ಬೆಂಗಳೂರು: ಮೂರು ದಿನಗಳ ಹಿಂದೆ ಕಮಲಾನಗರದಲ್ಲಿ ಹಾಡಹಗಲೇ ರೌಡೀಶೀಟರ್ ಸುನೀಲ್ ಎಂಬಾತನನ್ನು ಹತೈಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಾಟ್ ನಾಗರಾಜ, ಓರ್ವ ಅಪ್ರಾಪ್ತ ಬಾಲಕ ಸೇರಿ ಒಟ್ಟು 9 ಮಂದಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಚೋಹಳ್ಳಿ ಗೇಟ್‌ನ ನಂದೀಶ್ (19), ದೊಡ್ಡಬಿದರಕಲ್ಲಿನ ರಮೇಶ್(25), ಕುಮಾರ್ (24), ಲಗ್ಗೆರೆಯ ವಿನಯ್ (21) , ಗುರುರಾಜ್( 24)ಉಮೇರ್ ಖಾನ್ (23), ಕಮಲಾನಗರದ ಖಾದರ್(28) ಬಂಧಿತ ದುಷ್ಕರ್ಮಿಗಳು. ಬಂಧಿತರನ್ನೆಲ್ಲ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಬಾಲಪರಾಧಿಯನ್ನು ರಿಮ್ಯಾಂಡ್ ಹೋಂಗೆ ಕಳುಹಿಸಿಕೊಡಲಾಗಿದೆ.
ಪರಾರಿಯಾಗಲು ಯತ್ನ: ಸುನೀಲ್‌ನನ್ನು ಕೊಲೆಗೈದ ನಂತರ ಗುರುವಾರದವರೆಗೂ ಅಡ್ಡಾಡಿಕೊಂಡಿದ್ದ ಆರೋಪಿಗಳು ನೆರೆರಾಜ್ಯಗಳಿಗೆ ತೆರಳಲು ನಿರ್ಧರಿಸಿದ್ದರು. ಹೀಗಾಗಿ ಸ್ನೇಹಿತರ ಬಳಿ ಹಣ ಹೊಂದಿಸಿಕೊಂಡು, ಮೋಚೋಹಳ್ಳಿ ಬಳಿಯಿರುವ ಎರಡನೇ ಆರೋಪಿ ನಂದೀಶ್ ಮನೆ ಸೇರಿಕೊಂಡಿದ್ದರು. ಅಲ್ಲಿಂದ ಗುರುವಾರ ರಾತ್ರಿ ಆಂಧ್ರದ ಚಿತ್ತೂರಿಗೆ ತೆರಳಲು ನಿರ್ಧರಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಪಾಟ್ ನಾಗ ಹಾಗೂ ಆರೋಪಿಗಳನ್ನು ಬಂಧಿಸಿದ್ದಾರೆ.
ಜತೆಯಲ್ಲಿದ್ದವನಿಂದಲೇ ಸಂಚು: ಕಳೆದ ವರ್ಷ ಸ್ಪಾಟ್ ನಾಗನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಸುನೀಲ್, 10ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ತನ್ನ ಮೇಲಿನ ಕೊಲೆಯತ್ನ ಮಾಡಿದ್ದ ಆಕ್ರೋಶಗೊಂಡಿದ್ದ ನಾಗ, ತನ್ನ ಸಹಚರರ ಜತೆಗೂಡಿ ಸುನೀಲನ ಕೊಲೆಮಾಡಲು ಮೂರು ದಿನಗಳ ಹಿಂದೆಯೇ ಸಂಚು ರೂಪಿಸಿದ್ದ. ಅದರಂತೆ ಸುನೀಲನ ಸಹಚರನೇ ಆಗಿದ್ದ ವಿನಯ್ ಎಂಬಾತನನ್ನು ಪುಸಲಾಯಿಸಿದ್ದ ನಾಗನ ತಂಡ, ಆತನ ಚಲನವಲನಗಳನ್ನು ಫಾಲೋ ಮಾಡುವಂತೆ ತಿಳಿಸಿತ್ತು.
ಕೊಲೆಯಾದ ಹಿಂದಿನ ದಿನ ರಾತ್ರಿ ಬಾರ್‌ವೊಂದರಲ್ಲಿ ಸುನೀಲ್, ವಿನಯ್ ಹಾಗೂ ಆತನ ಸ್ನೇಹಿತರು ಮದ್ಯಸೇವಿಸುತ್ತಿದ್ದಾಗ ಸ್ಪಾಟ್‌ನಾಗನನ್ನು ಕೊಲೆ ಮಾಡಿಯೇ ತೀರುತ್ತೇನೆ ಎಂದಿದ್ದ. ಈ ವಿಚಾರವನ್ನು ವಿನಯ್ ನಾಗನಿಗೆ ರವಾನಿಸಿದ್ದ. ಇದ ರಿಂದ ಮತ್ತಷ್ಟು ಕೋಪಗೊಂಡ ನಾಗ, ಬುಧವಾರ ಬೆಳಗ್ಗೆಯೇ ಸುನೀಲ್ ಹತೈ ಗೈಯಲು ತೀರ್ಮಾನಿಸಿದ್ದ. ಅದರಂತೆ ಕೊಲೆಯನ್ನೂ ಮಾಡಿದ್ದ ಎಂದು ಪೊಲೀಸರು ತಿಳಿಸಿದರು.
49 ಮಂದಿ ಬಂಧನ: ಬಸವೇಶ್ವರ ನಗರ, ಮಾಗಡಿರೋಡ್ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸೂಕ್ತರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 49 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಹಲವರನ್ನು ಬಂಧಿಸಲು ತೀರ್ಮಾನಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ಗೂಂಡಾ ಕಾಯಿದೆ
ಸುನೀಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಇತರೆ ಆರೋಪಿಗಳು ಎಸಗಿರುವ ಅಪರಾಧ ಕೃತ್ಯಗಳ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ ಈಗಾಗಲೇ ಸ್ಪಾಟ್ ನಾಗನ ಮೇಲೆ 8 ಕೇಸ್‌ಗಳು ದಾಖಲಾಗಿವೆ. ಹೀಗಾಗಿ ಗೂಂಡಾ ಕಾಯ್ದೆಯಡಿ ದೂರು ದಾಖಲಿಸಲು ಪರಿಶೀಲನೆ ನಡೆಸಲಾಗುತ್ತಿ¨ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣ ಮೂರ್ತಿ ತಿಳಿಸಿದ್ದಾರೆ.