ಬೆಂಗಳೂರು: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾರಿ ಮಾಡಿರುವ ವಾರೆಂಟ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಆಕ್ರೋಶದಲ್ಲಿ ಸುನಿಲ್ ಕುಮಾರ್ ಅವರು ಮುತಾಲಿಕ್ ವಿರುದ್ಧ ನೀಡಿದ್ದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮೊದಲು ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ, ಪಕ್ಷವು ವಿಪ್ ಜಾರಿ ಮಾಡಿದ್ದರಿಂದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸುನಿಲ್ ಕುಮಾರ್ ಪರ ವಕೀಲ ವಿನೋದ್ ಕುಮಾರ್ ಪೀಠದ ಗಮನಕ್ಕೆ ತಂದ ಬಳಿಕ ನ್ಯಾಯಮೂರ್ತಿ ತಡೆಯಾಜ್ಞೆ ನೀಡಿದರು.
ವಕೀಲ ವಿನೋದ್ ಕುಮಾರ್ ಅವರು ಚುನಾವಣೆ ಸಂದರ್ಭದಲ್ಲಿ ‘ ದೂರುದಾರ ಪ್ರಮೋದ್ ಮುತಾಲಿಕ್ ಅರ್ಜಿದಾರರ ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರಮೋದ್ ಮುತಾಲಿಕ್ ನೀಡಿದ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿದೆ. ಹೇಳಿಕೆಗೆ ಪ್ರತಿ ಹೇಳಿಕೆ ನೀಡಿದಾಗ ಮಾನನಷ್ಟ ಪ್ರಕರಣವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ’ ಎಂದು ಹೇಳಿದರು.
ತರಾಟೆಗೆ ತೆಗದುಕೊಂಡ ನ್ಯಾಯ ಪೀಠ ”ಸುನಿಲ್ ಕುಮಾರ್ ಅವರ ಹೇಳಿಕೆ ಮೇಲ್ನೋಟಕ್ಕೆ ಮಾನಹಾನಿಕರ ಎಂಬುದು ಸ್ಪಷ್ಟವಾಗುತ್ತದೆ. ಚುನಾವಣೆ ಸಮಯ ಎಂದು ಏನು ಬೇಕಾದರೂ ಮಾತನಾಡಬಹುದೇ ? ಅರ್ಜಿದಾರರು ನೀಡಿರುವ ಹೇಳಿಕೆಯನ್ನು ವಿಚಾರಣಾ ನ್ಯಾಯಾಲಯವು ಉಲ್ಲೇಖಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಿದೆ. ಹೇಳಿಕೆ ನೀಡುವುದಕ್ಕೂ ಒಂದು ಮಿತಿ ಇರಬೇಕು. ಟೈಗರ್ ಗ್ಯಾಂಗ್ ಏನು? ದೂರುದಾರರು ಆ ಟೈಗರ್ ಗ್ಯಾಂಗಿನ ಭಾಗವೇ? ಅರ್ಜಿದಾರರು ಹೇಗೆ ಆ ಹೇಳಿಕೆ ನೀಡಿದರು?’ ಎಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.
“ಇದು ನಿಜಕ್ಕೂ ಮಾನನಷ್ಟ ಪ್ರಕರಣವಾಗಿದೆ. ಮಾನಹಾನಿ ಹೇಳಿಕೆ ನೀಡುವುದು ಸಾರ್ವಜನಿಕ ಶಾಂತಿಭಂಗವನ್ನು ಉಂಟು ಮಾಡಲು ಕಾರಣವಾಗುತ್ತದೆ.ಶಾಸಕರಾದವರು ಈ ರೀತಿ ಮಾತನಾಡಬಾರದು” ಎಂದು ತರಾಟೆಗೆ ತೆಗೆದುಕೊಂಡಿತು.
ಕಿಡಿ ಕಾರಿದ್ದ ಸುನಿಲ್ ಕುಮಾರ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತನ್ನ ವಿರುದ್ಧ ಸಮರ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಪ್ರಮೋದ್ ಮುತಾಲಿಕ್ ವಿರುದ್ಧ ಫಲಿತಾಂಶದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದ ಸುನೀಲ್ ಕುಮಾರ್ ‘ಪ್ರಮೋದ್ ಮುತಾಲಿಕರೇ ಹಣಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಯನ್ನು ಟೈಗರ್ ಗ್ಯಾಂಗಿನ ನೆಪದಲ್ಲಿ ಎಷ್ಟು ಬಾರಿ ಮಾಡಿಸಿದ್ದೀರಿ ನೀವು?’ ಎಂದು ಹೇಳಿಕೆ ನೀಡಿದ್ದರು.