Advertisement

ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ

12:58 PM Mar 26, 2017 | |

ದಾವಣಗೆರೆ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆ ರಜೆ ವೇಳೆಯಲ್ಲೂ ಸಹ ಶಾಲಾ ಮಕ್ಕಳಿಗೆ ಬಿಸಿಯೂಟ ಜಾರಿ ಇರಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಗಮನ ನೀಡಿ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌ ಸೂಚಿಸಿದ್ದಾರೆ. 

Advertisement

ಶನಿವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅನುಪಾಲನಾ ವರದಿ ಕುರಿತ ಚರ್ಚೆ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾ, ಈ ಬಾರಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳಲ್ಲಿ ಬೇಸಿಗೆಯಲ್ಲಿ ಬಿಸಿಯೂಟ ಒದಗಿಸಲು ನಿರ್ಧರಿಸಿದೆ.

ಅದರ ಅನ್ವಯ ಏಪ್ರಿಲ್‌ 11ರಿಂದ ಮೇ 27ರ ವರೆಗೆ ಶಾಲೆಗಳಲ್ಲಿ ಬಿಸಿಯೂಟ ಇರಲಿದೆ ಎಂದರು. ಆಗ, ಅಧ್ಯಕ್ಷೆ ಉಮಾ, ಕಳೆದ ಬಾರಿ ಬಿಸಿಯೂಟ ಜಾರಿಯಲ್ಲಿತ್ತು. ಆದರೆ, ಅನೇಕ ದೂರುಗಳು ಬಂದಿದ್ದವು. ಮಕ್ಕಳು ಬರದಿದ್ದರೂ ಸುಳ್ಳು ದಾಖಲಾತಿ ತೋರಿಸಿ, ಆಹಾರ ಪದಾರ್ಥ ದುರುಪಯೋಗ ಮಾಡಿಕೊಳ್ಳಲಾಗುತ್ತದೆ.

ಇದನ್ನು ತಡೆಯಲು ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಸುಳ್ಳು ಲೆಕ್ಕ ಕೊಟ್ಟು ಸರ್ಕಾರದ ಹಣ ದುರ್ಬಳಕೆಯಾಗುವುದನ್ನು ತಡೆಯಬೇಕಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮಾ, ಈ ಬಾರಿ ಮೊದಲು ವಿದ್ಯಾರ್ಥಿಗಳ ಸಂಖ್ಯೆ ಎಸ್‌ ಎಂಎಸ್‌ ಮಾಡಿ, ನಂತರ ಅಡುಗೆ ತಯಾರಿಗೆ ಸೂಚಿಸಲಾಗಿದೆ.

ಪ್ರತಿದಿನ ಮಕ್ಕಳ ಹಾಜರಾತಿಯ ದಾಖಲೆ ಪಡೆದುಕೊಳ್ಳಲಾಗುತ್ತದೆ. ಹೀಗಾಗಿ ದುರುಪಯೋಗ ಸಾಧ್ಯವಿಲ್ಲ ಎಂದರು. ಇನ್ನು ಮಾ.30ರಿಂದ ಏ.13ರ ವರೆಗೆ ಎಸ್‌  ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. 25,232 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಭ್ಯರ್ಥಿಗಳು ಈ ಬಾರಿ ಸರಿಯಾಗಿ 9.15 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.

Advertisement

ತಡವಾಗಿ ಬಂದರೆ ಪ್ರವೇಶ ನಿರಾಕರಿಸಲಾಗುವುದು. ಮೊದಲು 30 ನಿಮಿಷದವರೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಈ ಬಾರಿ ಇದನ್ನು ತೆಗೆದು ಹಾಕಲಾಗಿದೆ ಎಂದು ಅವರು ಹೇಳಿದರು. ಕುಡಿಯುವ ನೀರಿನ ಕುರಿತು ಚರ್ಚಿಸುವ ವೇಳೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್‌, ಸದ್ಯ ಜಿಲ್ಲೆಯ ಸಮಸ್ಯೆ ಇರುವ ಕಡೆ ಸಮರ್ಪಕ ನೀರು ಪೂರೈಕೆಗೆ ಕ್ರಮ ವಹಿಸಲಾಗಿದೆ.

ಹಾಲಿ 26 ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. 42 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ ಬಳಸಿ, ನೀರು ಒದಗಿಸಲಾಗುತ್ತಿದೆ. ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ 40 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ಸಮಸ್ಯೆ ಎದುರಾದ ತಕ್ಷಣ ನೀರು ಒದಗಿಸಲು ಇಲಾಖೆ ಕ್ರಮ ವಹಿಸುತ್ತಿದೆ ಎಂದು ಮಾಹಿತಿ ನೀಡಿದರು. 

ಈ ವೇಳೆ ಮಧ್ಯ ಪ್ರವೇಶಿಸಿದ ಉಪಾಧ್ಯಕ್ಷ ಡಿ. ಸಿದ್ಧಪ್ಪ, ಟ್ಯಾಂಕರ್‌ ನೀರು ಪೂರೈಕೆ ಮಾಡುವವರಿಗೆ ಇದುವರೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಮೂರು ತಿಂಗಳಾದರೂ ಹಣ ನೀಡಿಲ್ಲವೆಂದು ಕೆಲವರು ನಮ್ಮ ಬಳಿ ದೂರಿದ್ದಾರೆ ಎಂದಾಗ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಕೆ. ಮಂಜುನಾಥ್‌, ಶಿಕ್ಷಣ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ವಾಗೀಶ್‌ ಸಹ ಹಣ ಬಿಡುಗಡೆ ಕುರಿತು ದೂರಿವೆ ಎಂದು ಧ್ವನಿಗೂಡಿಸಿದರು.

ಆಗ ಮಧ್ಯ ಪ್ರವೇಶ ಮಾಡಿದ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಹಣ ಬಿಡುಗಡೆ ತಡ ಆಗ್ತಿದೆ ಎಂದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next