Advertisement

ಬೇಸಿಗೆ ಬಿಸಿಗೆ ಪ್ಯಾನಲಿಂಗ್‌ 

03:45 AM Apr 24, 2017 | Harsha Rao |

ಮನೆ ಕಟ್ಟುವಾಗ ತೆಳ್ಳಗಿನ ಗೋಡೆಗಳು ಹೆಚ್ಚು ಜಾಗವನ್ನು ನೀಡುತ್ತವೆ ಎಂಬಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಹೊರಗಿನ ಗೋಡೆಗಳನ್ನೂ ಆರು ಇಂಚು ಇಲ್ಲವೇ ಮತ್ತೂ ಕಡಿಮೆ ದಪ್ಪದಲ್ಲಿ ಕಟ್ಟಲಾಗುತ್ತದೆ. ಇತರೆ ಕಾಲದಲ್ಲಿ ಹೆಚ್ಚಿನ ತೊಂದರೆ ಏನೂ ಇರದಿದ್ದರೂ ಬಿರು ಬೇಸಿಗೆಯಲ್ಲಿ ಮನೆಯೊಳಗೆ ಶಾಖ ತೂರಿಬರುವ ಸಾಧ್ಯತೆ ಮಾತ್ರ ತಪ್ಪಿದ್ದಲ್ಲ. ಅಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ಮನೆಯೊಳಗಿನ ಗೋಡೆಗಳಿಗೆ ಸೂಕ್ತ ರೀತಿಯಲ್ಲಿ ಪ್ಯಾನಲಿಂಗ್‌ ಮಾಡಿ, ಗೋಡೆಗಳನ್ನು ಶಾಖನಿರೋಧಕ ಮಾಡುವುದರ ಜೊತೆಗೆ ನೋಡಲು ಚಿತ್ತಾಕರ್ಷವಾಗಿ ಇರುವಂತೆಯೂ ಮಾಡಬಹುದು. ಪ್ಯಾನಲಿಂಗ್‌ ಮಾಡಲು ದುಬಾರಿ ವಸ್ತುಗಳು ಬೇಕು ಎಂದೇನೂ ಇಲ್ಲ, ಪಾರ್ಸಲ್‌ ಮರದಿಂದ ಹಿಡಿದು ಹಾರ್ಡ್‌ ಬೋರ್ಡ್‌ವರೆಗೆ, ಹಾಗೆಯೇ ನಿಮಗಿಷ್ಟ ಇದ್ದಲ್ಲಿ, ಜೇಬು ಒಪ್ಪಿಗೆ ಕೊಟ್ಟಲ್ಲಿ, ಟೀಕ್‌ ಮರದಲ್ಲೂ ಪ್ಯಾನಲಿಂಗ್‌ ಮಾಡಬಹುದು.

Advertisement

 ಪ್ಯಾನಲಿಂಗ್‌ ಲೆಕ್ಕಾಚಾರ
 ಗೋಡೆಯ ಒಳ ಪದರ ಹೊರಗಿನ ಪದರದ ಜೊತೆ ನೇರವಾಗಿ ಸಂಪರ್ಕದಲ್ಲಿರುವ ಕಾರಣ, ಗೋಡೆಯ ಮೇಲೆ ನೇರವಾಗಿ ಬೀಳುವ ಸೂರ್ಯಕಿರಣಗಳಿಂದಾಗಿ ಬಿಸಿಯೇರಿದಾಗ, ತೆಳು ಗೋಡೆಗಳು ಮೂಲಕ ಶಾಖ ಒಳಗೆ ಹರಿದು, ಮನೆ ಬಿಸಿಯೇರುವಂತೆ ಮಾಡುತ್ತದೆ. ಗೋಡೆಗಳಿಗೆ ಒಳ ಪದರಕ್ಕೂ ಒಳಾಂಗಣಕ್ಕೂ ಮಧ್ಯೆ ಸಣ್ಣದೊಂದು ಗಾಳಿಯ ಪದರ ನೀಡಿ, ಮರ ಇಲ್ಲ ಇತರೆ ಶಾಖನಿರೋಧಕ ಪದರವನ್ನು ನೀಡಿದರೆ, ಹೊರಗಿನ ಬಿಸಿ ಒಳಗೆ ನುಸುಳುವುದಿಲ್ಲ.

