Advertisement

ಕಲಿಕೆಯ ಅಗತ್ಯವುಳ್ಳ ಮಕ್ಕಳಿಗೆ ಬೇಸಗೆ ರಜೆಯಲ್ಲಿ ತರಬೇತಿ ಕಾರ್ಯಕ್ರಮ

02:32 PM May 08, 2022 | Team Udayavani |

ಓದು ಮತ್ತು ಬರಹಗಳು ಮೂಲ ಶೈಕ್ಷಣಿಕ ಕೌಶಲಗಳಾಗಿದ್ದು, ಭವಿಷ್ಯದ ಕಲಿಕೆಗೆ ತಳಪಾಯವಾಗಿವೆ. ಸಾಮಾನ್ಯವಾಗಿ ಮಕ್ಕಳು ಔದುವಿಕೆಯ ಕೌಶಲ ಬೆಳವಣಿಗೆಯಲ್ಲಿ ಪ್ರಮುಖವಾದ ಎರಡು ಹಂತಗಳನ್ನು ದಾಟಿ ಬೆಳೆಯುತ್ತಾರೆ. ಆರಂಭಿಕವಾಗಿ ಮೂರನೇ ತರಗತಿಗಿಂತ ಮುನ್ನ ಅವರು ಹೇಗೆ ಓದುವುದು ಎನ್ನುವುದನ್ನು ಕಲಿಯುತ್ತಾರೆ ಹಾಗೂ ಮುಂದೆ ಅವರು ಕಲಿಯುವುದಕ್ಕಾಗಿ ಓದುವುದನ್ನು ಮುಂದುವರಿಸುತ್ತಾರೆ. ಸ್ವತಂತ್ರ ಓದುಗರಾದ ಬಳಿಕ ಮಕ್ಕಳು ಓದುವಿಕೆಯ ಮೂಲಕ ಜ್ಞಾನದ ಸಾಗರವನ್ನು ತಮ್ಮದನ್ನಾಗಿ ಮಾಡಿಕೊಳ್ಳುತ್ತಾರೆ. ಈ ಕೌಶಲಗಳನ್ನು ಬೆಳೆಸಿಕೊಳ್ಳದ ಮಕ್ಕಳು ಮುಂದಕ್ಕೆ ಶಾಲೆ ಮತ್ತು ಮುಂದಿನ ಕಲಿಕೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದು ಅಸಾಧ್ಯ. ಈ ವಿಚಾರವಾಗಿ ನಡೆಸಿದ ಅಧ್ಯಯನಗಳಿಂದ ಕಂಡುಬಂದಿರುವುದು ಏನೆಂದರೆ, ಪ್ರಾಥಮಿಕ ಶಾಲಾಹಂತದಲ್ಲಿ ಕಡಿಮೆ ಓದುವಿಕೆ ಮತ್ತು ಬರಹದ ಕೌಶಲಗಳನ್ನು ಹೊಂದಿರುವುದು ಭವಿಷ್ಯದಲ್ಲಿ ಅವರ ಸಾಮಾಜಿಕ, ಭಾವನಾತ್ಮಕ, ಶೈಕ್ಷಣಿಕ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಒಂದು ತರಗತಿಯಲ್ಲಿ ಶೇ. 10ರಿಂದ ಶೇ. 15ರಷ್ಟು ಮಂದಿ ಮಕ್ಕಳು ಅಲ್ಪ ಪ್ರಮಾಣದಿಂದ ತೀವ್ರ ಪ್ರಮಾಣದ ವರೆಗಿನ ಓದುವಿಕೆ ಮತ್ತು ಬರವಣಿಗೆ ಕಷ್ಟವನ್ನು ಹೊಂದಿರುತ್ತಾರೆ. ಕೆಲವು ಮಕ್ಕಳಲ್ಲಿ ಈ ಕಲಿಕೆಯ ವೈಕಲ್ಯವು ಅಡಗಿರಬಹುದಾಗಿರುತ್ತದೆ ಅಥವಾ ಅದೃಶ್ಯ ಸ್ಥಿತಿಯಲ್ಲಿರುತ್ತದೆ; ಇದನ್ನು ಕಲಿಕೆಯ ವೈಕಲ್ಯ ಅಥವಾ ‘ಡಿಸ್‌ ಲೆಕ್ಸಿಯಾ’ ಎಂದು ಕರೆಯಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಮಕ್ಕಳು ಕಲಿಕೆ, ಬರವಣಿಗೆ, ಓದುವಿಕೆ ಇತ್ಯಾದಿಗಳಲ್ಲಿ ನಿರ್ದಿಷ್ಟ ವಯಸ್ಸಿನಲ್ಲಿ ಸಾಧಿಸಬೇಕಾದ ಬೆಳವಣಿಗೆಗೂ ವಾಸ್ತವದಲ್ಲಿ ಸಾಧಿಸುತ್ತಿರುವ ಬೆಳವಣಿಗೆಗೂ ಅಂತರ ಕಂಡುಬರುತ್ತದೆ. ಇಂತಹ ಮಕ್ಕಳು ಸಹಜವಾಗಿರುವಂತೆ ಕಂಡುಬರಬಹುದು, ಪ್ರತಿಭಾವಂತರು ಮತ್ತು ಬುದ್ಧಿವಂತರಂತೆ ಕಂಡುಬರಬಹುದು; ಆದರೆ ಓದಲು ಮತ್ತು ಬರೆಯಲು ಅವರು ವಿಫ‌ಲರಾಗುತ್ತಾರೆ. ಇಂತಹ ಮಕ್ಕಳು ಈ ಕೆಳಕಂಡ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದ್ದು ಕೂಡ ಕಲಿಯುವುದಕ್ಕೆ ಹೆಣಗಾಡುತ್ತಾರೆ:

