ನವ ದೆಹಲಿ : ಮೃತರಾಗಿದ್ದಾರೆ ಎಂದು ಸುದ್ದಿಯನ್ನು ಖಚಿತ ಪಡಿಸಿಕೊಳ್ಳದೆ ವರದಿ ಮಾಡಲು ಅಷ್ಟೊಂದು ಆತುರವೇಕೆ..? ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಶುಕ್ರವಾರ (ಏಪ್ರಿಲ್ 23) ಕೇಳಿದ್ದಾರೆ.
ನಿನ್ನೆ(ಗುರುವಾರ, ಏಪ್ರಿಲ್ 22) ರಾತ್ರಿ ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮೃತರಾಗಿದ್ದಾರೆ ಎಂದು ಅನೇಕ ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಮಹಾಜನ್ ಈ ರೀತಿ ಪ್ರಶ್ನಿಸಿದ್ದಾರೆ.
ಇನ್ನು, ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡ ಸಂತಾಪ ಸೂಚಿಸಿದ್ದರು, ಆದರೆ ಮಹಾಜನ್ ಅವರ ಸೊಸೆ ಮತ್ತು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ, ಮಹಾಜನ್ ಅವರು ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ತರೂರ್ ತಮ್ಮ ಟ್ವೀಟ್ ನನ್ನು ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ : ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ
ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಿತ್ರಾ, ಪರಿಶೀಲನೆ ಮಾಡದೆ ಸುದ್ದಿ ವಾಹಿನಿಗಳು ನನ್ನ ನಿಧನದ ಬಗ್ಗೆ ವರದಿಯನ್ನು ಹೇಗೆ ಪಸರಿಸುತ್ತವೆ ? ನನ್ನ ಸೊಸೆ ತರೂರ್ ಅವರ ಟ್ವಿಟ್ ನನ್ನು ನಿರಾಕರಿಸಿದರು. ಸ್ಪಷ್ಟ ಮಾಹಿತಿಯಿಲ್ಲದೆ ಘೋಷಿಸುವ, ಪಸರಿಸುವ ತುರ್ತು ಏನಿದೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಸುಮಿತ್ರಾ ಮಹಾಜನ್ ಅವರ ಮಗ ಮಂದರ್, ವೀಡಿಯೋ ಮೂಲಕ ಮಾತನಾಡಿ, ತನ್ನ ತಾಯಿಯವರು ಆರೋಗ್ಯವಾಗಿದ್ದಾರೆ. ಅವರ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಗಮನ ನೀಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ಕೂಡ ತಿಳಿಸಿದ್ದಾರೆ.
ತರೂರ್ ಸಂತಾಪ ಸೂಚಿಸಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ, ಮಹಾಜನ್ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೈಲಾಶ್ ಅವರ ಮಾಹಿತಿಗೆ ಪ್ರತಿಕ್ರಿಯಿಸಿದ ಶಶಿ ತರೂರ್, ನಾನು ನನ್ನ ಟ್ವೀಟ್ ನನ್ನು ಡಿಲೀಟ್ ಮಾಡಿದ್ದೇನೆ. ಸುಳ್ಳು ಸುದ್ದಿಗಳನ್ನು ಹರಡಲು ಜನರನ್ನು ಏನು ಪ್ರೇರೇಪಿಸುತ್ತದೆ ಎನ್ನುವುದರ ಬಗ್ಗೆ ನನಗೆ ಆಶ್ಚರ್ಯವಾಗುತ್ತದೆ. ಸುಮಿತ್ರಾ ಜಿ ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ನನ್ನ ಶುಭಾಶಯಗಳು ”ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಸುಮಿತ್ರಾ ಮಹಾಜನ್ ಅವರಿಗೆ ಸಣ್ಣ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದೋರ್ ನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಈಗ ಅವರು ಗುಣಮುಖರಾಗಿದ್ದಾರೆ. ಅವರ ಕೋವಿಡ್ ವರದಿಯೂ ಕೂಡ ನೆಗೆಟಿವ್ ಬಂದಿದೆ ಎಂದು ಮಹಾಜನ್ ಅವರ ಆಪ್ತ ರಾಜೇಶ್ ಅಗರ್ ವಾಲ್ ಸುದ್ದಿ ಸಂಸ್ಥೆ ಪಿಟಿಐ ಗೆ ತಿಳಿಸಿದ್ದಾರೆ.
78 ವರ್ಷದ ಸುಮಿತ್ರಾ ಮಹಾಜನ್ ಅವರು 2014 ರಿಂದ 2019 ರವರೆಗೆ ಲೋಕಸಭಾ ಸ್ಪೀಕರ್ ಆಗಿದ್ದರು. ಈ ಹಿಂದೆ ಅವರು ಸಂಸತ್ತಿನಲ್ಲಿ ಇಂದೋರ್ ಲೋಕಸಭಾ ಕ್ಷೇತ್ರವನ್ನು ಎಂಟು ಬಾರಿ ಪ್ರತಿನಿಧಿಸಿದ್ದರು.
ಇದನ್ನೂ ಓದಿ : ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