Advertisement

ರವಿವಾರ ತರಗತಿ ಪ್ರಸ್ತಾವಕ್ಕೆ ವ್ಯಾಪಕ ವಿರೋಧ

11:54 PM Aug 19, 2019 | Sriram |

ಮಂಗಳೂರು: ಮಳೆ ಮತ್ತು ಪ್ರವಾಹದ ಕಾರಣ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸಲು ರವಿವಾರ ತರಗತಿ ನಡೆಸುವ ಪ್ರಸ್ತಾವಕ್ಕೆ ಶೈಕ್ಷಣಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.

Advertisement

“ಶನಿವಾರ ಅಪರಾಹ್ನವೂ ತರಗತಿ ನಡೆಸುವುದಕ್ಕೆ ಯಾವುದೇ ತಕರಾರು ಇಲ್ಲ; ಆದರೆ ರವಿವಾರ ನಡೆಸುವ ಬಗ್ಗೆ ಆಕ್ಷೇಪವಿದೆ ಎಂದು ಮಂಗಳೂರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್‌ ಡಿ’ಸೋಜಾ ತಿಳಿಸಿದ್ದಾರೆ.

ಮಕ್ಕಳಿಗೆ ಮಾನಸಿಕ ಒತ್ತಡ
ವಾರದ 6 ದಿನಗಳಲ್ಲಿ ಪಾಠ ಪ್ರವಚನ ಕೇಳುವ ಮಕ್ಕಳಿಗೆ ವಾರದಲ್ಲಿ ಒಂದು ದಿನವಾದರೂ ವಿಶ್ರಾಂತಿ ಬೇಕಾಗುತ್ತದೆ. 7ನೇ ದಿನವೂ ಪಾಠ ಕೇಳುವುದೆಂದರೆ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಎಂದಿರುವ ಅವರು ಕಳೆದ ವರ್ಷ ಎಲ್ಲ ರಜೆಗಳನ್ನು ಶನಿವಾರ ಭರ್ತಿ ಮಾಡಲಾಗಿತ್ತು ಎಂದವರು ವಿವರಿಸಿದ್ದಾರೆ.

ರವಿವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಅನೇಕ ಕೌಟುಂಬಿಕ ಸಮಾರಂಭಗಳು ಇರುತ್ತವೆ. ಹಲವು ತಿಂಗಳ ಹಿಂದೆಯೇ ನಿಗದಿಯಾಗಿರುವ ಕೆಲವೊಂದು ಸಭೆ ಸಮಾರಂಭಗಳನ್ನು ಬದಲಾಯಿಸಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ರವಿವಾರ ತರಗತಿ ನಡೆಸಿದರೆ ಮಕ್ಕಳಿಗೆ ಮಾತ್ರವಲ್ಲ, ಶಿಕ್ಷಕ-ಶಿಕ್ಷಕೇತರ ಸಿಬಂದಿಗೆ, ಶಾಲಾ ಆಡಳಿತದ ಮಂದಿಗೆ ಅಂತಹ ಸಮಾರಂಭಗಳಲ್ಲಿ ಭಾಗವಹಿಲು ಅನನುಕೂಲವಾಗುತ್ತದೆ ಎಂದಿದ್ದಾರೆ.

ರವಿವಾರ ಎಲ್ಲರಿಗೂ ಕಷ್ಟ
ರವಿವಾರ ತರಗತಿ ನಡೆಸಿದರೆ ಮಕ್ಕಳಿಗೆ ಮಕ್ಕಳಿಗೆ ಮಾತ್ರವಲ್ಲ ಶಿಕ್ಷಕರಿಗೆ, ಪೋಷಕರಿಗೆ ಸೇರಿದಂತೆ ಎಲ್ಲರಿಗೂ ಕಷ್ಟ. ಆದ್ದರಿಂದ ರವಿವಾರದ ತರಗತಿಗೆ ನಮ್ಮ ವಿರೋಧವಿದೆ ಎಂದು ದ.ಕ. ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಜಯಶ್ರೀ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಒಮ್ಮತದ ತೀರ್ಮಾನಕ್ಕೆ ಪ್ರಯತ್ನಿಸುವೆ
ರವಿವಾರ ತರಗತಿ ಬೇಡ ಎಂದು ಶಿಕ್ಷಕರು ತಿಳಿಸಿದ್ದಾರೆ. ಕೆಲವು ಮಕ್ಕಳ ಹೆತ್ತವರು/ ಪೋಷಕರೂ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪಠ್ಯ ವಿಷಯ ಮುಗಿಸುವ ಒತ್ತಡ ಶಿಕ್ಷಣ ಇಲಾಖೆಗೆ ಇದೆ. ಸಂಬಂಧ ಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
– ವೇದವ್ಯಾಸ ಡಿ. ಕಾಮತ್‌, ಶಾಸಕರು, ಮಂಗಳೂರು ನಗರ ದಕ್ಷಿಣ