 • ಸಮರ್ಪಕ ಬುದ್ಧಿಮತ್ತೆ
 • ಸಮರ್ಪಕ ಕೇಳುವಿಕೆ ಮತ್ತು ದೃಷ್ಟಿ ಸಾಮರ್ಥ್ಯ
 • ಶಾಲೆಯಲ್ಲಿ ಉತ್ತಮ ಪ್ರಮಾಣ ಮತ್ತು ಗುಣಮಟ್ಟದ ಬೋಧನೆ ಮನೆಯಲ್ಲಿ ಕಲಿಕೆಗೆ ಉತ್ತಮ ಬೆಂಬಲ
 • ಶಾಲೆಗೆ ಸರಿಯಾದ ಹಾಜರಾತಿ
Advertisement

ಈ ಸಮಸ್ಯೆಯ ಲಕ್ಷಣಗಳು ಶಾಲಾಕಲಿಕೆಯುದ್ದಕ್ಕೂ ಮಗುವಿನಿಂದ ಮಗುವಿಗೆ ಬೇರೆ ಬೇರೆಯಾಗಿರಬಹುದು. ಆದರೆ ಸರ್ವೇಸಾಮಾನ್ಯವಾಗಿ ಬಹಳಷ್ಟು ಮಕ್ಕಳು ಓದಲು, ಬರೆಯಲು, ಕಾಗುಣಿತ ಅಥವಾ ಸ್ಪೆಲಿಂಗ್‌ ನೆನಪಿಡುವ ತೊಂದರೆ, ಗಣಿತಕ್ಕೆ ಸಂಬಂಧಿಸಿದ ತೊಂದರೆ ಹೊಂದಿರುತ್ತಾರೆ ಅಥವಾ ಒಂದು ನಿರ್ದಿಷ್ಟ ಸಮಯದಲ್ಲಿ ಇತರ ಕಲಿಕೆ ಸಂಬಂಧಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ತೊಂದರೆಯನ್ನು ಹೊಂದಿರುತ್ತಾರೆ. ಇದರರ್ಥ ಅವರಿಗೆ ಕಲಿಕೆಗೆ ಸಂಬಂಧಿಸಿದ ವೈಕಲ್ಯ ಇದೆ ಎಂದಲ್ಲ. ಕಲಿಕೆಯ ವೈಕಲ್ಯ ಹೊಂದಿರುವ ಮಗು ಸಾಮಾನ್ಯವಾಗಿ ಇದಕ್ಕೆ ಸಂಬಂಧಿಸಿದ ಹಲವು ಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ಅವುಗಳು ವಾಸಿಯಾಗುವುದಿಲ್ಲ ಅಥವಾ ಇಂತಹ ಮಕ್ಕಳ ಕಲಿಕೆಯ ಶಕ್ತಿ ಸಾಮರ್ಥ್ಯ ಉತ್ತಮಗೊಳ್ಳುವುದಿಲ್ಲ. ಇಂತಹ ಮಕ್ಕಳು ಓದುವಿಕೆ, ಬರವಣಿಗೆ ಮಾತ್ರವಲ್ಲದೆ ಗಣಿತಕ್ಕೆ ಸಂಬಂಧಿಸಿದ ನಿರ್ದಿಷ್ಟ ತೊಂದರೆಗಳನ್ನು ಹೊಂದಿರಬಹುದು.

