Advertisement

Cattle;ಬೇಸಗೆ ಧಗೆ; ಜಾನುವಾರುಗಳಿಗೆ ಸುಸ್ತು-ಸಂಕಟ

03:54 PM Apr 14, 2023 | Team Udayavani |

ಉಡುಪಿ: ಚರ್ಮಗಂಟು ರೋಗ ಇಳಿಮುಖ ವಾಗಿದ್ದು ಹೈನುಗಾರರು ಚೇತರಿಸಿ ಕೊಳ್ಳುವಷ್ಟರಲ್ಲಿ ಬಿಸಿಲ ಬೇಗೆ ಇನ್ನಷ್ಟು ಸಮಸ್ಯೆ ತಂದೊಡ್ಡುತ್ತಿದೆ.

Advertisement

ಜಿಲ್ಲೆಯಲ್ಲಿ ಬೇಸಗೆ ಧಗೆ ಪ್ರತಿಕೂಲ ಹವಾಮಾನ ಪರಿಣಾಮ ಜಾನುವಾರುಗಳು ಸಂಕಟಪಡು ವಂತಾಗಿದೆ. ಬಹುತೇಕ ಹಸುಗಳು ಬೇಸಗೆ ಬಿಸಿಲಿನಿಂದ ಬಸವಳಿಯುತ್ತಿದ್ದು, ಅನಾರೋಗ್ಯದಿಂದ ವರ್ತಿಸುತ್ತಿದೆ. ಕೆಲವು ಹಸುಗಳು ಕುಳಿತಲ್ಲಿಯೇ ಇದ್ದು ಮೇಲೆ ಎದ್ದೇಳಲು, ಓಡಾಡಲು ಆಗುತ್ತಿಲ್ಲ, ಒಟ್ಟಾರೆ ಬಹುತೇಕ ಜಾನುವಾರುಗಳು ಬಿಸಿಲ ಪರಿಣಾಮ ಸುಸ್ತು ಸಂಕಟದಿಂದ ನರಳಾಡುತ್ತಿವೆ. ಬಿಸಿಲಿನ ತಾಪದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ಸಂಗೋಪನೆ ಇಲಾಖೆ ಹೈನು ಗಾರರಿಗೆ ಮಾರ್ಗಸೂಚಿ ಹೊರಡಿಸಿದೆ.

ಮುಂಜಾನೆ, ಸಾಯಂಕಾಲ ಮಾತ್ರ ಮೇಯಿಸಲು ಬಿಡಬೇಕು. ಮಧ್ಯಾಹ್ನ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಬೇಕು. ರಾಸುಗಳಿಗೆ ಪೌಷ್ಟಿಕ ಆಹಾರ, ಹಸುರು ಹುಲ್ಲು ನೀಡಬೇಕು. ದೇಹದ ಉಷ್ಣತೆಯನ್ನು ಕಾಪಾಡಲು ಗೋಣಿಚೀಲವನ್ನು ನೀರಲ್ಲಿ ತೋಯಿಸಿ ಜಾನುವಾರುಗಳ ಮೈಮೇಲೆ ಹಾಕಬೇಕು ಎಂಬುದು ಪಶುವೈದ್ಯರ ಸಲಹೆಯಾಗಿದೆ.

ನಿರ್ಜಲೀಕರಣ ಸಮಸ್ಯೆ
ಬೇಸಗೆ ಅಧಿಕ ತಾಪಮಾನ ದಿಂದ ಮನುಷ್ಯರಂತೆ ಜಾನು ವಾರುಗಳಲ್ಲಿಯೂ ನಿರ್ಜಲೀಕರಣ ಸಮಸ್ಯೆ ಸಂಭವಿಸುತ್ತದೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ತೀವ್ರ ಸುಸ್ತು ಅನುಭವಿಸುತ್ತವೆ. ದಿನಕ್ಕೆ 2ರಿಂದ 3 ಸಲ ಶುದ್ಧವಾದ ನೀರನ್ನು ಕುಡಿಸಬೇಕು. ಬಿಸಿಲಿನಲ್ಲಿ ಜಾಸ್ತಿ ಓಡಾಡಲು ಬಿಡಬಾರದು. ದಿನಕ್ಕೆ ಒಂದರಿಂದ ಎರಡು ಸಲ ಮೈ ತೊಳೆಯಬೇಕು ಎಂದು ಪಶುವೈದ್ಯರು ಸಲಹೆ ನೀಡಿದ್ದಾರೆ.

ಚರ್ಮಗಂಟು ರೋಗ ಶೂನ್ಯಕ್ಕೆ ಇಳಿಕೆ
ಪ್ರಸ್ತುತ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಶೂನ್ಯಕ್ಕೆ ತಲುಪಿದ್ದು ಹೈನುಗಾರರು ನಿಟ್ಟುಸಿರು ಬಿಡುವಂತಾಗಿದೆ. ವೈದ್ಯರು, ಸಿಬಂದಿ ಕೊರತೆ ನಡುವೆಯೂ ಜಿಲ್ಲೆಯಲ್ಲಿ 2.27 ಲಕ್ಷ ಜಾನುವಾರುಗಳಿಗೆ ಬೃಹತ್‌ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಶೇ.89 ಗುರಿ ಸಾಧಿಸಲಾಗಿದೆ. ಪರಿಣಾಮ ಚರ್ಮಗಂಟು ರೋಗದ ಆತಂಕ ದೂರವಾಗಿದೆ. ರೋಗದಿಂದ 91 ಹಸು, ಕರುಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 6,375 ಜಾನುವಾರುಗಳಿಗೆ ರೋಗ ಬಾಧಿಸಿದ್ದು, 6,218 ಜಾನುವಾರುಗಳು ಗುಣಮುಖ ಹೊಂದಿದೆ. ಜಿಲ್ಲೆಯಲ್ಲಿ 20,018 ಲಸಿಕೆ ದಾಸ್ತಾನು ಇರಿಸಲಾಗಿದೆ.

Advertisement

ಆತಂಕ ಪಡುವ ಅಗತ್ಯವಿಲ್ಲ
ಬಿಸಿಲ ತಾಪಕ್ಕೆ ಕೆಲವು ಜಾನುವಾರುಗಳಲ್ಲಿ ಸುಸ್ತು, ಬಸವಳಿಯುವ ಲಕ್ಷಣ ಕಂಡು ಬರುತ್ತದೆ. ಜಿಲ್ಲೆಯಲ್ಲಿ ಗಂಭೀರ ಸಮಸ್ಯೆ ಎದುರಾಗಿಲ್ಲ. ನೆರಳು ವಾತಾವರಣದಲ್ಲಿ ಜಾನುವಾರುಗಳನ್ನು ಬಿಡಬೇಕು, ಶುದ್ಧನೀರು ಕುಡಿಸಬೇಕು. ಅವುಗಳ ಆಹಾರ ಕ್ರಮದ ಬಗ್ಗೆಯೂ ನಿಗಾ ವಹಿಸಬೇಕು. ಬಿಸಿಲಿನ ತಾಪದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿಗೆ ಸಮಸ್ಯೆ ಇಲ್ಲ. ಚರ್ಮಗಂಟು ರೋಗ ಶೂನ್ಯಕ್ಕೆ ಇಳಿದಿದೆ.
– ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕ, ಪಶು ಸಂಗೋಪನೆ ಇಲಾಖೆ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next