Advertisement

“ಯಾಕೆ ಯೋಚನೆ ಮಾಡ್ತೀರಿ…ಇಷ್ಟು ಕಡಿಮೆ ರೊಕ್ಕಕ್ಕೆ ಬೇರೆಲ್ಲೂ ಡ್ರೆಸ್‌ ಸಿಗಲ್ಲ’

01:08 AM Feb 24, 2020 | Sriram |

ಮಹಾನಗರ: “ಹಾಫ್‌ ರೇಟ್‌.. ಹಾಫ್‌ ರೇಟ್‌’ ಎಂದು ಒಬ್ಟಾತ ಹಳೆಯ ಬಟ್ಟೆಯನ್ನು ಕೈಯಲ್ಲಿ ಹಿಡಿದು ಗ್ರಾಹಕರನ್ನು ಕರೆಯುತ್ತಿದ್ದರೆ, “ಯಾಕೆ ಯೋಚನೆ ಮಾಡ್ತೀರಿ.. ಇಷ್ಟು ಕಡಿಮೆ ರೊಕ್ಕಕ್ಕೆ ಮಂಗಳೂರಲ್ಲಿ ಬೇರೆಲ್ಲೂ ಡ್ರೆಸ್‌ ಸಿಗಲ್ಲ’ ಅಂತ ಇನ್ನೊಬ್ಟಾತ ಗ್ರಾಹಕರ ಮನ ಸೆಳೆಯಲು ಪ್ರಯತ್ನಿಸಿದ. ಆದರೆ ಪಕ್ಕದಲ್ಲಿದ್ದ ಇನ್ನೊಬ್ಬ ಬಟ್ಟೆ ವ್ಯಾಪಾರಿ “ಇಲ್ಲಿ ಇನ್ನೂ ಕಡಿಮೆಗಿದೆ.. ಇಲ್ಲಿ ಬನ್ನಿ’ ಎಂದು ಆಹ್ವಾನ ನೀಡುತ್ತಲೇ ಇದ್ದ!

Advertisement

ನಗರದ ಪುರಭವನದ ಎಡಭಾಗದಲ್ಲಿರುವ ಫುಟ್‌ಪಾತ್‌ನಲ್ಲಿ ರವಿವಾರ ಬೆಳಗ್ಗಿನಿಂದ ಸಂಜೆಯವರೆಗೆ ಸಾಗಿದರೆ ನಿಮಗೆ ಇಂತಹ ಅನುಭವ ಆಗುತ್ತದೆ. ಕಾರಣ “ಸಂಡೇ ಬಜಾರ್‌’.

ಉ. ಕರ್ನಾಟಕ ಸಹಿತ ಬೇರೆ ಬೇರೆ ಜಿಲ್ಲೆ, ಬೇರೆ ರಾಜ್ಯದ ಬಟ್ಟೆ ವ್ಯಾಪಾರಿಗಳು ರವಿವಾರ ಮಂಗಳೂರಿಗೆ ಬರುತ್ತಾರೆ. ಜತೆಗೆ ತರಕಾರಿ, ಬ್ಯಾಗ್‌, ಶೇಂಗಾ, ತಿಂಡಿ ತಿನಿಸು ಸಹಿತ ಇತರ ಸಣ್ಣ ಪುಟ್ಟ ವಸ್ತುಗಳನ್ನು ಮಾರುವವರೂ ಇದೇ ವೇಳೆ ಬರುತ್ತಾರೆ. ವಿಶೇಷವೆಂದರೆ; ಇಲ್ಲಿ ಮಾರುವ ಬಟ್ಟೆಗಳು ಸೆಕೆಂಡ್‌ ಹ್ಯಾಂಡ್‌ ಸೇಲ್‌. ಅರ್ಥಾತ್‌ ಒಮ್ಮೆ ಬಳಕೆ ಮಾಡಿದ ಬಟ್ಟೆಗಳು ಇಲ್ಲಿ ಕಡಿಮೆ ದರಕ್ಕೆ ಸೇಲ್‌. ಕೆಲವನ್ನು ತೊಳೆದು, ಇಸ್ತ್ರಿ ಹಾಕಿ ಇಲ್ಲಿಗೆ ತರಲಾಗುತ್ತದೆ. ಮಂಗಳೂರಿನಲ್ಲಿ ಕೂಲಿ ಕೆಲಸ, ಕಟ್ಟಡ ಕೆಲಸ ಮಾಡುವ ಬಿಹಾರ, ಉತ್ತರಪ್ರದೇಶ ಸಹಿತ ನಮ್ಮ ರಾಜ್ಯದ ಬೇರೆ ಜಿಲ್ಲೆಯ ಕಾರ್ಮಿಕರೇ ಇವರ ಗ್ರಾಹಕರು. ಹೀಗಾಗಿ ಮಂಗಳೂರು ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಹಕರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಲ್ಲ.