ಸಾಮಾನ್ಯವಾಗಿ ಕಾಣಬರುವ ಮತ್ತು ಸುಲಭವಾಗಿ ಗುರುತಿಸಬಹುದಾದ ಕೆಲವು ಎಚ್ಚರಿಕೆಯ ಸಂಕೇತಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

ಕಿಂಡರ್‌ಗಾರ್ಟನ್‌ ವಯಸ್ಸಿಗೆ ಮುನ್ನ

 • ಜನ್ಮ ಸಂಬಂಧಿ ಗಮನಾರ್ಹ ತೊಂದರೆಯುಳ್ಳ ವೈದ್ಯಕೀಯ ಇತಿಹಾಸ (ಪ್ರಸವಪೂರ್ವ ಮತ್ತು ಪ್ರಸವೋತ್ತರ)
 • ತನ್ನದೇ ವಯಸ್ಸಿನ ಮಕ್ಕಳಿಗಿಂತ ವಿಳಂಬವಾಗಿ ಮಾತನಾಡಲು ಕಲಿಯುವುದು
 • ಮಾತಿನ ಸ್ಪಷ್ಟತೆಗೆ ಸಂಬಂಧಿಸಿ ಉಚ್ಚರಣೆಯ ಸಮಸ್ಯೆಗಳು
 • ಶಬ್ದಭಂಡಾರದ ವಿಳಂಬ ಬೆಳವಣಿಗೆ

ಕಿಂಡರ್‌ಗಾರ್ಟನ್‌ ಅವಧಿಯಲ್ಲಿ

 • ಕತೆಗಳು ಮತ್ತು ಘಟನೆಗಳನ್ನು ವಾಕ್ಯಗಳಲ್ಲಿ ನಿರೂಪಿಸಲು ಕಷ್ಟವಾಗುವುದು
 • ವಾಕ್ಯ ರಚನೆ ಕಳಪೆಯಾಗಿರುವುದು
 • ಆಕಾರಗಳು, ವರ್ಣಮಾಲೆ ಮತ್ತು ಅಂಕೆಸಂಖ್ಯೆಗಳ ಕಲಿಕೆಗೆ ತೊಂದರೆ
 • ಅತಿಯಾಗಿ ಚಟುವಟಿಕೆಯಿಂದಿರುವುದು ಮತ್ತು ಸುಲಭವಾಗಿ ಏಕಾಗ್ರತೆ ನಷ್ಟವಾಗುವುದು
 • ಸಮಾನ ವಯಸ್ಸಿನ ಗೆಳೆಯ-ಗೆಳತಿಯರ ಜತೆಗೆ ಸಂವಹನ- ಸಂಭಾಷಣೆಗೆ ಕಷ್ಟವಾಗುವುದು
 • ಸೂಚನೆಗಳನ್ನು ಅಥವಾ ದೈನಿಕ ಕೆಲಸಕಾರ್ಯಗಳನ್ನು ಅನುಸರಿಸಲು ಕಷ್ಟವಾಗುವುದು
 • ಅಕ್ಷರಗಳಿಗೆ ಸಂಯೋಜಿತ ಶಬ್ದಗಳನ್ನು ಕಲಿಯಲು ಕಷ್ಟವಾಗುವುದು
 • ಮಾತನಾಡುವ ಪದಗಳನ್ನು ಗುರುತಿಸಲು, ಅವುಗಳ ಆರಂಭ, ಅಂತ್ಯ ಮತ್ತು ಮಧ್ಯದ ಶಬ್ದಗಳನ್ನು ಗುರುತಿಸಲು ಕಷ್ಟವಾಗುವುದು
 • ಬಣ್ಣ ಹಾಕುವುದು, ಅಂಟಿಸುವುದು, ಕತ್ತರಿಯ ಮೂಲಕ ಕತ್ತರಿಸುವುದು ಇತ್ಯಾದಿಗಳಲ್ಲಿ ಹತಾಶೆ
Advertisement

