ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಬಿ) ವಿಮಾನಗಳ ಬೇಸಿಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಾಲ್ಕು ಹೊಸ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ.
ಮಾ.31ರಿಂದ ನಾಲ್ಕು ನೂತನ ಸ್ವದೇಶಿ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಪ್ರಾರಂಭವಾಗಲಿದ್ದು, ಸರಕು ಸಾಗಾಣಿಕೆಗೆ ಎರಡು ಹೆಚ್ಚುವರಿ ವಿಮಾನಗಳು ಸೇರ್ಪಡೆಯಾಗಲಿವೆ. ಆಗ್ರಾ, ನಾಸಿಕ್ (ಇಂಡಿಗೊ), ಗ್ವಾಲಿಯರ್ (ಸ್ಪೈಸ್ ಜೆಟ್) ಮತ್ತು ಜಾಮ್‌ನಗರ್ (ಸ್ಟಾರ್‌ಏರ್) ಮಾರ್ಗಗಳಲ್ಲಿ ವಿಮಾನ ಹಾರಾಟ ಪ್ರಾರಂಭವಾಗಲಿದ್ದು, ಈ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ತಡೆರಹಿತ ವಿಮಾನ ಹಾರಾಟ ಸೌಲಭ್ಯ ಸಿಗಲಿದೆ. ವಾರದಲ್ಲಿ 3ಬಾರಿ ಸೌದಿ ಅರೇಬಿಯಾದ ಬಡ್ಜೆಟ್ ಕ್ಯಾರಿಯರ್ ಫ್ಲೈನಾಸ್ ಸಂಸ್ಥೆ ಬೆಂಗಳೂರಿನಿಂದ ಜೆಡ್ಡಾಗೆ ವಿಮಾನ ಹಾರಾಟ ನಡೆಸಲಿದೆ.
ಕೆಐಎಬಿಯಿಂದ ಎ-350 ಸೇವೆಯನ್ನು ಪ್ರಾರಂಭಿಸಲಿರುವ ಮೊದಲ ವಿಮಾನಯಾನ ಸಂಸ್ಥೆ ಇದಾಗಿದೆ. ಮೇ 1ರಿಂದ ಸ್ಪೈಸ್ ಜೆಟ್ ಸಿಂಗಾಪುರ ಮತ್ತು ಅಬುದಾಬಿಗೆ ಹೆಚ್ಚುವರಿ ಹಾರಾಟ ಮತ್ತು ಮೇ 17 ರಿಂದ ಬೆಂಗಳೂರು ಮತ್ತು ಸಿಂಗಪುರದ ನಡುವೆ ಐಷಾರಾಮಿ “ಎ350-900′ ವಿಮಾನ ಹಾರಾಟವನ್ನು ಸಿಂಗಪುರ ಏರ್‌ಲೈನ್ಸ್ ಪ್ರಾರಂಭಿಸಲಿದೆ. ಈ ವಿಮಾನ ಹಾರಾಟ ವೇಳಾಪಟ್ಟಿ ಈ ವರ್ಷದ ಅ. 26ರ ವರೆಗೆ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.