ರವಿವಾರವಿಡೀ ಭರ್ಜರಿ ಸಂತೆ
ಅಂದಹಾಗೆ, ರವಿವಾರ ಮುಂಜಾನೆಯಿಂದ ಸಂಜೆಯವರೆಗೆ ಇಲ್ಲಿನ ಸಂಡೇ ಬಜಾರ್‌ ಸಖತ್‌ ಬ್ಯುಸಿ. ಪ್ರತೀ ದಿನ ಪಾರ್ಕಿಂಗ್‌ ಸ್ಥಳವಾಗಿ ಮೀಸಲಾಗಿರುವ ನಗರದ ಕ್ಲಾಕ್‌ ಟವರ್‌ನಿಂದ ಲೇಡಿಗೋಷನ್‌ ಎದುರಿನ ಇಂದಿರಾ ಕ್ಯಾಂಟೀನ್‌ ಮುಂಭಾಗದವರೆಗಿನ ಸ್ಥಳ ರವಿವಾರವಿಡೀ ಭರ್ಜರಿ ಸಂತೆಯಾಗಿ ನಗರದಲ್ಲಿ ಫೇಮಸ್‌. ಸುಮಾರು 50ರಷ್ಟು ವ್ಯಾಪಾರಿಗಳು ಇಲ್ಲಿ ವ್ಯವಹಾರ ನಡೆಸುತ್ತಾರೆ. ಕಾರ್ಮಿಕರಾಗಿ ದುಡಿಯುತ್ತಿರುವ ಅದೆಷ್ಟೋ ಜನರು ಇಲ್ಲಿನ ಬಟ್ಟೆ ಬರೆಗಳನ್ನು ಖರೀದಿಸುತ್ತಾರೆ. ಹಾಗಾಗಿ ರವಿವಾರ ಇದು ಜನನಿಬಿಡ ಪ್ರದೇಶ.

ಮುಂಜಾನೆಯಿಂದ ಸಂಜೆಯವರೆಗೆ
ಮುಂಜಾನೆ 5, 6ರ ಸುಮಾರಿಗೆ ಇಲ್ಲಿ ವ್ಯಾಪಾರ ಶುರುವಾಗುತ್ತದೆ. ರವಿವಾರವೂ ಕೆಲಸ ಮಾಡುವವರಿದ್ದರೆ ಅವರು ಮುಂಜಾನೆಯೇ ಸಂತೆಗೆ ಬಂದು ಖರೀದಿ ಮಾಡಿ, ಮತ್ತೆ ಕೆಲಸಕ್ಕೆ ಹೋಗುತ್ತಾರೆ. ಉಳಿದಂತೆ ವ್ಯಾಪಾರ 10 ಗಂಟೆಯ ಬಳಿಕ ಬಿರುಸುಗೊಳ್ಳುತ್ತದೆ. ಸದ್ಯ ಬಿಸಿಲು ಜೋರಿರುವುದರಿಂದ ಮಧ್ಯಾಹ್ನ ವ್ಯಾಪಾರ ಕೊಂಚ ಕಡಿಮೆ. ಸಂಜೆ ವ್ಯಾಪಾರ ಮತ್ತೆ ಭರ್ಜರಿಯಾಗಿ ನಡೆಯುತ್ತದೆ.

Advertisement

“ನಾನು ಮತ್ತು ನನ್ನ ಮಗ ಮೈಸೂರಿನಿಂದ ಬಂದವರು. ನಿತ್ಯ ಅಲ್ಲೇ ಬಟ್ಟೆ ವ್ಯಾಪಾರ ಮಾಡುತ್ತೇವೆ. ಆದರೆ ರವಿವಾರ ಮಾತ್ರ ಮಂಗಳೂರಿಗೆ ಬರುತ್ತೇವೆ. ಹಳೆಯ ಬಟ್ಟೆಗಳು ಇಲ್ಲಿ ಕಾರ್ಮಿಕರಿಗೆ ಸೇಲ್‌ ಆಗುತ್ತವೆ. 20 ವರ್ಷಗಳಿಂದ ಈ ವ್ಯಾಪಾರ ಮಾಡುತ್ತಿದ್ದೇವೆ. ಹೀಗಾಗಿ ಮಂಗಳೂರು ನಮಗೆ ಚಿರಪರಿಚಿತ. ಉಳಿದಂತೆ ಧರ್ಮಸ್ಥಳ, ಶಿರಸಿ ಜಾತ್ರೆಯಲ್ಲಿಯೂ ವ್ಯಾಪಾರ ಮಾಡುತ್ತೇವೆ. ನಿತ್ಯ 2-3 ಸಾವಿರ ರೂ. ವ್ಯಾಪಾರ ಆಗುತ್ತದೆ. ಕೆಲವೊಮ್ಮೆ ಕಡಿಮೆ. ಬಾಡಿಗೆ ಮಾಡಿ ವಾಹನದಲ್ಲಿ ಬರುತ್ತೇವೆ’ ಎನ್ನುತ್ತಾರೆ ವ್ಯಾಪಾರಿ ಪಾಷಾ ಅವರು.

ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳ ವ್ಯಾಪಾರ!
ಕೇರಳ, ತಮಿಳುನಾಡು ಭಾಗದಿಂದ ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳನ್ನು ಮೈಸೂರು, ಮಂಡ್ಯ, ಹಾಸನ ಸಹಿತ ಬೇರೆ ಬೇರೆ ವ್ಯಾಪಾರಿಗಳಿಗೆ ನೀಡುತ್ತಾರೆ. ಇದರ ನಿರ್ವಹಣೆಗೆ ಮಧ್ಯವರ್ತಿಗಳಿದ್ದಾರೆ. ಹಾಗೆ ಪಡೆದುಕೊಂಡ ಬಟ್ಟೆಗಳನ್ನು ಒಟ್ಟು ಸೇರಿಸಿ ರವಿವಾರ ಮಂಗಳೂರಲ್ಲಿ ಸೇಲ್‌ಗೆ ಇಡುತ್ತಾರೆ. ಕನಿಷ್ಠ ದರವಿರುತ್ತದೆ. 30-40 ರೂ.ಗೆ ಬಟ್ಟೆ, 50-100 ರೂ.ಗೆ ಪ್ಯಾಂಟ್‌ ಕೂಡ ಸಿಗುತ್ತದೆ. ಕಟ್ಟಡ ಕಾರ್ಮಿಕರಿಗೆ ಇಂತಹ ಬಟ್ಟೆಗಳು ಅಗತ್ಯವಿರುವುದರಿಂದ ವ್ಯಾಪಾರ ಜೋರಾಗಿರುತ್ತದೆ. ಇನ್ನೊಂದು ವಿಶೇಷವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಿಗೆ “ಹಳೆಯ ಬಟ್ಟೆ ಇದ್ದರೆ ಕೊಡಿ’ ಎಂದು ಕೇಳಿಕೊಂಡು ಬರುವವರಿದ್ದಾರೆ. ಹಾಗೆ ಪಡೆದುಕೊಂಡ ಬಟ್ಟೆಗಳನ್ನು ಕೂಡ ಇಲ್ಲಿ ವ್ಯಾಪಾರಕ್ಕೆ ಇಡಲಾಗುತ್ತದೆ. ಹಾಸ್ಟೆಲ್‌, ಗಾರ್ಮೆಂಟ್ಸ್‌, ಫ್ಲಾ$Âಟ್‌ಗಳಿಂದ ಡ್ಯಾಮೇಜ್‌ ಆದ ಬಟ್ಟೆಗಳನ್ನು ಪಡೆದವರು ಇಲ್ಲಿ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಬಟ್ಟೆ ವ್ಯಾಪಾರಿಯೋರ್ವರು.

ಸಂತೆಯ ಮುನ್ನಾ ದಿನವೇ ಆಗಮನ!
ರವಿವಾರ ಸಂತೆಯಾದರೆ ಕೆಲವು ವ್ಯಾಪಾರಿಗಳು ಶನಿವಾರ ರಾತ್ರಿಯೇ ಬಂದು ರಸ್ತೆ ಬದಿಯಲ್ಲೇ ಮಲಗುತ್ತಾರೆ. ರೈಲು ಅಥವಾ ಬಸ್ಸಿನಲ್ಲಿ ಬಂದವರು ಶನಿವಾರ ಸಂಜೆಯಿಂದಲೇ ಕೆಲವರು ವ್ಯಾಪಾರ ಶುರು ಮಾಡುತ್ತಾರೆ. ದೂರದೂರಿನ ವ್ಯಾಪಾರಿಗಳಿಗೆ ದೂರದೂರಿನ ಗ್ರಾಹಕರಿಂದ ಮಾತ್ರ ವ್ಯವಹಾರ ಇರುವುದರಿಂದ ಅವರಿಗೆ ಮಾತ್ರ ಇದರ ನಿಜ ಕಥೆ ಗೊತ್ತಿದೆ. ಇನ್ನೂ ಕೆಲವರು ಶನಿವಾರ ರಾತ್ರಿ ಅವರ ಊರಿಂದ ಟೆಂಪೋದಲ್ಲಿ ಹೊರಟು ರವಿವಾರ ಮುಂಜಾನೆ ತಲುಪುತ್ತಾರೆ. ಒಂದು ಟೆಂಪೋದಲ್ಲಿ 5-6 ವ್ಯಾಪಾರಿಗಳು ಜತೆಯಾಗಿ ಬರುತ್ತಾರೆ. ಹೀಗಾಗಿ ಬಾಡಿಗೆ ನಿಭಾಯಿಸಲು ಸುಲಭವಾಗುತ್ತದೆ ಎಂಬುದು ಇವರ ಚಿಂತನೆ.

 -ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next