ಮೊದಲನೆಯ ತರಗತಿ ಮತ್ತು ನಾಲ್ಕನೆಯ ತರಗತಿಗಳ ನಡುವೆ

 • ಕಾಗುಣಿತಗಳನ್ನು ಜೋಡಿಸಿ ಪದಗಳನ್ನು ಓದಲು ಗಮನಾರ್ಹವಾಗಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದು
 • ಒಂದು ಅಕ್ಷರದ ಬದಲಾಗಿ ಹಾಗೆಯೇ ಕಾಣುವ ಇನ್ನೊಂದು ಅಕ್ಷರದ ಆಯ್ಕೆ (ಬಿ ಬದಲಾಗಿ ಡಿ ಅಥವಾ ತದ್ವಿರುದ್ಧ) ಮತ್ತು ಅಂಥ ಅಕ್ಷರಗಳನ್ನು ವಿರುದ್ಧ ರೂಪದಲ್ಲಿ ಗ್ರಹಿಸುವುದು (ಯು ಬದಲು ಎನ್‌)
 • ಓದುವ ಚಟುವಟಿಕೆಯಲ್ಲಿ ಆಸಕ್ತಿ ತೋರಿಸದಿರುವುದು ಅಥವಾ ಕುಂದಿದ ಆಸಕ್ತಿ
 • ಒಂದೇ ರೀತಿಯಾಗಿ ಕಾಣುವ ಅಕ್ಷರಗಳು ಅಥವಾ ಪದಗಳ ವ್ಯತ್ಯಾಸವನ್ನು ಗುರುತಿಸುವಲ್ಲಿ ವಿಫ‌ಲವಾಗುವುದು (ಪಿ ಮತ್ತು ಕ್ಯು, ದೇರ್‌ ಮತ್ತು ಥ್ರೀ)
 • ಕಡಿಮೆ ವೇಗದಲ್ಲಿ ಓದುವುದು, ಸುಲಭವಾಗಿ ಓದಲು ಸಾಧ್ಯವಾಗದೆ ಇರುವುದು
 • ಸಾಕಷ್ಟು ಹೆಚ್ಚು ಅಕ್ಷರ, ಕಾಗುಣಿತ ದೋಷಗಳು
 • ಕೈಬರಹ ಕಳಪೆಯಾಗಿರುವುದು
 • ಗಣಿತದ ಸಂಕೇತಗಳಲ್ಲಿ ಗೊಂದಲವಾಗುವುದು (+, -, ಭಾಗಿಸುವಂತಹ ಸಂಕೇತಗಳ ಕೆಲಸದ ಬಗ್ಗೆ ಗೊಂದಲ)
 • ಸಮಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆ (ಹಿಂದೆ, ಅನಂತರ, ಸಮಯವನ್ನು ಹೇಳುವುದು) ಮತ್ತು ಹಣಕಾಸಿನ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟ
 • ಓದಿದ್ದನ್ನು ಅರ್ಥ ಮಾಡಿಕೊಳ್ಳಲಾಗದೆ ಹೋಗುವುದು ಅಥವಾ ಕಡಿಮೆ ಅರ್ಥವಾಗುವುದು