ಮನೆ ಬಿರುಬೇಸಿಗೆಯಲ್ಲೂ ತಂಪಾಗಿರುತ್ತದೆ. ಪ್ಯಾನೆಲಿಂಗ್‌ ಹೆಚ್ಚು ದಪ್ಪ ಇರುವ ಅಗತ್ಯವಿಲ್ಲ. ಅತಿ ಕಡಿಮೆ ಎಂದರೆ, ಕಾಲು ಇಂಚು ಇದ್ದರೂ ನಡೆಯುತ್ತದೆ.  ಸಾಮಾನ್ಯವಾಗಿ ಹಾರ್ಡ್‌ ಬೋರ್ಡ್‌ ಇರುವುದು ಕಾಲು ಇಂಚು ದಪ್ಪ, ಆದರೂ ಕೂಡ ಸೂಕ್ತ ರೀತಿಯಲ್ಲಿ ಗೋಡೆಗೆ ಸಿಕ್ಕಿಸಿದರೆ, ಸಾಕಷ್ಟು ಶಾಖನಿರೋಧಕ ಗುಣವನ್ನು ನೀಡಬಲ್ಲದು.

ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಬೋರ್ಡ್‌ಗಳು ಲಭ್ಯ. ಇವುಗಳನ್ನು ನೇರವಾಗಿ ಗೋಡೆಗೆ ಸಿಕ್ಕಿಸದೆ, ಎರಡು ಇಲ್ಲವೇ ಮೂರು ಅಡಿ ಅಗಲದಲ್ಲಿ ಆರ್ಧ ಇಂಚು ದಪ್ಪದ ಬೀಡಿಂಗ್‌ಗಳನ್ನು ಸಿಕ್ಕಿಸಿ, ಅದರ ಮೇಲೆ ತೆಳು ಹಲಗೆಗಳನ್ನು ಸಿಕ್ಕಿಸಬೇಕು. ಆಗ ನಮಗೆ ಬೀಡಿಂಗ್‌ ದಪ್ಪದ ಸಂದಿ ಸಿಗುವುದರಿಂದ, ಪ್ಯಾನೆಲಿಂಗ್‌ ಶಾಖನಿರೋಧಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ನಾವು ಬಳಸುವ ಬೋರ್ಡ್‌ಗಳ ದಪ್ಪ ಹೆಚ್ಚಿದ್ದಷ್ಟೂ ನಾವು ಅವಕ್ಕೆ ಕೊಡುವ ಆಧಾರದ ದೂರವನ್ನು ಕಡಿಮೆ ಮಾಡಬಹುದು. ಅರ್ಧ ಇಂಚು ದಪ್ಪದ ಪ್ಲೆ„ವುಡ್‌ ಬೋರ್ಡ್‌ ಬಳಸಿದರೆ, ಮೂರರಿಂದ ನಾಲ್ಕು ಅಡಿಗೆ ಒಂದು ಬೀಡಿಂಗ್‌ ಆಧಾರ ಕೊಟ್ಟರೂ ಸಾಕು. ದಪ್ಪ ಕಡಿಮೆ ಆದಷ್ಟೂ ಹತ್ತಿರ ಹತ್ತಿರ ಸಪೋರ್ಟ್‌ ನೀಡಬೇಕಾಗುತ್ತದೆ.

ಮರದ ಪ್ಯಾನಲಿಂಗ್‌
ಕಡಿಮೆ ಬೆಲೆಗೆ ಸಿಗುವ ಪಾರ್ಸೆಲ್‌ ಮರ ಅಂದರೆ ಫೈನ್‌ ಜಾತಿಗೆ ಸೇರಿದ ಡೀಲ್‌ ವುಡ್‌ ಎನ್ನಲಾಗುವ ಮರದಿಂದಲೂ ಆಕರ್ಷಕ ಪ್ಯಾನಲಿಂಗ್‌ಗಳನ್ನು ಮಾಡಬಹುದು. ಈ ಮಾದರಿಯ ಮರಗಳು ಸಾಮಾನ್ಯವಾಗಿ ಅರ್ಧ ಇಂಚಿನಿಂದ ಹಿಡಿದು ಒಂದು ಒಂದೂವರೆ ಇಂಚಿನವರೆಗೆ ಸಿಗುವುದರಿಂದ, ಇವುಗಳನ್ನು ಗೋಡೆಗಳ ಮೇಲೆ ನೇರವಾಗಿ ಸಿಗಿಸಬಹುದು. ಮರದ ಹಿಂದೆ ಗಾಳಿ ಪದರ ಇರಲೇಬೇಕು ಎಂದೇನೂ ಇಲ್ಲ. ಏಕೆಂದರೆ, ಮರದಲ್ಲಿ ನೈಸರ್ಗಿಕವಾಗೇ ಗಾಳಿಯ ಸಣ್ಣ ಸಣ್ಣ ಕೋಶಗಳು ಇದ್ದು, ಇವು ಶಾಖನಿರೋಧಕಗಳಾಗಿ ಬಲು ಪರಿಣಾಮಕಾರಿ¿ಾಗಿ ಕಾರ್ಯ ನಿರ್ವಹಿಸಬಲ್ಲವು. ಈ ಮಾದರಿಯ ಪ್ಯಾನಲಿಂಗ್‌ಗಳನ್ನು ವಿವಿಧ ವಿನ್ಯಾಸದಲ್ಲೂ ಮಾಡಬಹುದು. ಅಡ್ಡಡ್ಡಕ್ಕೆ ಇಲ್ಲ ಉದ್ದಕ್ಕೆ ಮಾಡುವುದರ ಜೊತೆಗೆ ಒಂದು ಕೋನದಲ್ಲಿಯೂ ಗೋಡೆಗಳ ಮೇಲೆ ಅಳವಡಿಸಬಹುದು. 

