Advertisement

ವಾಟ್ಸಾಪ್‌ ಕತೆ

09:13 PM Feb 08, 2020 | Hari Prasad |

ಲೆಕ್ಕಾಚಾರ
ಅಜ್ಜಿ ರಸ್ತೆಯ ಪಕ್ಕ ಕೂತು ಸೊಪ್ಪು ಮಾರುತ್ತಿದ್ದಳು. ಒಂದಷ್ಟು ಸೊಪ್ಪು ಕೈಯಲ್ಲಿ ಹಿಡಿದು, “ಅಜ್ಜಿ ಎಷ್ಟು ಕೊಡಲಿ?” ಅಂದೆ. ‘ಹದಿನೆಂಟು ರೂಪಾಯಿ ಕೊಡಿ” ಅಂದಿತು ಅಜ್ಜಿ.
ಇಪ್ಪತ್ತು ರೂಪಾಯಿ ಕೊಟ್ಟೆ. ಅಜ್ಜಿ ಎರಡು ರೂಪಾಯಿ ವಾಪಸು ಕೊಡಲು ಬಂದರು. ನಾನು ತೆಗೆದುಕೊಳ್ಳಲಿಲ್ಲ. ಮತ್ತೂಮ್ಮೆ ಹೀಗೆ ಎಳನೀರು ಕುಡಿಯುವ ವಿಷಯದಲ್ಲೂ ಮೂರು ರೂಪಾಯಿ ಚಿಲ್ಲರೆ ಮರಳಿ ಕೊಡಲು ಬಂದ ರೈತನಿಗೆ, “”ಪರವಾಗಿಲ್ಲ, ಇಟ್ಟುಕೊಳ್ಳಿ” ಎಂದಿದ್ದೆ.

Advertisement

ಮೊನ್ನೆ ಊರಿಗೆ ಹೊರಟಿದ್ದೆ ನೋಡಿ. ಕಂಡಕ್ಟರ್‌ ಟಿಕೆಟ್‌ನ ಹಿಂಭಾಗದಲ್ಲಿ ಎಂಟು ರೂಪಾಯಿ ಚಿಲ್ಲರೆ ಬರೆದಿದ್ದ. ಅದನ್ನು ಪ್ರಯಾಣ ಪೂರ್ತಿ ನೆನಪಿಟ್ಟುಕೊಂಡು ಊರು ಬಂದಾಗ ಚೀಟಿ ತೋರಿಸಿ ಚಿಲ್ಲರೆ ಕೇಳಿದೆ. ಹದಿನೈದು ರೂಪಾಯಿ ಕೊಟ್ಟು ಎಂಟು ಮತ್ತು ಏಳು ರೂಪಾಯಿ ಹಂಚಿಕೊಳ್ಳಲು ಹೇಳಿ ಹೋದ. ಎಂಟು ರೂಪಾಯಿ ಕೊಡಬೇಕಾದ ನನ್ನ ಸಹಪಯಣಿಗ ನನ್ನನ್ನು ನೋಡಿದ. ಅವನು ಪೂರ್ಣ ಹದಿನೈದು ರೂಪಾಯಿಯನ್ನು ನನ್ನ ಕೈಯಲ್ಲಿಟ್ಟು, “ಪರವಾಗಿಲ್ಲ, ಇಟ್ಕೊಳ್ಳಿ” ಅಂತ ಹೇಳಿ ತಿರುಗಿ ನೋಡದೆ ಹೊರಟು ಹೋದ. ನಾನು, “ಹಲೋ ಹಲೋ…” ಅಂತ ಕೂಗಿದರೂ ಅವನು ತಿರುಗಿ ಬರಲಿಲ್ಲ.