ಮಗುವಿಗೆ ಕಲಿಕೆಯ ವೈಕಲ್ಯ ಇದೆ ಎನ್ನುವ ನಿರ್ಣಯಕ್ಕೆ ಬರಲು ಇಷ್ಟೇ ಲಕ್ಷಣಗಳು ಸಾಲವು. ವೃತ್ತಿಪರ ವೈದ್ಯರು ಮಾತ್ರ ಕಲಿಕೆಯ ವೈಕಲ್ಯವನ್ನು ಪತ್ತೆ ಮಾಡಬಲ್ಲರು. ಕಲಿಕೆ ಮತ್ತು ಯೋಚನೆಯ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳು ಸರಿಯಾದ ಬೆಂಬಲ, ನೆರವಿನೊಂದಿಗೆ ಮುನ್ನಡೆ ಸಾಧಿಸಬಲ್ಲರು. ಮಗುವಿಗೆ ವಿಭಿನ್ನ ಕಲಿಕೆಯ ಸಾಮರ್ಥ್ಯವಿದ್ದರೆ ಅದನ್ನು ಬೇಗನೆ ಪತ್ತೆಹಚ್ಚುವುದು ಉತ್ತಮ. ಇದರಿರಂದ ಆದಷ್ಟು ಬೇಗನೆ ಮಗುವಿಗೆ ಕಲಿಕೆಗೆ ಸಂಬಂಧಿಸದ ನೆರವನ್ನು ಒದಗಿಸಬಹುದಾಗಿರುತ್ತದೆ. ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗದ ತಜ್ಞರು ಬೇಸಗೆ ಕಲಿಕಾ ಶಿಬಿರವೊಂದನ್ನು ಆಯೋಜಿಸುವ ಮೂಲಕ ಇಂತಹ ಮಕ್ಕಳಿಗೆ ನೆರವಾಗಲು ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಓದು ಮತ್ತು ಬರವಣಿಗೆಯಲ್ಲಿ ಕಷ್ಟ, ತೊಂದರೆ ಹೊಂದಿರುವ ಮಕ್ಕಳಿಗೆ ವೃತ್ತಿಪರ ತರಬೇತಿಯ ನೆರವನ್ನು ಒದಗಿಸುವುದೇ ಈ ಶಿಬಿರ ಆಯೋಜನೆಯ ಉದ್ದೇಶವಾಗಿದೆ.