ಕ್ರೀಡೆಗೆ ಅಡ್ಡಿ
ಕ್ರಿಡಾಪಟುಗಳಾಗಿರುವ ಮಕ್ಕಳಿಗೆ ತರಬೇತಿ ನೀಡಲು ನಮಗೆ ಅವಕಾಶ ಇರುವುದು ರವಿವಾರ ಮಾತ್ರ. ಶಾಲಾ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ, ಪ್ರತಿಭಾ ಕಾರಂಜಿ ತರಬೇತಿ ನಡೆಯುತ್ತಿದ್ದು, ಕ್ರೀಡಾ ತರಬೇತಿಗೆ ಅವಕಾಶ ಸಿಗುತ್ತಿಲ್ಲ. ರವಿವಾರವೂ ತರಗತಿ ನಡೆಸಿದರೆ ಕ್ರೀಡಾ ತರಬೇತಿ ಕೊಡುವುದು ಯಾವಾಗ? ಆದ್ದ ರಿಂದ ರವಿವಾರ ತರಗತಿಗಳು ಬೇಡ.
– ಶಿವರಾಮ ಏನೆಕಲ್ಲು, ದ.ಕ. ಜಿಲ್ಲಾ ದೈ.ಶಿಕ್ಷಕರ ಸಂಘದ ಅಧ್ಯಕ್ಷ

ವಿರಾಮ ಬೇಡವೇ?
ರವಿವಾರವೂ ತರಗತಿ ಮಾಡಿದರೆ ಮಕ್ಕಳಿಗೆ ವಿರಾಮ ಯಾವಾಗ? ವಾರದ ಏಳೂ ದಿನ ಪಾಠ ಪ್ರವಚನದಿಂದ ಅವರಿಗೆ ಮಾನಸಿಕ ಒತ್ತಡ ಆಗಬಹುದು. ಹಾಗಾಗಿ ರವಿವಾರ ತರಗತಿ ಬೇಡ. ಶನಿವಾರ ಮಧ್ಯಾಹ್ನ ಬಳಿಕ ತರಗತಿ ನಡೆಸಿ ರಜೆಯನ್ನು ಸರಿ ದೂಗಿಸುವುದು ಉತ್ತಮ.
– ಜಗದೀಶ್‌ ಶೆಟ್ಟಿ,
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು
ದಕ್ಷಿಣ ವಲಯ ಅಧ್ಯಕ್ಷ

ಮಕ್ಕಳು ಬಂದರೆ ತಾನೇ?
ರವಿವಾರ ಮಕ್ಕಳು ಬಂದರೆ ತಾನೇ ತರಗತಿ ನಡೆಸುವುದು? ಅಂದು ಬಸ್‌ ಪಾಸ್‌ ಸೌಲಭ್ಯ ಇಲ್ಲ. ಎಲ್ಲರಿಗೂ ವಾರದಲ್ಲಿ ಒಂದು ದಿನ ವಿರಾಮ ಅಗತ್ಯ. ಆದ್ದರಿಂದ ರವಿವಾರ ತರಗತಿ ಬೇಡ. ಅಂದು ಶಾಲೆಗೆ ಹೋಗುವ ಪ್ರಶ್ನೆಯೇ ಇಲ್ಲ. ಶನಿವಾರ ಮಾಡಲಿ; ಹೋಗುತ್ತೇವೆ.
– ಚನ್ನಕೇಶವ, ದ.ಕ. ಚಿತ್ರ
ಕಲಾ ಶಿಕ್ಷಕರ ಸಂಘದ ಅಧ್ಯಕ್ಷ

ವಾರಕ್ಕೊಂದು ದಿನ ರಜೆ ಬೇಕು
ವಾರಕ್ಕೊಂದು ದಿನ ರಜೆ ಬೇಕು. ನಿಗದಿತ ಅವಧಿಯಲ್ಲೇ ಪಠ್ಯಕ್ರಮವನ್ನು ಮುಗಿಸಬೇಕೆಂದು ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿಯಾಗಿ ತರಗತಿ ನಡೆಸುತ್ತಿದ್ದೇವೆ. ರವಿವಾರವೂ ವಿಶ್ರಾಂತಿ ಇಲ್ಲದಿದ್ದರೆ ಹೇಗೆ? ಮಕ್ಕಳ ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ರವಿವಾರ ತರಗತಿ ನಡೆಸುವುದು ಆರೋಗ್ಯಕರ ಬೆಳವಣಿಗೆ ಅಲ್ಲ.
– ಪಿ.ಡಿ. ಶೆಟ್ಟಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ
ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next