ಬೇರೆಯವರಿಗೆ ಕೊಟ್ಟ ಎರಡರಷ್ಟು ಈಗ ನನ್ನ ಕೈಯಲ್ಲಿತ್ತು. ದೇವರ ಬಳಿ ಒಳ್ಳೆಯ ಕ್ಯಾಲ್ಕುಲೇಟರ್‌ ಖಂಡಿತ ಇದೆ !
— ಸದಾಶಿವ ಸೊರಟೂರು

ರಂಗೋಲಿ
ಮಹಾನಗರಿಯೆಂಬ ತುದಿ ಮೊದಲಿಲ್ಲದ ಮಡಿಲಿಗೆ ಬಂದು ಬಿದ್ದ ಅವಳು, ತನ್ನ ಹಿಂದಿನ ಅಭ್ಯಾಸ ಬಲದಂತೆ ಬೆಳಗು ಹುಟ್ಟುವ ಮೊದಲೇ ಮನೆಯ ಮುಂದಿನ ರಸ್ತೆಯನ್ನು ಅಂಗಳದಂತೆ ಗುಡಿಸಿ, ಎರಡು ಚೊಂಬು ನೀರು ಎರಚಿ ರಂಗೋಲಿ ಪುಡಿಯ ಬಟ್ಟಲು ಹಿಡಿದು ಬಂದಳು.

ಎಲ್ಲೋ ಇದ್ದ ಚುಕ್ಕೆ ಮತ್ತೂಂದನ್ನು ಸೇರಿ ಹೂವಾಗುವುದನ್ನು ಧೇನಿಸುತ್ತಲೇ ಚೆಂದದ ಬಳ್ಳಿ ಬಿಡಿಸಿಟ್ಟು ತೃಪ್ತಿಯ ನಗು ನಕ್ಕಳು. ತೆಳ್ಳಗೆ ಬೆಳಕು ಅವತರಿಸುವ ಹೊತ್ತಿಗೆ ಕೆದಕಿದ ಇರುವೆಗಳಂತೆ ಮನೆಯಿಂದ ಹೊರಬಿದ್ದ ಜನರು ಅವಳು ಬಿಡಿಸಿಟ್ಟ ರಂಗೋಲಿಯನ್ನು ನೋಡಿ ಆನಂದಿಸುವುದು ಒತ್ತಟ್ಟಿಗಿರಲಿ, ಅದನ್ನು ನಿರ್ದಯವಾಗಿ ತುಳಿದುಕೊಂಡೇ ಮುಂದೆ ಹೋಗುತ್ತಿದ್ದರು.

Advertisement

ಜನರ ಕಾಲುಗಳ ಕೆಳಗೆ ನಲುಗುತ್ತಿರುವ ಹೂಬಳ್ಳಿಗಳನ್ನು ಅದೆಷ್ಟೋ ಹೊತ್ತು ಹನಿಗಣ್ಣಾಗಿ ನೋಡುತ್ತ ನಿಂತಿದ್ದ ಅವಳ ಅಂಗಳದಲ್ಲಿ ಮತ್ತೂಮ್ಮೆ ಹೂ ಅರಳಿದ್ದನ್ನು ಯಾರೂ ಕಂಡಿಲ್ಲ. ಕಾಣುವಷ್ಟು ವ್ಯವಧಾನ ತುಳಿದು ಬದುಕುವ ನಗರ ಜೀವನಕ್ಕೆ ಇರಲೂ ಇಲ್ಲ !
— ಕವಿತಾ ಭಟ್‌

ಅದೃಷ್ಟ
ಲಾಟರಿ, ಲಕ್ಕಿಡಿಪ್‌ ಅದೃಷ್ಟ ತರುವ ಈ ಚೀಟಿಗಳಿಗೆ ಎಷ್ಟೆಲ್ಲ ಹಣ ಹಾಕಿದರೂ ಒಮ್ಮೆಯಾದರೂ ಒಂದು ರೂಪಾಯಿಯೂ ಕೊಡುಗೆಯಾಗಿ ಸಿಕ್ಕಿರಲಿಲ್ಲ. ಅದೃಷ್ಟವೇ ಇಲ್ಲದ ನನ್ನ ಹಣೆಯ ಬರಹಕ್ಕೆ ಎಷ್ಟೋ ಸಲ ನಾನೇ ಶಾಪ ಹಾಕಿದೆ. ಹಾಗಂತ ಲಾಟರಿ ವ್ಯಾಮೋಹ ಕಮ್ಮಿಯಾಗಲಿಲ್ಲ.