ಈ ಬೇಸಗೆ ಶಿಬಿರದ ಪ್ರಮುಖ ಧ್ಯೇಯಗಳು

 • ಮಕ್ಕಳ ಮೂಲ ಅಕ್ಷರ ಅರಿವು ಕೌಶಲಗಳ ವಿಚಾರದಲ್ಲಿ ವೃತ್ತಿಪರ ತಜ್ಞರು ಯೋಜಿಸಿರುವ ತರಬೇತಿಯ ಮೂಲಕ ಮಕ್ಕಳ ಬೇಸಗೆ ರಜೆಯನ್ನು ಅತ್ಯುತ್ತಮವಾಗಿ ಸದುಪಯೋಗ ಪಡಿಸಿಕೊಳ್ಳುವುದು.
 • ಕಲಿಕೆಯ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಮತ್ತು ವಿಶ್ಲೇಷಿಸುವುದು.
 • ಮುಖಾಮುಖಿಯಾದ, ಆಫ್ಲೈನ್‌ ತರಬೇತಿ.
 • ಮಕ್ಕಳ ವಿಶೇಷ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಈ ತರಬೇತಿ ಯೋಜನೆ ಮಗು ನಿರ್ದಿಷ್ಟವಾಗಿರುತ್ತದೆ.
 • ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಇರುತ್ತದೆ. ಮೇಲೆ ಹೇಳಲಾದ ಎಚ್ಚರಿಕೆಯ ಲಕ್ಷಣಗಳ ಜತೆಗೆ ಮಗುವಿನಲ್ಲಿ ಕೆಳಕಂಡ ಯಾವುದೇ ಅಪಾಯದ ಚಿಹ್ನೆಗಳು ಇದ್ದರೆ ನಿಮ್ಮ ಮಗುವನ್ನು ಈ ತರಬೇತಿ ಶಿಬಿರಕ್ಕೆ ದಾಖಲುಗೊಳಿಸುವ ಬಗ್ಗೆ ನೀವು ಯೋಚಿಸಬಹುದು:
 • ಸಮಾನ ವಯಸ್ಸಿನ ಇತರ ಮಕ್ಕಳಿಗೆ ಹೋಲಿಸಿದರೆ ಮಾತನಾಡುವುದು ನಿಧಾನವಾಗಿರುವುದು
 • ಕುಟುಂಬ ಸದಸ್ಯರು ಅಥವಾ ಸಹೋದರ-ಸಹೋದರಿಯರು ಇಂಥದ್ದೇ ಸಮಸ್ಯೆ ಹೊಂದಿರುವುದು (ಮಾತಿಗೆ ಸಂಬಂಧಿಸಿದ ಸಮಸ್ಯೆಗಳ ಸಹಿತ)
 • ಘಟನೆಯನ್ನು ಅಥವಾ ಕತೆಯನ್ನು ನಿರೂಪಿಸಲು ಕಷ್ಟವಾಗುವುದು
 • ಓದುವಿಕೆ, ಬರವಣಿಗೆ, ಸ್ಪೆಲ್ಲಿಂಗ್‌ ಮತ್ತು ಗಣಿತ ಕೌಶಲಗಳಿಗೆ ಸಂಬಂಧಿಸಿ ಮಗುವಿನ ಶಿಕ್ಷಕಿಯಿಂದ ಪದೇಪದೇ ದೂರು
 • ಓದು ಮತ್ತು ಬರವಣಿಗೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪೂರೈಸಲು ಅಸಹಜವಾಗಿ ಹೆಚ್ಚು ಸಮಯ ತೆಗೆದುಕೊಳ್ಳುವುದು
 • ಓದುವಿಕೆ, ಬರವಣಿಗೆ ಮತ್ತು ಗಣಿತ ಕೌಶಲಗಳಿಗೆ ಸಂಬಂಧಿಸಿದ ತೀವ್ರ ತೊಂದರೆಗಳಿಂದಾಗಿ ಶೈಕ್ಷಣಿಕ ಪ್ರಗತಿ ಕಳಪೆಯಾಗಿರುವುದು
 • ಪ್ರಮಾಣೀಕೃತ ವೃತ್ತಿಪರ ವೈದ್ಯರು ಡಿಸ್‌ಲೆಕ್ಸಿಯಾ/ ಕಲಿಕೆಯ ವೈಕಲ್ಯವನ್ನು ಪತ್ತೆ ಮಾಡಿರುವುದು
 • ದೀರ್ಘ‌ ಪದಗಳನ್ನು ಉಚ್ಚರಿಸಲು ಕಷ್ಟವಾಗುವುದು ಮತ್ತು ಮಾತು ಅಸ್ಪಷ್ಟವಾಗಿರುವುದು
 • ನಿಧಾನವಾಗಿ ಓದುವುದು ಮತ್ತು ಆ ವಯಸ್ಸಿಗೆ ಸಹಜವಾದ ಮಟ್ಟದಿಂದ ತುಂಬಾ ಕೆಳಮಟ್ಟದಲ್ಲಿರುವುದು
 • ಸ್ಪೆಲ್ಲಿಂಗ್‌ ಸಮಸ್ಯೆ ತೀವ್ರವಾಗಿರುವುದು
 • ಕಳಪೆ ಹಸ್ತಾಕ್ಷರ
 • ಬರೆದ/ ಮುದ್ರಿತ ಸಾಮಗ್ರಿಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು

ನಿಮಗೆ ನಿಮ್ಮ ಮಗು ಮೇಲೆ ಹೇಳಲಾದ ಕೆಲವಾರು ಸಮಸ್ಯೆಗಳನ್ನು ಸಂಯೋಜಿತವಾಗಿ ಹೊಂದಿದೆ ಎಂದು ಕಂಡುಬಂದಿದ್ದರೆ ನಮ್ಮ ವಿಭಾಗವನ್ನು ಭೇಟಿ ಮಾಡಿ ಮಗುವಿನ ಪರೀಕ್ಷೆ, ವಿಶ್ಲೇಷಣೆ ಮಾಡಿಸಿಕೊಳ್ಳಿ ಮತ್ತು ತರಬೇತಿ ಶಿಬಿರಕ್ಕೆ ದಾಖಲಿಸಿ. ಯಾಕೆಂದರೆ ಸಮರ್ಪಕವಾದ ತರಬೇತಿ ಪಡೆದರೆ ಬಹುತೇಕ ಮಕ್ಕಳು ಶಾಲಾ ಕಲಿಕೆಯಲ್ಲಿ ಮುನ್ನಡೆ ಸಾಧಿಸಬಲ್ಲರು.

ಡಾ| ಸೋಮಶೇಖರ ಎಚ್.ಎಸ್. ಅಸೋಸಿಯೇಟ್‌ ಪ್ರೊಫೆಸರ್‌, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ ವೈದ್ಯಕೀಯ ಕಾಲೇಜು, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next