “ಕನ್ನಡದಲ್ಲಿ ಇದೊಂದು ಅಪರೂಪದ ಸೈನ್ಸ್ ಫಿಕ್ಷನ್ ಸಬೆಕ್ಟ್ ಸಿನಿಮಾ. ಸಿನಿಮಾದ ಬಿಡುಗಡೆಯಾದ ನಂತರ ನಿಧಾನವಾಗಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ನೋಡಿದ ಆಡಿಯನ್ಸ್, ಸಿನಿಮಾ ಮಂದಿ ಮತ್ತು ವಿಮರ್ಶಕರು ಕೂಡ ನಮ್ಮ ಪ್ರಯತ್ನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ’ ಎನ್ನುತ್ತಾರೆ.
“ಎಲ್ಲರೂ ಬದುಕಬೇಕು ಎಂದು ಬಯಸುತ್ತಾರೆ. ಇನ್ನು ಕೆಲವರಿಗೆ ಬದುಕು ಸಾಕು ಎನಿಸುತ್ತದೆ. ಈ ಎರಡೂ ಥರದ ಮನಸ್ಥಿತಿಯ ಜನರ ಬದುಕಿನ ಚಿತ್ರಣ “ತುರ್ತು ನಿರ್ಗಮನ’ ಸಿನಿಮಾದಲ್ಲಿದೆ. ಹುಟ್ಟು ಮತ್ತು ಸಾವು ಎರಡೂ ಕೂಡ ಅಂದುಕೊಳ್ಳದೆ ಆಗುವಂಥದ್ದು. ಅದಕ್ಕೆ ಯಾವುದೇ ಎಮರ್ಜೆನ್ಸಿ ಎಕ್ಸಿಟ್ ಅಂಥ ಇರುವುದಿಲ್ಲ. ಇರುವಷ್ಟು ಕಾಲ ಜೀವನವನ್ನು ಸದುಪಯೋಗಪಡಿಸಿಕೊಂಡು ಬದುಕಬೇಕು ಎಂಬ ಮೆಸೇಜ್ ಈ ಸಿನಿಮಾದಲ್ಲಿದೆ. ಒಂದು ಗಂಭೀರ ವಿಷಯವನ್ನು ಎಲ್ಲರಿಗೂ ಕನೆಕ್ಟ್ ಆಗುವಂತೆ ಹೊಸರೀತಿಯಲ್ಲಿ ಸಿನಿಮಾದಲ್ಲಿ ಹೇಳಿದ್ದೇವೆ. ನಮ್ಮ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುವುದು ನಿರ್ದೇಶಕ ಹೇಮಂತ್ ಮಾತು.
ಸದ್ಯ ಬಿಡುಗಡೆಯಾಗಿರುವ ಎಲ್ಲ ಕೇಂದ್ರಗಳಲ್ಲಿ “ತುರ್ತು ನಿರ್ಗಮನ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ನೋಡಿಕೊಂಡು ಇನ್ನಷ್ಟು ಕೇಂದ್ರಗಳಲ್ಲಿ ಸಿನಿಮಾದ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.