ವಾಡಿ: ಅಬ್ಟಾ ಇದೆಂಥ ಉರಿಬಿಸಿಲು. ಬೆವರು ಬಸಿದು ದೇಹ ನೀರಾಗುವಷ್ಟು ತಾಪದ ಪ್ರತಾಪ. ನೆರಳಿನ ಆಸೆರೆಯಲ್ಲೂ ಕುದಿಯುವ ಉಸಿರು. ಬೆಂಕಿ ಕಾರುವ ಮುಗಿಲ ಕಾವಿಗೆ ನೆಲವೆಲ್ಲ ನಿಗಿನಿಗಿ ಕೆಂಡ. ನೀರಿಗಿಳಿದು ನಿಂತರೂ ನಿಲ್ಲದ ಬೆವರ ಧಾರೆ. ಗಣಿನಾಡ ಜನರ ನೆಮ್ಮದಿ ಕಸಿದ ರಣಬಿಸಿಲು ಉಷ್ಣದ ಉಗ ಹರಿಸಿದೆ.
ಬೇಸಿಗೆಯ ಬಿಸಿಲ ಬೆಂಕಿಗೆ ಬೇಸತ್ತಿರುವ ಚಿತ್ತಾಪುರ ಹಾಗೂ ನಾಲವಾರ ವಲಯದ ಜನರು ಜಲ ಕ್ರೀಡೆಗಳತ್ತ ಮುಖ ಮಾಡಿದ್ದಾರೆ. ಸಣ್ಣವರು ದೊಡ್ಡವರು, ಹೆಣ್ಣು-ಗಂಡೆನ್ನದೆ ಬೆವರಿಳಿಸುತ್ತಿರುವ ಖಡಕ್ ಬಿಸಿಲು ಅಕ್ಷರಶಃ ಬಸವಳಿಯುವಂತೆ ಮಾಡಿದೆ.
ಸಮೀಪದ ಕಾಗಿಣಾ ಮತ್ತು ಭೀಮಾ ನದಿಗಳತ್ತ ಯುವಕರು ಧಾವಿಸುತ್ತಿದ್ದಾರೆ. ದೇಹ ತಣ್ಣಗಾಗಿಸಿಕೊಳ್ಳಲು ನೀರಾಟವನ್ನೇ ನೆಚ್ಚಿಕೊಂಡಿದ್ದಾರೆ. ನಾಲವಾರ ಸಮೀಪದ ಕುಂಬಾರಹಳ್ಳಿ ಬಳಿ ತೆರೆಯಲಾದ ಖಾಸಗಿ ಈಜುಕೊಳ ಯುವಕರ ಆಕರ್ಷಣೀಯ ತಾಣವಾಗಿದೆ. ಭಯಾನಕ ಬಿಸಿಲ ಹೊಡೆತಕ್ಕೆ ಚರ್ಮದ ಉರಿತ ಹೆಚ್ಚಾಗುತ್ತಿರುವುದನ್ನು ಸಹಿಸಿಕೊಳ್ಳದ ಯುವಕರು ಈಜುಕೊಳವನ್ನು ಆಶ್ರಯಿಸಿದ್ದಾರೆ.
ಜಲಕ್ರೀಡೆಯಲ್ಲಿ ತೊಡಗಿಕೊಂಡು ಸಂತಸ ಪಡುತ್ತಿದ್ದಾರೆ. ಮಕ್ಕಳ ಪೈಪೋಟಿಯಿಂದ ಕೂಡಿರುವ ನೀರಾಟವು ಏರಿಕೆಯಾದ ತಾಪಮಾನದ ಕಾವು ಎಷ್ಟೆಂಬುದರ ಅರಿವು ಮೂಡಿಸುತ್ತದೆ. ಈಜುಕೊಳ ನಗರದಿಂದ 30 ಕಿ.ಮೀ ದೂರವಿದ್ದರೂ ಜಲಕ್ರೀಡೆ ಮೋಜು ನೆಚ್ಚಿಕೊಂಡಿದ್ದಾರೆ. ಬೆಳಗ್ಗೆಯಿಂದ ಸಂಜೆ ವರೆಗೂ ಯುವಜನರು ಈಜಾಟದಲ್ಲಿ ತೊಡಗಿರುತ್ತಾರೆ. ಒಟ್ಟಾರೆ ಈ ಭಯಂಕರ ರಣಬಿಸಿಲಿಗೆ ಜನರ ಉಸಿರು ಬಿಸಿಯಾಗಿದೆ.