ಹೊಸದಿಲ್ಲಿ: ಕೇರಳದಲ್ಲಿ ಓಣಂ ಅನಂತರ ತೀವ್ರಗತಿ ಯಲ್ಲಿ ಏರುತ್ತಿರುವ ಕೊರೊನಾ ಸೋಂಕು ಪ್ರಕರಣ ಗಳನ್ನು ನಿಯಂತ್ರಣಕ್ಕೆ ತರಲು ಮುಂದಾಗಿರುವ ಕೇರಳ ಸರಕಾರ, ಅಲ್ಲಿ ಪ್ರತೀ ರವಿವಾರ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಿದೆ. ಜತೆಗೆ, ಸೋಮವಾರ ದಿಂದ ಪ್ರತೀ ದಿನ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಅನ್ವಯವಾಗುವಂತೆ ನೈಟ್ ಕರ್ಫ್ಯೂ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗಿನ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ 31,265 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿಗೆ ಸತತ ನಾಲ್ಕು ದಿನವೂ ಆ ರಾಜ್ಯದಲ್ಲಿ ದಿನಂಪ್ರತಿ ಕೇಸುಗಳು 30 ಸಾವಿರ ದಾಟಿದಂತಾಗಿದೆ. ಇದೇ ಅವಧಿಯಲ್ಲಿ 153 ಸೋಂಕಿತರು ಸಾವನ್ನಪ್ಪಿದ್ದಾರೆ.
ಹೊಸದಾಗಿ 46 ಸಾವಿರ ಕೇಸ್: ಶುಕ್ರವಾರ-ಶನಿವಾರ ನಡು ವಿನ 24 ಗಂಟೆಗಳಲ್ಲಿ ದೇಶಾದ್ಯಂತ 46,759 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,26,49,947ಕ್ಕೇರಿದೆ. ಇದೇ ಅವಧಿಯಲ್ಲಿ 509 ಸೋಂಕಿತರು ಸಾವನ್ನಪ್ಪಿದ್ದು, ದೇಶದಲ್ಲಿ ಸಂಭವಿಸಿದ ಒಟ್ಟಾರೆ ಸಾವಿನ ಸಂಖ್ಯೆ 3,59,775ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪಿಸಿಆರ್ ಸರ್ಟಿಫಿಕೆಟ್ ಕಡ್ಡಾಯ: ವಿದೇಶಗಳಿಂದ ಮಹಾರಾಷ್ಟ್ರಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ- ಪಿಸಿಆರ್ ಪರೀಕ್ಷೆಯ ನೆಗೆಟಿವ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕೆಂದು ಮಹಾರಾಷ್ಟ್ರ ಸರಕಾರ ಆದೇಶಿಸಿದೆ. ಎರಡು ಡೋಸ್ ಲಸಿಕೆ ಪಡೆದು ಕೊಂಡಿದ್ದವರಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಸರಕಾರ ಹೇಳಿದೆ.
ಒಮ್ಮೆ ಕೊರೊನಾ ಬಂದಿ ದ್ದ ರೆ ಕೊವ್ಯಾ ಕ್ಸಿನ್ 1 ಡೋಸ್ ಸಾಕು
ಈಗಾಗಲೇ ಒಮ್ಮೆ ಕೊರೊನಾ ಸೋಂಕಿತರಾಗಿದ್ದು ಚೇತರಿಸಿಕೊಂಡಿದ್ದರೆ; ಅಂಥವರು ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ತೆಗೆದುಕೊಂಡರೂ ಎರಡು ಡೋಸ್ ತೆಗೆದುಕೊಂಡ ಸಾಮರ್ಥ್ಯವೇ ಉಂಟಾಗುತ್ತದೆ! ಹೀಗೆಂದು ಐಸಿಎಂಆರ್ ಮಾಡಿದ ಅಧ್ಯಯನದಲ್ಲಿ ಹೇಳಲಾಗಿದೆ. ಈ ಅಧ್ಯಯನ ವರದಿ ಮೆಡಿಕಲ್ ರಿಸರ್ಚ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್‌ಗೆ; ಬಿಬಿವಿ152 ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ. ಕೊರೊನಾದಿಂದ ಗುಣಮುಖರಾದವರು ಒಂದು ಡೋಸ್ ಪಡೆದರೂ ಎರಡು ಡೋಸ್ ಪಡೆದಷ್ಟು ಪ್ರತಿಕಾಯ ದೇಹದಲ್ಲಿ ಸೃಷ್ಟಿಯಾಗಿರುತ್ತದೆ ಎಂದು ವರದಿ ಹೇಳಿದೆ.