ಕುಷ್ಟಗಿ: ಅಡುಗೆ ಎಣ್ಣೆ ಬೆಲೆ ಏರಿಕೆಯ ದಿನಮಾನದಲ್ಲಿ ರೈತರು ತಾವು ಬೆಳೆದ ಶೇಂಗಾ ಬೆಳೆಗೆ ಉತ್ತಮ ಧಾರಣಿ ಸಿಗುವ ನಿರೀಕ್ಷೆ ಹುಸಿಯಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಂಗಾ ಧಾರಣಿ 200 ರೂ.ದಿಂದ 500 ರೂ. ಕಡಿಮೆಯಾಗಿರುವುದು ಶೇಂಗಾ ಬೆಳೆದ ರೈತರಲ್ಲಿ ನಿರಾಸೆ ಮೂಡಿಸಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪರಿಣಾಮ ಹಾಗೂ ದೇಶಿ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯಿಂದ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವುದು ಸಹಜವಾಗಿದೆ. ಇಂತಹ ಸಂದರ್ಭದಲ್ಲಿ ಬೇಸಿಗೆ ಶೇಂಗಾ ಬೆಳೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ತಿಂಗಳಾಂತರದಲ್ಲಿ ಹುಸಿಯಾಗಿದೆ.
ಆರಂಭದಲ್ಲಿ ಶೇಂಗಾ ಪ್ರತಿ ಕ್ವಿಂಟಲ್‌ಗೆ 7 ಸಾವಿರದಿಂದ 6,800 ರೂ. ಇದ್ದ ಬೆಲೆ ವಾರದಿಂದೀಚೆಗೆ 6,500 ರೂ. ಇದೆ. ಶೇಂಗಾ ಗುಣಮಟ್ಟ, ಕಾಳಿನ ಗಾತ್ರ, ಎಣ್ಣೆಯ ಅಂಶ ಇತ್ಯಾದಿ ಪರಿಶೀಲನೆಗೆ ಒಳಗಾಗಿ ಯೋಗ್ಯ ಬೆಲೆ ಎಂದರೆ ಪ್ರತಿ ಕ್ವಿಂಟಲ್‌ಗೆ 6,800 ರೂ. ದಿಂದ 6,900 ರೂ. ಆಗಿದೆ. ಈ ಭಾಗದ ಮಸಾರಿ ಜಮೀನಿನಲ್ಲಿ ಪಂಪ್ ಸೆಟ್ ನೀರಾವರಿ ಆಧಾರಿತವಾಗಿ ಬೆಳೆಯುವ ಬೇಸಿಗೆ ಶೇಂಗಾಕ್ಕೆ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಹಾಗೂ ಗಂಗಾವತಿ ಎಣ್ಣೆ ಮಿಲ್ ಗಳಲ್ಲು ಹೆಚ್ಚು ಬೇಡಿಕೆ ಇದೆ.
ಆದರೂ ಈ ವಾರಂತ್ಯದಲ್ಲಿ ಏಕಾಏಕಿ ರೂ. 200ರೂ. ದಿಂದ 500 ರೂ. ಕಡಿಮೆಯಾಗಿರುವುದನ್ನು ಗಮನಿಸಿ ಕೆಲವು ರೈತರು ತಮ್ಮಲ್ಲಿರುವ ಶೇಂಗಾ ಉತ್ಪನ್ನವನ್ನು ಮುಂದೆ ಉತ್ತಮ ಬೆಲೆ ಸಿಗುವ ಭರವಸೆಯಿಂದ ಮಾರಾಟಕ್ಕೆ ಮುಂದಾಗಿಲ್ಲ. ಈ ವರ್ಷ ಸ್ವಲ್ಪ ಪ್ರಮಾಣದಲ್ಲಿ ಇಳುವರಿ ಕಡಿಮೆ ಇದ್ದರೂ ರೈತರು ನಿರೀಕ್ಷಿಸಿದಷ್ಟು ಬೆಲೆ ಇಲ್ಲ. ಕುಷ್ಟಗಿ ಎಪಿಎಂಸಿಗೆ ಕಳೆದ ತಿಂಗಳಿನಿಂದ ಬೇಸಿಗೆ ಶೇಂಗಾ ಆವಕವಾಗುತ್ತಿದ್ದು, ಮೇ ತಿಂಗಳ ಕೊನೆಯವರೆಗೂ ಈ ಉತ್ಪನ್ನ ಮಾರುಕಟ್ಟೆಗೆ ಆವಕವಾಗುವ ನಿರೀಕ್ಷೆ ಇದೆ ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ಟಿ. ನೀಲಪ್ಪ ಶೆಟ್ಟಿ ಹೇಳಿದರು.
ಈ ಭಾಗದಲ್ಲಿ ಮೊದಲಿನಿಂದಲೂ ಬೆಳೆಯುವ ಶೇಂಗಾ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇತ್ತೀಚಿನ ಸುಧಾರಿತ ಖದ್ರಿ ಲೇಪಾಕ್ಷಿ ಶೇಂಗಾ ಉತ್ಪನ್ನಕ್ಕೆ ಬೇಡಿಕೆ ಇಲ್ಲ. ಖದ್ರಿ ಶೇಂಗಾ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್ 5 ಸಾವಿರ ರೂ. ಇದ್ದು, ಸಾಮಾನ್ಯವಾಗಿ ಬೆಳೆಯುವ ಶೇಂಗಾ ಉತ್ಪನ್ನ ಪ್ರತಿ ಕ್ವಿಂಟಲ್‌ಗೆ ಗುಣಮಟ್ಟದ ಆಧಾರದಲ್ಲಿ 7 ಸಾವಿರ ರೂ. ಇದೆ. –
ಶ್ರೀಕಾಂತ ಪಟ್ಟಣಶೆಟ್ಟಿ, ವರ್ತಕರು ಎಪಿಎಂಸಿ ಯಾರ್ಡ್ ಕುಷ್ಟಗಿ
ಅಂತರ್ಜಲ ಕಡಿಮೆಯಾಗಿರುವ ಸಂಕಷ್ಟದ ಸ್ಥಿತಿಯಲ್ಲಿ ಸ್ಪಿಂಕ್ಲರ್ ಬಳಸಿ ಶೇಂಗಾ ಬೆಳೆ ಬೆಳೆದಿದ್ದು, ಈ ಬಾರಿ ಕ್ವಿಂಟಲ್‌ಗೆ 8 ಸಾವಿರ ರೂ. ನಿರೀಕ್ಷಿಸಿದ್ದೇವು. ಆದರೆ ಶೇಂಗಾ ಧಾರಣಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೆಲೆ ಹೆಚ್ಚಿದ್ದು, ಶೇಂಗಾ ಉತ್ಪನ್ನ ದರ ಯಾಕೆ ಹೆಚ್ಚಾಗಿಲ್ಲ. –
ನಿಂಗಪ್ಪ ಜೀಗೇರಿ, ಕಡೇಕೊಪ್ಪ ರೈತ
-ಮಂಜುನಾಥ ಮಹಾಲಿಂಗಪುರ