ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಪತಿ ಶಶಿ ತರೂರ್ ಅವರನ್ನು ದೆಹಲಿ ಸೆಷನ್ಸ್ ಕೋರ್ಟ್ ಎಲ್ಲಾ ಆರೋಪದಿಂದ ಮುಕ್ತಗೊಳಿಸಿ ನಿರ್ದೋಷಿ ಎಂದು ಬುಧವಾರ (ಆಗಸ್ಟ್ 18) ತೀರ್ಪು ನೀಡಿದೆ.
ಇದನ್ನೂ ಓದಿ:ಇದೇ ಮೊದಲ ಬಾರಿ 56 ಸಾವಿರ ಅಂಕ ದಾಟಿದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್; ಸಾರ್ವಕಾಲಿಕ ದಾಖಲೆ
2014ರ ಜನವರಿಯಲ್ಲಿ ಸುನಂದಾ ಪುಷ್ಕರ್ ಅವರ ಶವ ಹೋಟೆಲ್ ಕೋಣೆಯಲ್ಲಿ ಪತ್ತೆಯಾಗಿತ್ತು. ಶಶಿ ತರೂರ್ ಮತ್ತು ಸುನಂದಾ ಜತೆಯಾಗಿ ಹೋಟೆಲ್ ರೂಂನಲ್ಲಿ ಉಳಿದುಕೊಂಡಿದ್ದರು. ಶಶಿ ತರೂರ್ ಅವರ ಅಧಿಕೃತ ಬಂಗಲೆಯ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ದಂಪತಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಆದರೆ ಸುನಂದಾ ಪುಷ್ಕರ್ ಅವರನ್ನು ಡ್ರಗ್ಸ್ ಚುಚ್ಚಿ ಸಾಯಿಸಲಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿತ್ತು. ಇದರೊಂದಿಗೆ ಪತ್ನಿ ಸುನಂದಾ ಸಾವಿನ ಹಿಂದೆ ಪತಿ ತರೂರ್ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇದೊಂದು ಕೊಲೆಯೇ ಎಂಬ ಬಗ್ಗೆ ಆರಂಭಿಕ ತನಿಖೆ ನಡೆಸಿದ್ದರು. ಕೊನೆಗೆ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಆರೋಪ ಪಟ್ಟಿ ಸಲ್ಲಿಸಿದ್ದರು.
ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಶಶಿ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 498 ಎ(ವೈವಾಹಿಕ ಹಿಂಸೆ) ಮತ್ತು 306 (ಆತ್ಮಹತ್ಯೆಗೆ ಪ್ರೇರಣೆ)ರ ಕಾಯ್ದೆಯಡಿ ಆರೋಪಿ ಎಂದು ಉಲ್ಲೇಖಿಸಿದ್ದರು. ಪ್ರಕರಣದಲ್ಲಿ ತರೂರ್ ಗೆ 2018ರ ಜುಲೈ 5ರಂದು ಜಾಮೀನು ನೀಡಲಾಗಿತ್ತು. ಶಶಿ ತರೂರ್ ವಿರುದ್ಧದ ಆರೋಪದ ಕುರಿತು ವಿಚಾರಣೆ ನಡೆಸಿದ್ದ ದೆಹಲಿ ಸೆಷನ್ಸ್ ಕೋರ್ಟ್ 2021ರ ಏಪ್ರಿಲ್ 12ರಂದು ತೀರ್ಪಿನ ಆದೇಶವನ್ನು ಕಾಯ್ದಿರಿಸಿತ್ತು.