ಹೊಸದಿಲ್ಲಿ: ಕೋಲ್ಕತಾ ನೈಟ್‌ರೈಡರ್ನ ಸುನೀಲ್ ನಾರಾಯಣ್ ಐಪಿಎಲ್‌ನಲ್ಲಿ 100 ವಿಕೆಟ್ ಕಿತ್ತ ವಿದೇಶದ ಮೊದಲ ಸ್ಪಿನ್ನರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಾರಾಯಣ್ ಡೆಲ್ಲಿ ತಂಡದ ಕ್ರಿಸ್ ಮೊರಿಸ್ ಅವರ ವಿಕೆಟನ್ನು ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಅದೇ ಓವರಿನಲ್ಲಿ ವಿಜಯ್ ಶಂಕರ್ ವಿಕೆಟ್ ಪಡೆದ ನಾರಾಯಣ್ ಆಬಳಿಕ ಮೊಹಮ್ಮದ್ ಶಮಿ ಅವರನ್ನು ಕೆಡಹಿ ಐಪಿಎಲ್‌ನಲ್ಲಿ ತನ್ನ ವಿಕೆಟ್ ಗಳಿಕೆಯನ್ನು 102ಕ್ಕೇರಿಸಿದರು. ಕೇವಲ 18 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಿತ್ತ ನಾರಾಯಣ್ ಡೆಲ್ಲಿ ತಂಡದ ಕುಸಿತಕ್ಕೆ ಕಾರಣರಾದರು.
ಕಳೆದ ತಿಂಗಳು ಪಾಕಿಸ್ಥಾನ ಸೂಪರ್ ಲೀಗ್‌ನಲ್ಲಿ ಸಂಶಯಿತ ಬೌಲಿಂಗ್ ಕ್ರಮಕ್ಕೆ ಎಚ್ಚರಿಕೆ ಪಡೆದಿದ್ದ ಸುನೀಲ್ ನಾರಾಯಣ್ ಈಗ ತನ್ನ ಬೌಲಿಂಗ್ ಕ್ರಮದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿದ್ದಾರೆ. ಡೆಲ್ಲಿ ವಿರುದ್ಧ ನಿಖರ ದಾಳಿ ಸಂಘಟಿಸುವ ಮೂಲಕ ಅವರು ಕೆಕೆಆರ್‌ನ ಗೆಲುವಿಗೆ ತನ್ನ ಪಾಲಿನ ಕೊಡುಗೆ ಸಲ್ಲಿಸಿದ್ದಾರೆ. ನಾರಾಯಣ್ ಮತ್ತು ಕುಲದೀಪ್ ಒಟ್ಟಾರೆ ಆರು ವಿಕೆಟ್ ಕಿತ್ತ ಕಾರಣ ಕೆಕೆಆರ್ ತಂಡವು ಡೆಲ್ಲಿ ತಂಡವನ್ನು 71 ರನ್ನುಗಳಿಂದ ಸೋಲಿಸಲು ಯಶಸ್ವಿಯಾಯಿತು. ಕೆಕೆಆರ್ 9 ವಿಕೆಟಿಗೆ 200 ರನ್ ಗಳಿಸಿದ್ದರೆ ಡೆಲ್ಲಿ ತಂಡವು 14.2 ಓವರ್‌ಗಳಲ್ಲಿ 129 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು.
86 ಪಂದ್ಯಗಳಲ್ಲಿ 102 ವಿಕೆಟ್
ಐಪಿಎಲ್‌ನಲ್ಲಿ ಇಷ್ಟರವರೆಗೆ 86 ಪಂದ್ಯಗಳನ್ನಾಡಿರುವ ನಾರಾಯಣ್ 102 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 19 ರನ್ನಿಗೆ 5 ವಿಕೆಟ್ ಕಿತ್ತಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ. 2012ರಲ್ಲಿ ತನ್ನ ಮೊದಲ ಐಪಿಎಲ್‌ನಲ್ಲಿ ನಾರಾಯಣ್ ಈ ಸಾಧನೆ ಮಾಡಿದ್ದರು. ಡೆಲ್ಲಿ ತಂಡಕ್ಕೆ ಬೌಲಿಂಗ್ ಮಾಡಲು ಇಷ್ಟಪಡುವ ನಾರಾಯಣ್ 12 ಪಂದ್ಯಗಳಿಂದ 23 ವಿಕೆಟ್ ಕಿತ್ತಿದ್ದಾರೆ. ಇದು ಎರಡನೇ ಶ್ರೇಷ್ಠ ನಿರ್ವಹಣೆಯಾಗಿದೆ. ಪಂಜಾಬ್ ವಿರುದ್ಧ ಅವರು 26 ವಿಕೆಟ್ ಉರುಳಿಸಿದ್ದಾರೆ.
ಸುನೀಲ್ ನಾರಾಯಣ್ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಐಪಿಎಲ್‌ನಲ್ಲಿ ಪಿಂಚ್ ಹಿಟ್ಟರ್ ಆಗಿ ಇನ್ನಿಂಗ್ಸ್ ಆರಂಭಿಸಿರುವ ಅವರು ಡೆಲ್ಲಿ ವಿರುದ್ಧ ಮಿಂಚಲು ವಿಫಲರಾಗಿದ್ದರು. ಕೆಕೆಆರ್‌ನ ಆರಂಭಿಕ ಪಂದ್ಯದಲ್ಲಿ ನಾರಾಯಣ್ ಕೇವಲ 17 ಎಸೆತಗಳಲಿಲ ಅರ್ಧಶತಕ ಸಿಡಿಸಿದ್ದರು. ಇದರಿಂಧ ಕೆಕೆಆರ್ ತಂಡವು ಬೆಂಗಳೂರು ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತ್ತು.