Advertisement

ಪ್ಯಾನಲಿಂಗ್‌ ನಲ್ಲಿ ಜಾಯಿಂಟ್‌ ಗಳ ನಿರ್ವಹಣೆ
 ಗಾಳಿಯ ಪದರ ಬೇಡುವ ತೆಳು ಶೀಟುಗಳನ್ನು ಬೀಡಿಂಗ್‌ಗಳ ಮೇಲೆ ಸಿಕ್ಕಿಸುವಾಗ, ಅಕ್ಕ ಪಕ್ಕ ಬರುವ ಹಲಗೆಗಳ ಸಂದಿ ಸರಿಯಾಗಿದೆಯೇ? ಎಂದು ಗಮನಿಸುವುದು ಉತ್ತಮ. ಕೆಲವೊಮ್ಮೆ ಸಂದಿಗಳು ಅಗಲವಾಗಿ ಉಳಿದುಕೊಂಡರೆ, ಹುಳ ಹುಪ್ಪಟೆ ಒಳಗೆ ಸೇರಿಕೊಂಡು, ಮುಂದೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಈ ಸಮಸ್ಸೆಯನ್ನು ನಿವಾರಿಸಲು, ಜಾಯಿಂಟ್‌ಗಳ ಮೇಲೆ ಮತ್ತೂಂದು ಬೀಡಿಂಗ್‌ ಬಡಿದು, ಇದೇ ಒಂದು ವಿನ್ಯಾಸದಂತೆ ಮಾಡುವುದೂ ಇದೆ. ಹೀಗೆ ಮಾಡುವುದರ ಮುಖ್ಯ ಲಾಭ- ಜಾಯಿಂಟ್‌ ಮುಚ್ಚುವುದರ ಜೊತೆಗೆ ನೋಡಲೂ ಕೂಡ ಸುಂದರವಾಗಿ ಕಾಣಲಿ ಎನ್ನುವುದು.

ಮರದ ಹಲಗೆ ಬಳಸಿ ಪ್ಯಾನಲಿಂಗ್‌ ಮಾಡುವ ಹಾಗಿದ್ದರೆ, ಗ್ರೂ ಕಟ್ಟಿಂಗ್‌ ಮಶೀನ್‌ಗಳ ಸಹಾಯದಿಂದ “ಗಾಡಿ’ಹಾಗೂ “ಕೀಲಿ’ ಗಳನ್ನು ಕತ್ತರಿಸಿಕೊಂಡು ಬಂದು, ನಿಮ್ಮ ಮನೆಯಲ್ಲಿ ಸೂಕ್ತ ವಿನ್ಯಾಸದಲ್ಲಿ ಜೊಡಿಸಿಕೊಂಡು ಕಾರ್ಯವನ್ನು ಸುಲ¸‌ದಲ್ಲಿ ಮುಗಿಸಬಹುದು. 

