ಗಂಗಾವತಿ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿರುವ ಕಾರಣ ಸದ್ಯ ಬೆಳೆದು ನಿಂತ ಭತ್ತದ ಬೆಳೆಗೆ ಜನವರಿವರೆಗೂ ನೀರು ಹರಿಸಬೇಕು. ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸದೇ ಕುಡಿಯಲು ಮಾತ್ರ ನೀರು ಹರಿಸಲು ಮುನಿರಾಬಾದ್‌ನಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯು ರೈತರ ವಿರೋಧದ ಮಧ್ಯೆ ತೀರ್ಮಾನ ಕೈಗೊಂಡಿದೆ.
ರವಿವಾರ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ರೈತರು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗವೂ ಜರುಗಿತು. ಈ ಭಾರಿ ಜಲಾನಯನ
ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯದಲ್ಲಿ 125 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸರಿಯಾಗಿ ನಿರ್ವಹಣೆ ಮಾಡದೇ ನೀರಿನ್ನು ಪೋಲು ಮಾಡಲಾಗಿದೆ.
ತೆಲಂಗಾಣ-ಆಂಧ್ರಪ್ರದೇಶಕ್ಕೆ ನದಿಯ ಮೂಲಕ ನೀರನ್ನು ಹರಿಸಲಾಗಿದ್ದು, ರಾಜ್ಯದ ರೈತರ ಹಿತ ಕಡೆಗಣಿಸಲಾಗಿದೆ.
ಜೂನ್-ಜುಲೈನಲ್ಲಿ ಐಸಿಸಿ ಸಭೆ ನಡೆಸಿ ಮುಂಚಿತವಾಗಿ ನೀರು ಹರಿಸಿದರೆ ಆಗಸ್ಟ್-ಸೆಪ್ಟಂಬರ್‌ನಲ್ಲಿ ಸುರಿದ ಮಳೆ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿತ್ತು. ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳ ಮತ್ತು ಕಾಲುವೆ ಇಲ್ಲದೇ ಇರುವ ಕಾರಣ ಕಾಲವೆಯ ಮೂಲಕ ನದಿಗೆ ನೀರು ಪೋಲಾಗಿ ಹರಿದು ಆಂಧ್ರಪ್ರದೇಶ ಸೇರಿದೆ ಇದಕ್ಕೆ ಸರಕಾರದ ನಿರ್ಲಕ್ಷ ಕಾರಣವಾಗಿದೆ ಎಂದು ರೈತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಐಸಿಸಿ ಅಧ್ಯಕ್ಷ ಸಚಿವ ವೆಂಕಟರಾವ್ ನಾಡಗೌಡ, ಕೊಪ್ಪಳ ಉಸ್ತುವಾರಿ ಸಚಿವ ಆರ್. ಶಂಕರ್, ಸಂಸದರಾದ ಕರಡಿ ಸಂಗಣ್ಣ, ವಿ.ಎಸ್. ಉಗ್ರಪ್ಪ, ಬಿ.ವಿ. ನಾಯಕ ಸೇರಿ ಅಚ್ಚುಕಟ್ಟು ವ್ಯಾಪ್ತಿ ಶಾಸಕರು, ಜನಪ್ರತಿನಿಧಿಗಳು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿದ್ದರು.
ಮಾಹಿತಿ ನೀಡದ ನಾಡಗೌಡ’ ತೀವ್ರ ಗೊಂದಲದಿಂದ ಕೂಡಿದ್ದ ಐಸಿಸಿ ಸಭೆಯಲ್ಲಿ ಆಡಳಿತಾರೂಢ ಜನಪ್ರತಿನಿಧಿ ಗಳು ಮತ್ತು ಬಿಜೆಪಿ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನೀರು ಪೋಲಾಗಲು ನೇರವಾಗಿ ಸರಕಾರ ಕಾರಣ ಎಂದು ಬಿಜೆಪಿ ಮುಖಂಡರು ಮತ್ತು ರೈತರು ಆರೋಪಿಸಿದಾಗ ಐಸಿಸಿ ಅಧ್ಯಕ್ಷ ಸಚಿವ ವೆಂಕಟರಾವ್ ನಾಡಗೌಡ ಮತ್ತು ಬಿಜೆಪಿ ರೈತ ಹೋರಾಟಗಾರ ತಿಪ್ಪೇರುದ್ರಸ್ವಾಮಿ ನಡುವೆ ವಾಗ್ವಾದ ಜರುಗಿತು. ಬೆಳಗ್ಗೆ 11ಕ್ಕೆ ಆರಂಭವಾದ ಸಭೆ
ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಈ ಮಧ್ಯೆ ಸಭೆಯಿಂದ ಮಾಧ್ಯಮದವರನ್ನು ಹೊರಗಿಡಲಾಗಿತ್ತು.
ಸಭೆ ಮುಕ್ತಾಯದ ನಂತರ ಐಸಿಸಿ ಅಧ್ಯಕ್ಷರು ಸಭೆಯಲ್ಲಿ ನಡಾವಳಿಕೆಯನ್ನು ಪತ್ರಿಕಾ ಮಾಧ್ಯಮದವರಿಗೆ ತಿಳಿಸುವುದು ವಾಡಿಕೆ. ಸಚಿವ ನಾಡಗೌಡ ಮಾಧ್ಯಮದವರಿಗೆ ಮಾಹಿತಿ ನೀಡದೇ ಪಲಾಯನ ಮಾಡಿದರು. ಪತ್ರಿಕಾಮಾಧ್ಯಮದವರನ್ನು ಹೊರಗಿಟ್ಟರೂ ಸಭೆಯಲ್ಲಿ ಕೆಲವರು ಸಭೆ ದೃಶ್ಯಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದು ಕಂಡು ಬಂತು.
ಜಲಾಶಯದ ನೀರು ಪೋಲಾಗಲು ನೇರವಾಗಿ ಸರಕಾರದ ನಿರ್ಲಕ್ಷÂ ಕಾರಣವಾಗಿದೆ. ಬೇಸಿಗೆ ಬೆಳೆಗೆ ನೀರು ಕೊಡದ ಸರಕಾರ ಅಚ್ಚುಕಟ್ಟು ಪ್ರದೇಶ ರೈತರಿಗೆ ಪ್ರತಿ ಐದು ಎಕರೆ 2 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕೃತಿ ಮಳೆ ನೀಡಿ ರೈತರಿಗೆ ಅನುಕೂಲ ಮಾಡಿದರೂ ಸಮಿಶ್ರ ಸರಕಾರದ ನಿರ್ಲಕ್ಷ Âದ ಫಲವಾಗಿ ರೈತರು ಈ ಭಾರಿಯೂ ಬರಗಾಲ ಅನುಭವಿಸುವ ಸ್ಥಿತಿಯುಂಟಾಗಿದೆ. ರೈತರನ್ನು ಸಂಘಟಸಿ ಸರಕಾರದ ವಿರುದ್ಧ ಹೋರಾಟ ರೂಪಿಸಲಾಗುತ್ತದೆ. ತಕ್ಕ ಪಾಠವನ್ನು ರೈತರು ಕಲಿಸಲಿದ್ದಾರೆ.
ತಿಪ್ಪೇರುದ್ರಸ್ವಾಮಿ, ರೈತ ಮುಖಂಡ.