ದೇವರು ಕಣ್ಣು ತೆರೆದರೆ? ಅದೃಷ್ಟ ಲಕ್ಷ್ಮಿ ಬಲಗಾಲಿಟ್ಟು ಒಳಗೆ ಬಂದರೆ? “ರೆ’ಗಳ ರಾಜ್ಯದಲ್ಲೆ ಸುತ್ತಾಡುತ್ತಿದ್ದೆ. ಆ ದೇವರು ಯಾವಾಗ ಕಣ್ಣು ತೆರೆವನೊ? ಆ ಮುಹೂರ್ತ ಗೊತ್ತಿರಲಿಲ್ಲ.

ಒಮ್ಮೆ ಲಾಟರಿ ತಕ್ಕೊಂಡವನು ಅಂಗಡಿಯಿಂದ ಗಡಿಬಿಡಿಯಲ್ಲಿ ಹೊರಬಂದು ಆಚೀಚೆ ನೋಡದೆ ರಸ್ತೆ ದಾಟುತ್ತಿದ್ದೆ. ಎದುರಿನಿಂದ ಬಸ್ಸು ಬರುತ್ತಿರುವುದೂ ಗಮನಕ್ಕೆ ಬಂದಿರಲಿಲ್ಲ. ಕೂದಲೆಳೆಯ ಅಂತರದಿಂದ ಬಚಾವಾಗಿದ್ದೆ. ರಸ್ತೆ ದಾಟಿ ಜೀವಂತ ಇದ್ದೆ !
ಯಾವುದೋ ಕಾಣದ ಕೈಗಳು ನನ್ನನ್ನು ರಸ್ತೆ ದಾಟಿಸಿದ್ದವು. ಅವೇ ಕೈಗಳು ಇದಕ್ಕಿಂತ ಮೊದಲು ಎಷ್ಟೋ ಸಲ ಕಾಪಾಡಿದ್ದಿರಬಹುದು. ಮುಂದಕ್ಕೂ ಕಾಪಾಡಿಯಾವು.

ಅದೃಷ್ಟಕ್ಕೂ ಆಯಾಸ ತರುವ ಬಳಲಿಕೆ, ತೂಕಡಿಕೆ ಎಲ್ಲ ನಮ್ಮಂತೆ ಇದೆ ತಾನೆ? ಅದು ಯಾವಾಗ ಎಚ್ಚರವಾಗಿರುತ್ತದೋ ಯಾರಿಗೆ ಗೊತ್ತು?

ಅಪಘಾತದಿಂದ ಪಾರಾದೆ.

ಆ ಸಲವೂ ಲಾಟರಿ ಟಿಕೇಟನ್ನು ಹರಿದು ಬಿಸಾಡಬೇಕಾಯಿತು.
— ಯು. ದಿವಾಕರ ರೈ

ದೈನಂದಿನ ಅನುಭವಗಳನ್ನೇ ಕತೆಯಾಗಿಸಿ ಕಳುಹಿಸಿ
ಅಂಚೆ ವಿಳಾಸ : ಸಂಪಾದಕರು, ಸಾಪ್ತಾಹಿಕ ಸಂಪದ ವಿಭಾಗ, ಉದಯವಾಣಿ ದಿನಪತ್ರಿಕೆ, ನಾಲ್ಕನೆಯ ಮಹಡಿ, ಉದಯವಾಣಿ ಹೊಸಕಟ್ಟಡ, ಮಣಿಪಾಲ-576104
ಈಮೇಲ್‌ ವಿಳಾಸ :
 sundayudaya@manipalmedia.com

Advertisement

Udayavani is now on Telegram. Click here to join our channel and stay updated with the latest news.

Next