ಇತರೆ ಮಾದರಿಯ ಪ್ಯಾನೆಲಿಂಗ್‌
ಮಾಮೂಲಿ ಗೋಡೆಗೆ ಸಿಗಿಸಲೆಂದೇ ಅನೇಕ ಮಾದರಿಯ ರೆಡಿಮೇಡ್‌ ಪ್ಯಾನೆಲಿಂಗ್‌  ವಸ್ತುಗಳು ಲಭ್ಯ. ಸಾಮಾನ್ಯವಾಗಿ ಪಾಲ್ಸ್‌ ಸೀಲಿಂಗ್‌ – ಕೃತಕ ಸೂರಿಗೆ ಬಳಸುವ ವಸ್ತುಗಳನ್ನು  ಪ್ಯಾನೆಲಿಂಗ್‌ ಗೂ ಕೂಡ ಬಳಸಬಹುದು. ಆದರೆ ಕೆಲವೊಂದು ವಸ್ತುಗಳು ತೀರ ಮೆದುವಾಗಿದ್ದು ಅವನ್ನು ಕೈಗೆ ತಾಗದ ಎತ್ತರ ಅಂದರೆ ಸಾಮಾನ್ಯವಾಗಿ ಐದರಿಂದ ಆರು ಅಡಿ ಎತ್ತರದ ಮೇಲೆ ಅಳವಡಿಸಿದರೆ ಸೂಕ್ತ. ಇಲ್ಲದಿದ್ದರೆ ಬೇಗ ಮುರಿಯುವುದು, ವಿರೂಪಗೊಳ್ಳುವುದು ಇತ್ಯಾದಿ ತೊಂದರೆಗೆ ಸಿಲುಕಬಹುದು. ಕೆಲವೊಂದ ಅಕಾಸ್ಟಿಕ್‌ ಬೋರ್ಡ್‌ಗಳೂ ಕೂಡ ಉತ್ತಮ ಶಾಖನಿರೋಧಕ ಗುಣಗಳನ್ನು ಪಡೆದಿರುತ್ತವೆ. ಇಂಥ ಬೋರ್ಡ್‌ಗಳನ್ನು ಬಳಸಿದರೆ ಆಗುವ ಮತ್ತೂಂದು ಲಾಭ ಏನೆಂದರೆ- ನಮ್ಮ ಮನೆಯ ಕೆಲವಾದರೂ ಕೋಣೆಗಳು ಉತ್ತಮ ಶಬ್ಧಗ್ರಹಿಕೆಗೂ ಸೂಕ್ತವಾಗಿರುವ ರೀತಿಯಲ್ಲಿ ರೂಪಗೊಳ್ಳುತ್ತದೆ. 

ಇದರಿಂದಲೂ ಶಾಖನಿರೊಧಕ ಪದರ
 ಪ್ಲೆ„ವುಡ್‌ ಅಂಗಡಿಗಳಲ್ಲಿ ಸಿಗುವ ಸಾಪ್ಟ್ ಬೋರ್ಡ್‌ಗಳೂ ಕೂಡ ಒಳ್ಳೆಯ ಶಾಖ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ಆದರೆ ಇವು ನೋಡಲು ಅಷ್ಟೇನೂ ಸುಂದರವಾಗಿ ಕಾಣುವುದಿಲ್ಲವಾದಕಾರಣ, ಇವುಗಳ ಮೇಲ್‌ ಮೈಗೆ ಸುಂದರ ವಿನ್ಯಾಸದ ಪಾಬ್ರಿಕ್‌ – ಬಟ್ಟೆಗಳನ್ನು ಹೊದಿಸುವುದು ಅನಿವಾರ್ಯ. ನಿಮ್ಮ ಮಕ್ಕಳ ಕೋಣೆಗೆ ಶಾಖ ನಿರೋಧಕ ಗೋಡೆ ಪಡೆಯಲು ಸಾಪ್ಟ್ ಬೋರ್ಡ್‌ ಬಳಸುತ್ತಿದ್ದರೆ, ಇಲ್ಲಿ ಸೂಕ್ತ ಬಣ್ಣದ ವೆಲ್ವೆಟ್‌ ಮಾದರಿಯ ಬಟ್ಟೆಯನ್ನು ಹೊದಿಸಿದರೆ, ಇದನ್ನು ಪಿನ್‌ ಅಪ್‌ ಅಂದರೆ ಚಿತ್ರಗಳನ್ನು ಪಿನ್‌ ಬಳಸಿ ಸಿಗಿಸಬಹುದಾದ ಹಲಗೆಯಂತೆಯೂ ಬಳಸಬಹುದು.

ಕೆಲವೊಮ್ಮೆ ಯಾವುದು ತಲೆನೋವಾಗಿ ಕಾಡುವುದೋ ಅದರ ಪರಿಹಾರವನ್ನೇ ಜಾಣ್ಮೆಯಿಂದ ಹೆಚ್ಚು ಉಪಯುಕ್ತವಾಗುವ ರೀತಿಯಲ್ಲಿ ಮಾಡಿಕೊಂಡರೆ, ನಮಗೆ ಹೆಚ್ಚುವರಿಯಾಗಿ ವ್ಯಯಿಸಿದ ಹಣ ಪೋಲಾಯಿತು ಎಂದೆನಿಸುವುದಿಲ್ಲ!
 
ಹೆಚ್ಚಿನ ಮಾಹಿತಿಗೆ :98441 32826

Advertisement

Udayavani is now on Telegram. Click here to join our channel and stay updated with the latest news.

Next